ನವದೆಹಲಿ(ಡಿ.27): 3 ಕೃಷಿ ಕಾಯ್ದೆಗಳ ವಾಪಸ್‌ಗೆ ಒತ್ತಾಯಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯ ಗಡಿಗಳಲ್ಲಿ ಕಳೆದೊಂದು ತಿಂಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಮಾತುಕತೆಗೆ ಬನ್ನಿ ಎಂಬ ಕೇಂದ್ರ ಸರ್ಕಾರದ ಕೂಗಿಗೆ ಕೊನೆಗೂ ಓಗೊಟ್ಟಿವೆ.

ಡಿಸೆಂಬರ್‌ 29ರಂದು ಸರ್ಕಾರದ ಜೊತೆ ಮುಂದಿನ ಹಂತದ ಮಾತುಕತೆಗೆ ಸಿದ್ಧರಿರುವುದಾಗಿ 40 ರೈತ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ್‌ ಮೋರ್ಚಾ ಶನಿವಾರ ಹೇಳಿದೆ. ರೈತರ ಕೋರಿಕೆಯನ್ನು ಸರ್ಕಾರ ಪುರಸ್ಕರಿಸಿದಲ್ಲಿ ನಾಡಿದ್ದು ರೈತರು ಮತ್ತು ಸರ್ಕಾರದ ಮಧ್ಯೆ ಮಾತುಕತೆ ನಡೆಯುವ ಸಾಧ್ಯತೆಯಿದೆ.

ಬ್ರಿಟನ್‌ನಿಂದ ಬಂದ 8 ಮಂದಿಯಲ್ಲಿ ಕೊರೋನಾ: ಕೇರಳದಲ್ಲಿ ಹೈ ಅಲರ್ಟ್

ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘಟನೆಗಳ ನಾಯಕರು, ‘ಕೃಷಿ ಕಾಯ್ದೆಗಳ ಹಿಂಪಡೆತ, ರೈತರ ಬೆಳೆಗಳಿಗೆ ನೀಡಲಾಗುವ ಬೆಂಬಲ ಬೆಲೆ ಈ ಮಾತುಕತೆಯ ಭಾಗವಾಗಿರಬೇಕು’ ಎಂದು ಒತ್ತಾಯಿಸಿವೆ. ಅಲ್ಲದೆ ರಾಷ್ಟ್ರ ರಾಜಧಾನಿ ವ್ಯಾಪ್ತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಾಯು ನಿರ್ವಹಣೆ ಕುರಿತಾದ ಆಯೋಗದಲ್ಲಿ ವಿಧಿಸಲಾಗುವ ದಂಡ ಅಥವಾ ಶಿಕ್ಷೆ ವ್ಯಾಪ್ತಿಯಿಂದ ರೈತರಿಗೆ ವಿನಾಯ್ತಿ ನೀಡಬೇಕು. ರೈತರ ಅನುಕೂಲಕ್ಕಾಗಿ ವಿದ್ಯುತ್‌ ತಿದ್ದುಪಡಿ ಮಸೂದೆ-2020ಯಲ್ಲಿ ಬದಲಾವಣೆ ಸೇರಿದಂತೆ ಇನ್ನಿತರ ಷರತ್ತುಗಳನ್ನೊಳಗೊಂಡ ಮಾತುಕತೆಯ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ.

ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗದೇ ಇದ್ದಲ್ಲಿ, ಡಿ.30ರಂದು ದೆಹಲಿಯಲ್ಲಿ ಬೃಹತ್‌ ಟ್ರಾಕ್ಟರ್‌ ಮೆರವಣಿಗೆ ನಡೆಸುತ್ತೇವೆ. ಈ ಜಾಥಾದಲ್ಲಿ ಭಾಗವಹಿಸಲು ದೇಶಾದ್ಯಂತ ಇರುವ ಎಲ್ಲಾ ರೈತರನ್ನು ಆಹ್ವಾನಿಸಲಾಗುತ್ತದೆ. ದೆಹಲಿಯ ಹೆದ್ದಾರಿಗಳು ರೈತರಿಂದ ಬಂದ್‌ ಆಗಬಾರದು ಎಂದಾದರೆ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ಅನ್ನದಾತರ ಮನವಿಯನ್ನು ಪುರಸ್ಕರಿಸಲೇಬೇಕು ಎಂದಿದ್ದಾರೆ.

ಮಾಫಿಯಾ ನಿಲ್ಸಿ, ಇಲ್ಲಾಂದ್ರೆ ಗುಂಡಿಯಲ್ಲಿ ಹೂಳುವೆ: ಸಿಎಂ ವಾರ್ನಿಂಗ್

ಅಲ್ಲದೆ ರೈತರ ಈ ಚಳವಳಿಯನ್ನು ದೂಷಿಸಲು ಮತ್ತು ರೈತ ಸಂಘಟನೆಗಳಿಗೆ ಮಸಿ ಬಳಿಯಲು ಇಡೀ ಸರ್ಕಾರವೇ ಯತ್ನಿಸುತ್ತಿದ್ದು, ಇದು ಮೊದಲು ನಿಲ್ಲಬೇಕು ಎಂದು ರೈತರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.