ಗಾಜಿಯಾಬಾದ್‌(ಫೇ.07): ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲೇಬೇಕು ಎಂಬ ಹಠಕ್ಕೆ ಅಂಟಿಕೊಂಡಿರುವ ರೈತ ಸಂಘಟನೆಗಳು, ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಗಾಂಧೀ ಜಯಂತಿ ದಿನವಾದ ಅ.2ರ ಗಡುವು ನೀಡಿವೆ.

ಈ ಕುರಿತು ಶನಿವಾರ ಇಲ್ಲಿ ಹೇಳಿಕೆ ನೀಡಿರುವ ಭಾರತೀಯ ಕಿಸಾನ್‌ ಮೋರ್ಚಾ ನಾಯಕ ರಾಕೇಶ್‌ ಟಿಕಾಯತ್‌ ‘ನಮ್ಮ ಬೇಡಿಕೆ ಈಡೇರುವವರೆಗೂ ನಾವು ಹಿಂದಿರುಗುವುದಿಲ್ಲ. ನಾವು ಸರ್ಕಾರಕ್ಕೆ ಅ.2ರ ಗಡುವು ನೀಡುತ್ತಿದ್ದೇವೆ. ಅಷ್ಟರೊಳಗೆ ಬೇಡಿಕೆ ಈಡೇರದೇ ಇದ್ದಲ್ಲಿ, ಆಗ ಮತ್ತೆ ಹೋರಾಟದ ರೂಪುರೇಷೆ ನಿರ್ಧರಿಸಲಿದ್ದೇವೆ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ಸರ್ಕಾರದ ಜೊತೆ ಮಾತುಕತೆ ನಡೆಸುವುದಿಲ್ಲ’ ಎಂದು ಘೋಷಿಸಿದ್ದಾರೆ

ಇದೇ ವೇಳೆ ‘ರೈತರು ಶನಿವಾರ ಕರೆಕೊಟ್ಟಿದ್ದ ‘ಚಕ್ಕಾ ಜಾಮ್‌’ ಶಾಂತಿಯುತ ಪ್ರತಿಭಟನೆಯನ್ನು ಹಾಳುಗೆಡವಲು ಕೆಲ ಕಿಡಿಗೇಡಿಗಳು ಯೋಜನೆ ರೂಪಿಸಿದ್ದ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದೇವೆ’ ಎಂದು ತಿಳಿಸಿದರು. ಇದೇ ವೇಳೆ ರೈತರ ಭೂಮಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಅದನ್ನು ರೈತರೇ ಕಾಪಾಡಿಕೊಳ್ಳುತ್ತಾರೆ ಎಂದು ಗುಡುಗಿದರು.

ಹೊಸ ಕೃಷಿ ಕಾಯ್ದೆ ವಿರೋಧಿಸಿ ಕಳೆದ ನವೆಂಬರ್‌ನಿಂದ ರಾಷ್ಟ್ರರಾಜಧಾನಿ ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ ಗಡಿಗಳಲ್ಲಿ ಸಾವಿರರು ರೈತರು ಬೀಡುಬಿಟ್ಟು ಪ್ರತಿಭಟಿಸುತ್ತಿದ್ದಾರೆ.