ಹೋರಾಟ ತೀವ್ರಗೊಳಿಸಲು ರೈತ ಸಂಘಟನೆ ನಿರ್ಧಾರ, ಮಾ.10ಕ್ಕೆ ದೇಶಾದ್ಯಂತ ರೈಲು ತಡೆ!
ವಿವಿಧ ಬೇಡಿಕೆಗಳ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದೀಗ ಮಾರ್ಚ್ 10ಕ್ಕೆ ದೇಶಾದ್ಯಂತ ರೈಲು ತಡೆ ನಡೆಸುವುದಾಗಿ ಘೋಷಿಸಿದ್ದಾರೆ. ರೈತರ ಈ ನಡೆ ಜನಸಾಮಾನ್ಯರ ಮೇಲೆ ಭಾರಿ ಪರಿಣಾಮ ಬೀರಲಿದೆ. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ನಿರ್ಧರಿಸಿದ್ದಾರೆ.
ನವದೆಹಲಿ(ಮಾ.03) ದಿಲ್ಲಿ ಚಲೋ ಮೂಲಕ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಲಾಗಿದೆ. ಇದೀಗ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಪುನರ್ ಆರಂಭಿಸಲು ಸಜ್ಜಾಗಿದ್ದಾರೆ. ಮಾರ್ಚ್ 10ಕ್ಕೆ ದೇಶಾದ್ಯಂತ ರೈಲು ತಡೆ ನಡೆಸಿ ಪ್ರತಿಭಟನೆ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ಮಾರ್ಚ್ 10 ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ರೈಲು ತಡೆ ನಡೆಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದಾರೆ.
ರೈಲು ತಡೆ ಕುರಿತು ರೈತ ನಾಯಕ ಸರ್ವನ್ ಸಿಂಗ್ ಪಂಧೆರ್ ಹಾಗೂ ಜಗಜೀತ್ ಸಿಂಗ್ ಧಲ್ಲೆವಾಲ್ ಘೋಷಣೆ ಮಾಡಿದ್ದಾರೆ. ಸದ್ಯ ಹರ್ಯಾಣ ಹಾಗೂ ಪಂಜಾಬ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮಾರ್ಚ್ 6 ರಂದು ದಿಲ್ಲಿ ಚಲೋ ಪ್ರತಿಭಟನೆ ಮೂಲಕ ಮತ್ತೆ ರಾಜಧಾನಿಯತ್ತ ಆಗಮಿಸಲಿದ್ದಾರೆ ಎಂದಿದ್ದಾರೆ. ರೈತರು ಪ್ರತಿಭಟನೆಯನ್ನು ಮುಂದುವರಿಸುತ್ತಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ದೆಹಲಿ ಮಾತ್ರವಲ್ಲ ಯೂರೋಪ್‌ನಲ್ಲಿ ಬೀದಿಗಿಳಿದ ರೈತರು; ಟ್ರಾಕ್ಟರ್,ಜೆಸಿಬಿ ಬಳಸಿ ರಸ್ತೆ ತಡೆ!
ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಲಿದ್ದಾರೆ. ನಾವು ಟ್ರಾಕ್ಟರ್ ಹಾಗೂ ಇತರ ಭಾರಿ ವಾಹನಗಳಲ್ಲಿ ಆಗಮಿಸಿದ ಕಾರಣ ನಮಗೆ ದೆಹಲಿ ಒಳ ಪ್ರವೇಶಿಸಲು ಅವಕಾಶ ನೀಡಿಲ್ಲ. ಈ ಬಾರಿ ರೈತರು ರೈಲು , ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆ ಮೂಲಕ ದೆಹಲಿಗೆ ತಲುಪಲಿದ್ದಾರೆ. ರೈತರು ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಬೇಡಿಕೆಗೆ ಆಗ್ರಹ ಮಾಡಲಿದ್ದಾರೆ. ಹೀಗಾಗಿ ಸರ್ಕಾರ ರೈತರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದಿದ್ದಾರೆ.
ರೈತ ಪ್ರತಿಭಟನೆ ಕೇವಲ 2 ರಾಜ್ಯಗಳಿಗೆ ಸೀಮಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಇದು ಎರಡು ರಾಜ್ಯಗಳಿಗೆ ಮಾತ್ರವಲ್ಲ, ಇಡೀ ದೇಶದ ರೈತರ ಒಳಿತಿಗಾಗಿ ಪ್ರತಿಭಟನೆ. 2 ರಾಜ್ಯ ಎಂದಿರುವ ಕೇಂದ್ರ ಸರ್ಕಾರಕ್ಕೆ ರೈತ ಪ್ರತಿಭಟನೆಯ ತೀವ್ರತೆ ತಿಳಿಸಲು ರೈಲು ತಡೆ ನಡೆಸಲಾಗುತ್ತದೆ. ಮಾರ್ಚ್ 10ಕ್ಕೆ ರೈಲು ತಡೆ ನಡೆಸಿ ದೇಶಾದ್ಯಂತ ರೈತ ಪ್ರತಿಭಟನೆ ತೀವ್ರತೆ ಮನದಟ್ಟಾಗಲಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಮತ್ತೆ ಅನ್ನದಾತ-ಪೊಲೀಸರ ಸಂಘರ್ಷ: ಇನ್ಸ್‌ಪೆಕ್ಟರ್‌ಗೆ ಗಾಯ, ರೈತರ ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಪಂಜಾಬ್ ಪಂಚಾಯತ್‌ಗಳು ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಬೇಕು. ರೈತರಿಗೆ ನೆರವಾಗುವ ಮೂಲಕ ಬೇಡಿಕೆಗೆ ಈಡೇರಿಕೆಗೆ ಸಹಕರಿಸಬೇಕು ಎಂದು ರೈತ ಮುಖಂಡರು ಹೇಳಿದ್ದಾರೆ.