ಪಹಲ್ಗಾಂ ಉಗ್ರ ದಾಳಿಯಿಂದ ಶಿರಸಿಯ ಕುಟುಂಬವೊಂದು ಕೂದಲೆಳೆಯ ಅಂತರದಿಂದ ಪಾರಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಮಗ ಹಠ ಮಾಡಿದ್ದಕ್ಕೆ ತಿಂಡಿ ಕೊಡಿಸಲು ಹೋದ ಕಾರಣ, ಪ್ರದೀಪ್ ಹೆಗಡೆ ಕುಟುಂಬ ಭಯೋತ್ಪಾದಕರಿಂದ ಜೀವ ಉಳಿಸಿಕೊಂಡಿದೆ.

ನವದೆಹಲಿ (ಏ.30): ಪಹಲ್ಗಾಂ ಉಗ್ರ ದಾಳಿಯಿಂದ ಶಿರಸಿಯ ಕುಟುಂಬವೊಂದು ಕೂದಲೆಳೆಯ ಅಂತರದಿಂದ ಪಾರಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಮಗ ಹಠ ಮಾಡಿದ್ದಕ್ಕೆ ತಿಂಡಿ ಕೊಡಿಸಲು ಹೋದ ಕಾರಣ, ಪ್ರದೀಪ್ ಹೆಗಡೆ ಕುಟುಂಬ ಭಯೋತ್ಪಾದಕರಿಂದ ಜೀವ ಉಳಿಸಿಕೊಂಡಿದೆ.

ಶಿರಸಿಯ ಪ್ರದೀಪ್ ಹೆಗಡೆ ಮತ್ತು ಶುಭಾ ಹೆಗಡೆ ದಂಪತಿ ತಮ್ಮ ಪುತ್ರ ಸಿದ್ಧಾಂತ್‌ ಜೊತೆ ಏ.21ರಂದಯ ಶ್ರೀನಗರ ತೆರಳಿ, 22 ರಂದು ಪಹಲ್ಗಾಂಗೆ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ 1.45ರ ಸುಮಾರಿಗೆ ಬೈಸರನ್ ಕಡೆಗೆ ಕುಟುಂಬ ಹೋಗುತ್ತಿದ್ದಾಗ ಪುತ್ರ ಹಸಿವಾಗುತ್ತಿದೆ ಎಂದು ಹೇಳಿ ತಿಂಡಿಗಾಗಿ ಹಠ ಹಿಡಿದಿದ್ದಾನೆ. ಆದ್ದರಿಂದ ದಂಪತಿ ಅಲ್ಲೇ ಸ್ಥಾಪಿಸಲಾಗಿದ್ದ ಆಹಾರ ಮಳಿಗೆಗೆ ಮಗನಿಗೆ ತಿಂಡಿ ಕೊಡಿಸಲು ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಿಂದ ಜೀವ ಉಳಿಸಿದ ದೇವರಿಲ್ಲದ ದೇವಸ್ಥಾನ!

ಆ ಸಮಯದಲ್ಲಿ ಗುಂಡಿನ ಸದ್ದು ಕಿವಿಗೆ ಬಿದ್ದಿದೆ. ಆರಂಭದಲ್ಲಿ ಪಟಾಕಿ ಸದ್ದು ಎಂದು ಭಾವಿಸಿದ್ದಾರೆ. ಕಡೆಗೆ ಭಯೋತ್ಪಾದಕ ಬಂದೂಕು ಹಿಡಿದು ಗುಂಡು ಹಾರಿಸುತ್ತಿರುವುದು ಕಾಣಿಸಿದೆ. ಏನೂ ಗೊತ್ತಾಗದೇ ದಂಪತಿ ಸ್ಥಳದಲ್ಲೇ ಮಲಗಿಕೊಂಡಿದ್ದಾರೆ. ಈ ನಡುವೆ ಶುಭಾ ಟೇಬಲ್‌ ಮೇಲಿದ್ದ ಬ್ಯಾಗ್ ಎತ್ತಿಕೊಳ್ಳಲು ಪ್ರಯತ್ನಿಸಿದಾಗ ಬುಲೆಟ್‌ ಕಿವಿ ಪಕ್ಕದಲ್ಲೇ ಪಾಸಾಗಿತ್ತು. ಆ ಬಳಿಕ ಸ್ಥಳೀಯರು ಬಂದು ಓಡಲು ಹೇಳಿದ್ದಾರೆ. ಅದರಂತೆ ಭಯಗೊಂಡು ಪ್ರದೀಪ್ ಹೆಗಡೆ ಕುಟುಂಬ ಎದ್ದು ಓಡಿ ಹೋಗಿ ಜೀವ ಉಳಿಸಿಕೊಂಡಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ಪ್ರತಿಭಟನೆ

ಹುಣಸಗಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಹುಣಸಗಿ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ಪ್ರತಿಭಟನೆ ನಡೆಸಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಆರಂಭವಾದ ಪ್ರತಿಭಟನೆ ತಹಸೀಲ್ದಾರ್‌ ಕಚೇರಿಯವರೆಗೆ ಪಾದಯಾತ್ರೆ ಮೂಲಕ ತೆರಳಿ ಕೇಂದ್ರ ಗೃಹಮಂತ್ರಿಗಳಿಗೆ ಮನವಿ ಪತ್ರವನ್ನು ತಹಸೀಲ್ದಾರ್‌ ಬಸಲಿಂಗಪ್ಪ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶರಣಗೌಡ ಗೆಣ್ಣೂರ ಮಾತನಾಡಿ, ಉಗ್ರ ಸಂಘಟನೆಯ ದುಷ್ಕರ್ಮಿಗಳು ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಭೀಕರವಾಗಿ ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಧರ್ಮದ ಹೆಸರಿನಲ್ಲಿ ಅಮಾಯಕ ಮುಗ್ಧ ಜನರನ್ನು ಬಲಿ ತೆಗೆದುಕೊಂಡಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಮಾತನಾಡಿ, ಉಗ್ರರ ನೆಲೆಯನ್ನು ಬೇರು ಸಮೇತ ಕಿತ್ತಿಹಾಕಿದಾಗ ಮಾತ್ರ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳು ನಿಲ್ಲಬೇಕು ಮತ್ತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು ಎಂದರು. ಪ.ಪಂ ಸದಸ್ಯ ಶರಣು ದಂಡಿನ, ಮುಖಂಡ ಮೆಲ್ಲಪ್ಪ ಗುಳಗಿ, ಡಾ ಬಸನಗೌಡ ಪಾಟೀಲ, ಬಸವರಾಜ ವೈಲಿ ಘಟನೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನಿಂಗಣ್ಣ ವಡಗೇರಿ, ಬಾಪುಗೌಡ ವಂದಲಿ, ರುದ್ರಣ್ಣ ಮೇಟಿ, ಸಂಗಮೇಶ ಸಜ್ಜನ್ ಮುಂತಾದವರಿದ್ದರು.

ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮನ: 
​​​​​​​ಮೈಸೂರು: 
ಕಾಶ್ಮೀರದ ಪಹಲ್ಗಾಮ್ ಬಳಿಯ ಕಣಿವೆಯಲ್ಲಿ ಉಗ್ರರ ಅಟ್ಟಹಾಸದಿಂದ ಪ್ರಾಣತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ಪದಾಧಿಕಾರಿಗಳು ನಗರದ ಚಾಮುಂಡಿಪುರಂ ಅಂದಾನಿ ಸರ್ಕಲ್ ನಲ್ಲಿ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್, ಫೆಡರೇಶನ್ ಗೌರವ ಅಧ್ಯಕ್ಷ ಲಕ್ಷ್ಮೀಶ, ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ರವಿಶಂಕರ್, ಖಜಾಂಚಿ ಮನೋಹರ್, ನಿರ್ದೇಶಕರಾದ ರಾಜಣ್ಣ, ವಿಜಯ ವಿಠಲಾಚಾರ್ಯ, ಗುರುರಾಜ್, ಶರ್ಮಾ, ಪ್ರಸನ್ನಕುಮಾರ್, ವೇಣುಗೋಪಾಲ್ ಮೊದಲಾದವರು ಇದ್ದರು.