2025ರ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ.73ರಷ್ಟು ಹೆಚ್ಚಾಗಿದ್ದು, ₹4.2 ಲಕ್ಷ ಕೋಟಿ ತಲುಪಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಇದೇ ವೇಳೆ, ಪ್ರಧಾನಿ ಮೋದಿ 18ನೇ ರೋಜ್ಗಾರ್‌ ಮೇಳದಲ್ಲಿ 61,000 ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. 

ನವದೆಹಲಿ: 2025ನೇ ಹಣಕಾಸು ವರ್ಷದಲ್ಲಿ ಭಾರತಕ್ಕೆ 4.2 ಲಕ್ಷ ಕೋಟಿ ರು.ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.73ರಷ್ಟು ಭಾರೀ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಜಾತಗತಿ ಹೂಡಿಕೆಗಳ ಮೇಲೆ ಕಣ್ಗಾವಲು ಇಡುವ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಮಂಡಳಿಯ ವರದಿ ಅನ್ವಯ, 2025ನೇ ಸಾಲಿನಲ್ಲಿ ಭಾರತದಲ್ಲಿ ಐಟಿ, ಸೇವೆ, ಉತ್ಪಾದನೆ, ಸಂಶೋಧನೆ ವಲಯದಲ್ಲಿ ಹೆಚ್ಚಿನ ಹಣ ಹೂಡಿಕೆಯಾಗಿದೆ. ಈ ವಲಯಗಳ ಉತ್ತೇಜನಕ್ಕೆ ಸರ್ಕಾರ ಘೋಷಿಸಿದ ಕ್ರಮಗಳು ಇದಕ್ಕೆ ನೆರವಾಗಿದೆ ಎಂದು ವರದಿ ಹೇಳಿದೆ.

ಇದೇ ವೇಳೆ ಸತತ ಮೂರನೇ ವರ್ಷ ಕೂಡಾ ಚೀನಾದಲ್ಲಿ ಎಫ್‌ಡಿಎ ಹೂಡಿಕೆ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಚೀನಾದಲ್ಲಿ 9.67 ಲಕ್ಷ ಕೋಟಿ ರು. ಎಫ್‌ಐಡಿ ಹೂಡಿಕೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.8ರಷ್ಟು ಇಳಿಕೆ ಎಂದು ವರದಿ ಹೇಳಿದೆ.

ಇಂದು 18ನೇ ರೋಜ್ಗಾರ್‌ ಮೇಳ: 61,000 ಮಂದಿಗೆ ಮೋದಿ ನೇಮಕಾತಿ ಪತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 18ನೇ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದು, 61000ಕ್ಕೂ ಹೆಚ್ಚಿನ ಜನರಿಗೆ ನೇಮಕಾತಿ ಪತ್ರವನ್ನು ವಿತರಿಸಲಿದ್ದಾರೆ. 2022ರಲ್ಲಿ ಉದ್ಯೋಗ ಮೇಳ ಆರಂಭವಾದಾಗಿನಿಂದ ಇಲ್ಲಿವರೆಗೆ 11 ಲಕ್ಷ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ.

ಶನಿವಾರ 18ನೇ ಉದ್ಯೋಗ ಮೇಳವು ದೇಶದ 45 ಸ್ಥಳಗಳಲ್ಲಿ ನಡೆಯಲಿದೆ. ಕಳೆದ ವರ್ಷ ಅಕ್ಟೋಬರ್‌ 24ರಂದು ನಡೆದ 17ನೇ ಮೇಳದಲ್ಲಿ ಪ್ರಧಾನಿ ಮೋದಿ ಅವರು 51,000 ಜನರಿಗೆ ನೇಮಕ ಪತ್ರವನ್ನು ವಿತರಿಸಿದ್ದರು. ಅದಾದ ಬಳಿಕ ನಡೆಯುತ್ತಿರುವ ಮೊದಲ ಮೇಳ ಇದಾಗಿದೆ. ಪ್ರಧಾನಿ ಮೋದಿ ಅವರು ರೋಜ್ಗಾರ್‌ ಮೇಳದ ಆರಂಭದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದ್ದರು.

ಮತಪಟ್ಟಿ ಪರಿಷ್ಕರಣೆ ಒತ್ತಡಕ್ಕೆ ರಾಜ್ಯದಲ್ಲಿ 110 ಸಾವು: ಮಮತಾ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಗೆ (ಎಸ್‌ಐಆರ್‌) ಒತ್ತಡಕ್ಕೆ ಒಳಗಾಗಿ ಪ್ರತಿ ದಿನ 3-4 ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇಲ್ಲಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಈಗಾಗಲೇ 110ಕ್ಕೂ ಹೆಚ್ಚಿನ ಜನರು ಎಸ್‌ಐಆರ್‌ನ ಒತ್ತಡ, ಕಿರುಕುಳದಿಂದ ಮೃತಪಟ್ಟಿದ್ದಾರೆ. ಪ್ರತಿ ದಿನ 3-4 ಜನರು ಅಸುನೀಗುತ್ತಿದ್ದಾರೆ. 40-45 ಜನರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕೇಂದ್ರ ಮತ್ತು ಚುನಾವಣಾ ಆಯೋಗ ಇದರ ಜವಾಬ್ದಾರಿ ಹೊರಬೇಕು’ ಎಂದು ಆಗ್ರಹಿಸಿದರು.