ಪುಲ್ವಾಮಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ತಂದೆ!
* ಭಾರತೀಯರಿಗಿಂದು 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ
* ಕಣಿವೆ ನಾಡುವ ಜಮ್ಮು ಕಾಶ್ಮೀರದಲ್ಲಿ ಹಾರಿದ ತ್ರಿವರ್ಣ ಧ್ವಜ
* ಪುಲ್ವಾಮಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ತಂದೆ
ಪುಲ್ವಾಮಾ(ಆ.15): ಭಾರತೀಯರಿಗಿಂದು 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ. ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡು ಅನುಭವಿಸಿದ ಸ್ವಾತಂತ್ರ್ಯದ ಸಂಭ್ರಮ ಇಂದು ಕಾಶ್ಮೀದಿಂದ ಕನ್ಯಾಕುಮಾರಿವರೆಗೆ ದೇಶದ ಮೂಲೆ ಮೂಲೆಯಲ್ಲೂ ಅತ್ಯಂತ ಹೆಮ್ಮೆಯಿಂದ ಆಚರಿಸಲಾಗಿದೆ. ಈ ಅಮೃತ ಮಹೋತ್ಸವದ ಹರ್ಷಾಚರಣೆ ದೇಶದೆಲ್ಲೆಡೆ ಹಬ್ಬದ ವಾತಾವರಣ ಮೂಡಿಸಿದೆ. ಹೀಗಿರುವಾಗ ದೇಶದ ನಾನಾ ಕಡೆ ಸೈನಿಕರಿಂದ ಜನಸಾಮಾನ್ಯರವರೆಗೆ ಸ್ವಾತಂತ್ರ್ಯ ದಿನ ಹೇಗೆ ಆಚರಣೆ ಮಾಡಲಾಯ್ತು ಎಂಬ ಸುದ್ದಿಗಳು ಸದ್ದು ಮಾಡುತ್ತಿವೆ. ಇವೆಲ್ಲದರ ನಡುವೆ ಸದ್ಯ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್, ಬುರ್ಹಾನ್ ವಾನಿಯ ತಂದೆ ಪುಲ್ವಾಮಾದ ಟ್ರಾಲ್ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿರುವ ಫೋಟೋ ಭಾರೀ ವೈರಲ್ ಆಗಿದೆ.
ಹೌದು 2016ರಲ್ಲೇ ಹತ್ಯೆಗೀಡಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಪುಲ್ವಾಮಾದ ಟ್ರಾಲ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಇನ್ನು ವೃತ್ತಿಯಲ್ಲಿ ಮುಜಾಫರ್ ವಾನಿ ಇಲ್ಲಿನ ಸರ್ಕಾರಿ ಮಾಧ್ಯಮಿಕ ಶಾಲೆಯ ಪ್ರಿನ್ಸಿಪಾಲ್ ಆಗಿದ್ದಾರೆ. ಹೀಗಾಗಿ ಶಿಷ್ಟಾಚಾರದಂತೆ ಧ್ವಜಾರೋಹಣ ಮಾಡಿದ್ದಾರೆ.
ರಾಜೀನಾಮೆ ನೀಡಿಲ್ಲ
ಇನ್ನು ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಸಂಭ್ರಮ. ಈ ಹಿನ್ನೆಲೆಯಲ್ಲಿ ಕಣಿವೆ ನಾಡು ಜಮ್ಮು-ಕಾಶ್ಮೀರದ ಎಲ್ಲಾ ಸರ್ಕಾರಿ ಕಚೇರಿ, ಶೈಕ್ಷಣಿಕ ಸಂಸ್ಥೆಯಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು ಎಂದು ಸ್ಥಳೀಯ ಆಡಳಿತ ಆದೇಶಿಸಿತ್ತು. ಆದರೆ ಈ ಆದೇಶದ ಬೆನ್ನಲ್ಲೇ ತ್ರಿವರ್ಣ ಧ್ವಜ ಹಾರಿಸುವುದನ್ನು ವಿರೋಧಿಸಿ ಮುಜಾಫರ್ ವಾನಿ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಶನಿವಾರ ಭಾರೀ ಚರ್ಚೆ ಹುಟ್ಟಿಸಿತ್ತು. ಈ ಸುದ್ದಿ ಬೆಂಕಿಯಂತೆ ಹಬ್ಬಿಕೊಂಡಿದ್ದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ವಾನಿ ತಾನು ರಾಜೀನಾಮೆ ನೀಡಿಲ್ಲ ಎಂದಿದ್ದರು. ಈ ಎಲ್ಲಾ ವಿವಾದಗಳ ಮಧ್ಯೆ ಮುಜಾಫರ್ ವಾನಿ ಧ್ವಜಾರೋಹಣ ಮಾಡಿರುವುದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.
ಯಾರು ಬುರ್ಹಾನ್ ವಾನಿ
ಮುಜಾಫರ್ ವಾನಿ ಪುತ್ರ ಬುರ್ಹಾನ್ ವಾನಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ. ಈತ ಸೋಷಿಯಲ್ ಮೀಡಿಯಾಗಳ ಮೂಲಕ ಕಾಶ್ಮೀರಿ ಯುವಕರನ್ನು ಉಗ್ರಸಂಘಟನೆಗೆ ಸೆಳೆಯುವ ಕೆಲಸ ಮಾಡುತ್ತಿದ್ದ. 2016ರಲ್ಲಿ ಈತನ ವಿರುದ್ಧ ಕಾರ್ಯಾಚರಣೆ ನಡೆಸಿ, ಹತ್ಯೆಗೈಯ್ಯಲಾಗಿತ್ತು. ಇನ್ನು ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಐಪಿಎಸ್ ಅಧಿಕಾರಿ ಅಬ್ದುಲ್ ಜಬ್ಬರ್ಗೆ, ಕಳೆದ ವರ್ಷ ಗಣರಾಜ್ಯೋತ್ಸವದಂದು ಪೊಲೀಸ್ ಮೆಡಲ್ ಕೊಟ್ಟು ಸನ್ಮಾನಿಸಲಾಗಿತ್ತು.
15ನೇ ವಯಸ್ಸಿಗೆ ಮನೆಯಿಂದ ದೂರ
ಬುರ್ಹಾನ್ ತನ್ನ 15ನೇ ವಯಸ್ಸಿನಲ್ಲಿ ಮನೆಬಿಟ್ಟು ಓಡಿ ಹೋಗಿದ್ದ. 2010ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿಕೊಂಡಿದ್ದ. ಇನ್ನು ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಸುಮಾರು 5 ತಿಂಗಳ ಕಾಲ ಆತನ ಬೆಂಬಲಿಗರು ಮುಷ್ಕರ ನಡೆಸಿದ್ದರು. ಈ ಘರ್ಷಣೆಯಲ್ಲಿ ಸುಮಾರು ನೂರು ಮಂದಿ ಸಾವನ್ನಪ್ಪಿದ್ದರು. ಆದರೀಗ ಇಂತಹ ಬಹುದೊಡ್ಡ ಉಗ್ರನ ತಂದೆ ರಾಷ್ಟ್ರಧ್ವಜ ಹಾರಿಸಿದ್ದು ಭಾರೀ ಪ್ರಶಂಸೆಗೆ ಕಾರಣವಾಗಿದೆ.