Groom killed bride: ಮದುವೆಗೆ ಕೆಲವೇ ಗಂಟೆಗಳ ಮೊದಲು ಸೀರೆ ಮತ್ತು ಹಣದ ವಿಚಾರಕ್ಕೆ ನಡೆದ ಜಗಳದಲ್ಲಿ ವರನೇ ವಧುವನ್ನು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ. ಒಂದೂವರೆ ವರ್ಷಗಳಿಂದ ಲಿವಿಂಗ್ ಟುಗೆದರ್‌ನಲ್ಲಿದ್ದ ಈ ಜೋಡಿಯ ಮದುವೆ ನಿಗದಿಯಾಗಿತ್ತು, ಆದರೆ ಜಗಳ ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ.

ಮದುವೆಗೆ ಕೆಲ ಗಂಟೆ ಮೊದಲು ವಧುವಿನ ಕತೆ ಮುಗಿಸಿದ ವರ

ಮದುವೆಗೆ ಕೆಲ ಸಮಯಕ್ಕೂ ಮೊದಲು ಸೀರೆಯ ವಿಚಾರಕ್ಕೆ ವಧು ಹಾಗೂ ವರನ ನಡುವೆ ಆರಂಭವಾದ ಜಗಳ ವಧುವಿನ ಕೊಲೆಯಲ್ಲಿ ಅಂತ್ಯವಾಗಿದೆ. ಗುಜರಾತ್‌ನ ಭಾವನಗರದಲ್ಲಿ ಈ ದುರಂತ ನಡೆದಿದೆ. ಇನ್ನೇನು ಆ ಜೋಡಿಯ ಮದುವೆಗೆ ಕೆಲ ಗಂಟೆಗಳಷ್ಟೇ ಬಾಕಿ ಇತ್ತು ಅಷ್ಟರಲ್ಲಿ ಈ ದುರಂತ ಸಂಭವಿಸಿದ್ದು, ಮದುವೆಯಾಗಿ ಹೊಸ ಜೀವನ ಆರಂಭಿಸಬೇಕಾದ ವಧು ಮಸಣ ಸೇರಿದ್ದಾಳೆ. ಶನಿವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಲೀವಿಂಗ್ ಟುಗೆದರ್ ಜೋಡಿಯ ಪ್ರೀತಿ ದುರಂತ ಅಂತ್ಯ

ಹೊಸದಾಗಿ ಹಸೆಮಣೆ ಏರಬೇಕಾದ ಈ ನವಜೋಡಿಯ ಮಧ್ಯೆ ಹಣ ಹಾಗೂ ಸೀರೆಯ ವಿಚಾರಕ್ಕೆ ಜಗಳ ನಡೆದಿದೆ. ನಂತರ ಪ್ರಭುದಾಸ್ ಕೆರೆ ಸಮೀಪದ ತೆಕ್ರಿ ಚೌಕ್‌ನಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಪೊಲೀಸರ ಪ್ರಕಾರ ಸಜನ್ ಬರೈಯಾ ಕೊಲೆ ಮಾಡಿದ ಆರೋಪಿ ಹಾಗೂ ಸೋನಿ ಹಿಮ್ಮತ್ ರಾಥೋಡ್ ಕೊಲೆಯಾದ ವಧು. ಇಬ್ಬರು ಒಂದೂವರೆ ವರ್ಷಗಳಿಂದ ಜೊತೆಯಾಗಿ ವಾಸ ಮಾಡುತ್ತಿದ್ದರು. ಅವರಿಬ್ಬರ ಮಧ್ಯೆ ಮದುವೆ ನಿಶ್ಚಿತಾರ್ಥವೂ ನಡೆದಿತ್ತು. ಇಬ್ಬರು ಬಹುತೇಕ ಎಲ್ಲಾ ಮದುವೆಯ ಸಂಪ್ರದಾಯಗಳನ್ನು ಪೂರ್ಣಗೊಳಿಸಿ ಆಗಿತ್ತು. ಹಾಗೂ ಭಾನುವಾರ ರಾತ್ರಿ ಇವರಿಬ್ಬರ ಮದುವೆ ನಡೆಯ ಬೇಕಿತ್ತು.

ಹಣ ಹಾಗೂ ಸೀರೆ ವಿಚಾರಕ್ಕೆ ಜೋಡಿಯ ಮಧ್ಯೆ ಹೊಡೆದಾಟ

ಆದರೆ ಈ ನಡುವೆ ಮದುವೆಗೆ ಇನ್ನೇನು ಕೆಲ ದಿನಗಳಿರಬೇಕಾದರೆ ವಧು ಹಾಗೂ ವರನ ಮಧ್ಯೆ ಹಣ ಹಾಗೂ ಸೀರೆಯ ವಿಚಾರಕ್ಕೆ ಜಗಳ ಶುರುವಾಗಿದೆ. ಇದೇ ಸಿಟ್ಟಿನಲ್ಲಿ ಸಜನ್ ಬರೈಯಾ ಕಬ್ಬಿಣದ ಪೈಪ್‌ನಿಂದ ಸೋನಿಯ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಆಕೆಯ ತಲೆಯನ್ನು ಗೋಡೆಗೆ ಚಚ್ಚಿದ್ದಾನೆ. ಪರಿಣಾಮ ಸೋನಿ ಸಾವನ್ನಪ್ಪಿದ್ದಾಳೆ. ಅಲ್ಲದೇ ಅಲ್ಲಿಂದ ಓಡಿ ಹೋಗುವುದಕ್ಕೂ ಮೊದಲು ಆರೋಪಿ ಮನೆಯಲ್ಲಿ ಕೂಡ ದಾಂಧಲೆ ಮಾಡಿ ಹಾನಿ ಮಾಡಿ ಹೋಗಿದ್ದಾನೆ. ಘಟನೆಯ ಬಳಿಕ ಅಕ್ಕಪಕ್ಕದ ಮನೆಯವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಪೋಷಕರ ವಿರೋಧದ ಮಧ್ಯೆಯೂ ಜೊತೆಯಾಗಿದ್ದ ಜೋಡಿ:

ಎರಡೂ ಕುಟುಂಬಗಳ ವಿರೋಧದ ನಡುವೆಯೂ ಈ ಜೋಡಿ ಜೊತೆಯಾಗಿ ವಾಸ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಇವರು ಲೀವಿಂಗ್ ಟುಗೆದರ್ ಇದ್ದರು. ನಿನ್ನೆಯಷ್ಟೇ ಅವರ ಮದುವೆ ನಿಗದಿಯಾಗಿತ್ತು. ಆದರೆ ಇಬ್ಬರ ಮಧ್ಯೆ ಸೀರೆ ಹಾಗೂ ಹಣದ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ಡಿಎಸ್‌ಪಿ ಆರ್ ಆರ್‌ ಸಿಂಘಲ್ ಹೇಳಿದ್ದಾರೆ.

ಕಬ್ಬಿಣದ ಪೈಪ್‌ನಿಂದ ವಧುವಿನ ತಲೆಗೆ ಹೊಡೆದು ಕೊಲೆ

ಗಲಾಟೆಯ ವೇಳೆ ಸಜನ್ ಸೋನಿಗೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ಮಾಡಿದ್ದಲ್ಲದೇ ಆಕೆಯ ತಲೆಯನ್ನು ಗೋಡೆಗೆ ಅಪ್ಪಳಿಸುವಂತೆ ಮಾಡಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಯೂ ನೆರೆಹೊರೆಯ ಮನೆಯವರೊಂದಿಗೆ ಅಂದು ಜಗಳವಾಡಿದ್ದ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರ ಜೊತೆಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಡೀಸೆಲ್‌ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಮೆಕ್ಕಾ ಯಾತ್ರಿಕರ ಬಸ್: 42 ಭಾರತೀಯ ಯಾತ್ರಿಕರ ಸಾವು

ಇದನ್ನೂ ಓದಿ: ಕಾಸರಗೋಡು: ಬಿಲ್ ಪಾವತಿಸದ್ದಕ್ಕೆ ಮನೆಯ ಪವರ್ ಕಟ್: ಸಿಟ್ಟಿಗೆದ್ದುಇಡೀ ಊರನ್ನೇ ಕತ್ತಲಲ್ಲಿಟ್ಟ ಯುವಕ!