ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲೇ ಗುಜರಾತ್‌ನಲ್ಲಿ ಭಾರಿ ವಿದ್ಯುತ್ ಕೊರತೆ ಎದುರಾಗಿದ್ದು, ಪ್ರತಿದಿನ 8 ಗಂಟೆಗಳ ಕಾಲ ಕರೆಂಟ್ ಕಟ್ ಮಾಡಲಾಗುತ್ತಿದೆ. ಇದರಿಂದಾಗಿ ಕೈಗಾರಿಕೆಗಳಿಗೆ ನಿತ್ಯ 1000 ಕೋಟಿ ರೂ. ನಷ್ಟವಾಗುತ್ತಿದ್ದು, 25 ಲಕ್ಷ ಕಾರ್ಮಿಕರ ಬದುಕು ಆತಂಕಕ್ಕೆ ಸಿಲುಕಿದೆ.
- ದಸರಾ, ದೀಪಾವಳಿ ಸಂದರ್ಭದಲ್ಲೇ ವಿದ್ಯುತ್ ಬರ. ವಸ್ತುಗಳ ಉತ್ಪಾದನೆಗೆ ಉದ್ಯಮಕ್ಕೆ ತೊಡಕು
- ಈ ರೀತಿಯ ವಿದ್ಯುತ್ ಕೊರತೆ 15 ವರ್ಷಗಳಲ್ಲೇ ಮೊದಲು. 25 ಲಕ್ಷ ಕಾರ್ಮಿಕರಿಗೆ ತೀವ್ರ ಆತಂಕ
- ವಿದ್ಯುತ್ ಸಿಗದ ಕಾರಣ ಪ್ರತಿ ದಿನ 8 ತಾಸು ಕರೆಂಟ್ ಕಟ್ ಮಾಡುತ್ತಿರುವ ಗುಜರಾತ್ ಸರ್ಕಾರ
ಅಹಮದಾಬಾದ್: ದಸರಾ, ದೀಪಾವಳಿ ವ್ಯಾಪಾರ ಭರ್ಜರಿಯಾಗಿ ನಡೆಯುವ ಹೊತ್ತಿನಲ್ಲೇ ಗುಜರಾತ್‌ನಲ್ಲಿ ಭಾರೀ ವಿದ್ಯುತ್ ಸಮಸ್ಯೆ ಎದುರಾಗಿದೆ. ಅಗತ್ಯ ಪ್ರಮಾಣದ ವಿದ್ಯುತ್ ಲಭ್ಯತೆ ಇಲ್ಲದ ಕಾರಣ ನಿತ್ಯವೂ ರಾಜ್ಯದಲ್ಲಿ 8 ಗಂಟೆಗಳ ಕಾಲ ಪವರ್ ಕಟ್ ಮಾಡಲಾಗುತ್ತಿದೆ. ಇದು ಉದ್ಯಮಗಳ ಮೇಲೆ ಭಾರೀ ಗಂಭೀರ ಪರಿಣಾಮ ಬೀರಿದ್ದು, ನಿತ್ಯ 1000 ಕೋಟಿ ರು.ಗೂ ಹೆಚ್ಚಿನ ನಷ್ಟವಾಗುತ್ತಿದೆ ಉದ್ಯಮ ವಲಯ ಗೋಳು ತೋಡಿಕೊಂಡಿದೆ.
ದಿನದ ಇಪ್ಪತ್ನಾಲ್ಕೂ ತಾಸು ಕರೆಂಟ್ ಪೂರೈಸಿಯೂ ವಿದ್ಯುತ್ ಮಿಗತೆ ರಾಜ್ಯವಾಗಿದ್ದ ಗುಜರಾತ್
ಜಾಗತಿಕ ಬಿಕ್ಕಟ್ಟು, ಗಗನಕ್ಕೇರಿರುವ ಕಲ್ಲಿದ್ದಲು, ಅನಿಲ ಬೆಲೆ, ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆಯಿಂದಾಗಿ ರಾಜ್ಯದಲ್ಲಿ ಅಗತ್ಯ ಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಮಾರುಕಟ್ಟೆಯಿಂದಲೂ ಅಗತ್ಯ ಪ್ರಮಾಣದ ವಿದ್ಯುತ್ ಸಿಗುತ್ತಿಲ್ಲ. ಜೊತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬೇಡಿಕೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಅ.16ರಂದು ರಾಜ್ಯದಲ್ಲಿ 574 ದಶಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದೆ. ಕಳೆದ ವರ್ಷ ಇದೇ ದಿನ 457 ದಶಲಕ್ಷ ಟನ್ ವಿದ್ಯುತ್ ಬಳಕೆಯಾಗಿತ್ತು. ಅಂದರೆ ಬಳಕೆಯಲ್ಲಿ ಶೇ.27ಕ್ಕೆ ಏರಿಕೆಯಾಗಿದೆ. ಆದರೂ ಅಗತ್ಯ ಪ್ರಮಾಣದ ವಿದ್ಯುತ್ ಪೂರೈಕೆ ಸಾಧ್ಯವಾಗದೇ ಸರ್ಕಾರ ನಿತ್ಯ 8 ಗಂಟೆ ವಿದ್ಯುತ್ ಕಡಿತ ಮಾಡುತ್ತಿದೆ.
ಈ ವರ್ಷ ಅಗತ್ಯ ಪ್ರಮಾಣದ ವಿದ್ಯುತ್ ಲಭ್ಯವಾಗಿಲ್ಲದ ಕಾರಣ ರಾಜ್ಯದಲ್ಲಿ ಭಾರಿ ಸಮಸ್ಯೆ
ಹೀಗಾಗಿ ದಸರಾ, ದೀಪಾವಳಿ ವೇಳೆ ಬೇಡಿಕೆಗೆ ತಕ್ಕಷ್ಟು ಅಗತ್ಯ ವಸ್ತುಗಳ ಉತ್ಪಾದನೆ ಮಾಡಲಾಗದೇ ರಾಜ್ಯದ ಉದ್ಯಮಗಳು ಸಂಕಷ್ಟದಲ್ಲಿ ಸಿಕ್ಕಿವೆ. ಇಂಥ ಬೃಹತ್ ವಿದ್ಯುತ್ ಕಡಿತ ಕಳೆದ 15 ವರ್ಷಗಳಲ್ಲಿ ಮೊದಲನೆಯದ್ದಾಗಿದ್ದು, ರಾಜ್ಯದ ವಿವಿಧ ಉದ್ಯಮಗಳನ್ನು ನಂಬಿಕೊಂಡ 25 ಲಕ್ಷ ಕಾರ್ಮಿಕರ ಜೀವನಕ್ಕೆ ಅಡ್ಡಿ ಉಂಟು ಮಾಡಲಿದೆ. ಜೊತೆಗೆ ಉದ್ಯಮಗಳಿಗೆ ನಿತ್ಯ 1000 ಕೋಟಿ ರು.ನಷ್ಟ ಉಂಟಾಗುತ್ತಿದೆ ಎಂದು ಗುಜರಾತ್‌ನ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಮುಖ್ಯಮಂತ್ರಿಗೆ ಪತ್ರ ಬರೆದಿದೆ.


