‘ಖಾಸಗಿ ಕಾರ್ಯಕ್ರಮಕ್ಕೆಂದು ಸೌದಿ ಅರೇಬಿಯಾದ ದೊರೆ ಆಗಮಿಸಿದಾಗ ಅವರ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಮೊದಲೇ ತಿಳಿಸದೆ ಪಟಾಕಿ ಸಿಡಿಸಲಾಯಿತು. ಆಗ ಅವರ ಪ್ರತಿಕ್ರಿಯೆ ಹೇಗಿತ್ತು ನೋಡಿ’ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋ ಭಾರಿ ವೈರಲ್‌ ಆಗಿದೆ.

ವಿಡಿಯೋದಲ್ಲಿ, ಐಷಾರಾಮಿ ಕಾರಿನಲ್ಲಿ ‘ಸೌದಿ ರಾಜ’ ಆಗಮಿಸಿ ಕೆಳಗಿಳಿಯುತ್ತಾರೆ. ಅಲ್ಲಿ ಸ್ವಾಗತಕ್ಕೆಂದು ನಿಂತಿದ್ದ ಗಣ್ಯ ವ್ಯಕ್ತಿಗಳು ಅವರನ್ನು ಬರಮಾಡಿಕೊಳ್ಳುತ್ತಾರೆ. ಆಗ ಇದ್ದಕ್ಕಿದ್ದಂತೆ ಢಂ ಢಂ ಢಂ ಎಂದು ಪಟಾಕಿಯ ಸದ್ದು ಕೇಳಿಸುತ್ತದೆ.

Fact Check: ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ಮೋದಿ ಪತ್ನಿ!

ತಕ್ಷಣ ಐಷಾರಾಮಿ ಕಾರಿನಲ್ಲಿ ಆಗಮಿಸಿದ್ದ ವ್ಯಕ್ತಿಯನ್ನು ಸೆಕ್ಯೂರಿಟಿ ಗಾರ್ಡ್‌ಗಳು ಕವರ್‌ ಮಾಡಿಕೊಂಡು ಕಾರಿನತ್ತ ವೇಗವಾಗಿ ತಳ್ಳಿಕೊಂಡು ಹೋಗಿ ಕಾರಿಗೆ ಹತ್ತಿಸಿಕೊಂಡು ಅಲ್ಲಿಂದ ಕೆಲವೇ ಕ್ಷಣದಲ್ಲಿ ಪರಾರಿಯಾಗುತ್ತಾರೆ.

ಸೌದಿಯ ರಾಜರ ಭದ್ರತೆ ಎಷ್ಟುಸೂಕ್ಷ್ಮವಾಗಿದೆ ಮತ್ತು ಅವರು ಸಣ್ಣಪುಟ್ಟಪಟಾಕಿಯ ಸದ್ದಿಗೂ ಗುಂಡು ಅಥವಾ ಬಾಂಬ್‌ ದಾಳಿಯಾಗಿದೆಯೆಂದು ಹೆದರಿ ಹೇಗೆ ಓಡುತ್ತಾರೆ ಎಂಬುದನ್ನು ವ್ಯಂಗ್ಯವಾಡುವಂತೆ ಈ ವಿಡಿಯೋ ಪೋಸ್ಟ್‌ ಮಾಡಲಾಗಿದೆ. ನಿಜಕ್ಕೂ ಇಂತಹದ್ದೊಂದು ಘಟನೆ ನಡೆದಿದೆಯೇ ಎಂದು ಪರಿಶೀಲಿಸಿದಾಗ ಯೂಟ್ಯೂಬ್‌ನಲ್ಲಿ ಕಳೆದ ವರ್ಷದ ಡಿಸೆಂಬರ್‌ 21ರಂದು ಕುವೈತ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಅಣಕು ಪರೀಕ್ಷೆಯ ಹೆಸರಿನಲ್ಲಿ ಇದೇ ವಿಡಿಯೋ ಲಭ್ಯವಾಗಿದೆ.

Fact Check: ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗೆ ಡ್ರೆಸ್‌ಕೋಡ್‌!

ಸೌದಿ ದೊರೆ ನಿಜವಾಗಿಯೂ ಪಟಾಕಿ ಸದ್ದಿಗೆ ಬೆಚ್ಚಿ ಓಡಿದ್ದರೆ ಅದು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಿತ್ತು. ಆದರೆ ಎಲ್ಲೂ ಸುದ್ದಿಯಾಗಿಲ್ಲ. ಮೇಲಾಗಿ, ಹೀಗೆ ಓಡಿಹೋದ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಸೌದಿ ದೊರೆಯೂ ಅಲ್ಲ, ಸೌದಿಯ ರಾಜಕುಮಾರನೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಇದೊಂದು ಸುಳ್ಳು ಸುದ್ದಿ.

- ವೈರಲ್ ಚೆಕ್