ಜೈಲಾಧಿಕಾರಿಗಳು ಜೈಲಿನಲ್ಲಿ ಕೈದಿಗಳ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಮೊಬೈಲ್ ಹೊಂದಿದ್ದ ಕೈದಿಯೊಬ್ಬ ಮೊಬೈಲ್ ಅನ್ನು ನುಂಗಿದ್ದಾನೆ. ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.  

ಪಾಟ್ನಾ: ಎಂತೆಂಥಾ ವಿಚಿತ್ರ ವ್ಯಕ್ತಿಗಳಿರ್ತಾರೆ ನೋಡಿ... ಜೈಲಿನಲ್ಲಿ ಕೈದಿಗಳು ಕಾಲೇಜು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಚ್ಚಿಟ್ಟುಕೊಂಡು ಬಳಕೆ ಮಾಡುವುದು ಸಾಮಾನ್ಯ. ಇದು ಮೇಲಾಧಿಕಾರಿಗಳಿಗೂ ತಿಳಿದಿರುತ್ತದೆ. ಇದೇ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಜೈಲಿನಲ್ಲಿ ಕೈದಿಗಳ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಮೊಬೈಲ್ ಹೊಂದಿದ್ದ ಕೈದಿಯೊಬ್ಬ ಮೊಬೈಲ್ ಅನ್ನು ನುಂಗಿದ್ದಾನೆ. ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಹೀಗೆ ಮೊಬೈಲ್ ನುಂಗಿದ ಕೈದಿಯನ್ನು ಖೈಶರ್ ಅಲಿ(Qaishar Ali) ಎಂದು ಗುರುತಿಸಲಾಗಿದೆ.

ಶನಿವಾರ ಜೈಲಿನಲ್ಲಿ ಮೇಲಾಧಿಕಾರಿಗಳು ಕೈದಿಗಳ ತಪಾಸಣೆ ಮಾಡಿದ್ದು, ಈ ವೇಳೆ ಖೈಶರ್ ಅಲಿ ಮೊಬೈಲ್ ನುಂಗಿದ್ದಾನೆ. ಆದರೆ ಭಾನುವಾರ ಈತನಿಗೆ ಜೋರಾಗಿ ಹೊಟ್ಟೆನೋವು ಶುರುವಾಗಿದ್ದು, ಇದರಿಂದ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆತ ಜೈಲು ಸಿಬ್ಬಂದಿಗೆ ತಾನು ಮೊಬೈಲ್ ನುಂಗಿರುವ ವಿಚಾರವನ್ನು ತಿಳಿಸಿದ್ದಾನೆ. ನಂತರ ಜೈಲಿನ ಅಧಿಕಾರಿಗಳು ಕೂಡಲೇ ಖೈಸರ್ ಅಲಿಯನ್ನು ಗೋಪಾಲ್‌ಗಂಜ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಅಲ್ಲಿ ಆತನಿಗೆ ಎಕ್ಸ್‌ ರೇ ಮಾಡಿದ್ದಾರೆ. ಅದರಲ್ಲಿ ಆತನ ಹೊಟ್ಟೆಯಲ್ಲಿ ಮೊಬೈಲ್ ತುಣುಕುಗಳು ಇರುವುದು ಕಾಣಿಸಿಕೊಂಡಿದೆ ಎಂದು ಗೋಪಾಲ್‌ಗಂಜ್ ಜೈಲಿನ (Gopalganj jail) ಸೂಪರಿಂಟೆಂಡೆಂಟ್ ಮನೋಜ್ ಕುಮಾರ್ (Manoj Kumar)ಹೇಳಿದ್ದಾರೆ. 

ಕೈದಿಯನ್ನು ತೀವ್ರ ಹೊಟ್ಟೆನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆತನನ್ನು ತಪಾಸಣೆಗೆ ಒಳಪಡಿಸಿ ಎಕ್ಸ್‌ ರೇ ಮಾಡಲಾಯಿತು. ಅದರಲ್ಲಿ ಆತನ ಹೊಟ್ಟೆಯಲ್ಲಿ ಕೆಲ ಗಟ್ಟಿ ತುಣುಕುಗಳು ಕಾಣಿಸಿಕೊಂಡವು. ಈ ಬಗ್ಗೆ ಕುಲಂಕೂಷವಾಗಿ ತನಿಖೆ ನಡೆಸಬೇಕಿದೆ ಎಂದು ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನ ವೈದ್ಯ ಸಲಾಂ ಸಿದ್ಧಿಕಿ (Salam Siddiqui) ಹೇಳಿದ್ದಾರೆ. 

ಜೈಲಿನಲ್ಲೇ ಇದ್ದ ಕೊಲೆ ಆರೋಪಿಗಾಗಿ 20 ವರ್ಷ ಹುಡುಕಾಡಿದ ಪೊಲೀಸರು..!

ಅಲ್ಲದೇ ಈ ಮೊಬೈಲ್ ನುಂಗಿದ ಕಳ್ಳನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವೈದ್ಯಕೀಯ ಮಂಡಳಿ ಪಾಟ್ನಾದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದೆ. ಖೈಸರ್ ಅಲಿಯನ್ನು 2020ರ ಜನವರಿ 17 ರಂದು ಗೋಪಾಲ್‌ಗಂಜ್‌ನ ಪೊಲೀಸರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ (NDPS Act) ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಬಂಧಿಸಿದ್ದು, ಕಳೆದ ಮೂರು ವರ್ಷಗಳಿಂದ ಆತ ಜೈಲಿನಲ್ಲಿದ್ದಾನೆ.

ಬಿಹಾರದ ಜೈಲಿನ (Bihar prisons) ಒಳಗೆ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದು ಭದ್ರತಾ ಅಧಿಕಾರಿಗಳ ಹುಬ್ಬೇರುವಂತೆ ಮಾಡಿದೆ. ಮಾರ್ಚ್ 2021 ರಲ್ಲಿ ಬಿಹಾರ ರಾಜ್ಯದಾದ್ಯಂತ ಜೈಲುಗಳಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 35 ಸೆಲ್‌ಫೋನ್‌ಗಳು, ಏಳು ಸಿಮ್ ಕಾರ್ಡ್‌ಗಳು ಮತ್ತು 17 ಸೆಲ್‌ಫೋನ್ ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕತಿಹಾರ್, ಬಕ್ಸರ್, ಗೋಪಾಲ್‌ಗಂಜ್(Gopalganj), ನಳಂದಾ, ಹಾಜಿಪುರ (Hajipur), ಆರಾ, ಜೆಹಾನಾಬಾದ್ (Jehanabad) ಮತ್ತು ರಾಜ್ಯದ ಇನ್ನು ಕೆಲವು ಜೈಲುಗಳಲ್ಲಿ ದಾಳಿ ಈ ದಾಳಿ ನಡೆಸಲಾಗಿತ್ತು. 

ಉತ್ತರಕನ್ನಡದಲ್ಲಿ ಜೈಲಿನಿಂದ ಪರಾರಿಯಾದ ಕೈದಿ ಬಂಧನ, ಮೈಸೂರಿನಲ್ಲಿ ಪೆರೋಲ್‌ ಮೇಲೆ ತೆರಳಿದ ಕೈದಿ ಭೂಗತ!