ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ, ಎನ್‌ಪಿಆರ್‌ ಬಗ್ಗೆ ದೇಶಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕೆಲವರು ಕಾಯ್ದೆ ಪರವಾಗಿದ್ದರೆ, ಇನ್ನು ಕೆಲವರು ಕಾಯ್ದೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ರಿಲಯನ್ಸ್‌ ಜಿಯೋ ಮುಖ್ಯಸ್ಥ ಮುಕೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗುತ್ತಿದೆ. 

ಆದರೆ ನಿಜಕ್ಕೂ ನೀತಾ ಅಂಬಾನಿ ಪೌರತ್ವ ಕಾಯ್ದೆ ಬೆಂಬಲಿಸಿ ಟ್ವೀಟ್‌ ಮಾಡಿದ್ದರೇ ಎಂದು ಪರಿಶೀಲಿಸಿದಾಗ ಇದು ನಕಲಿ ಟ್ವೀಟರ್‌ ಖಾತೆ ಎಂಬ ವಾಸ್ತವ ಬಯಲಾಗಿದೆ. ವಾಸ್ತವದಲ್ಲಿ ನೀತಾ ಅಂಬಾನಿ ಅಧಿಕೃತ ಟ್ವೀಟ್‌ ಖಾತೆಯನ್ನೇ ಹೊಂದಿಲ್ಲ. ನೀತಾ ಅಂಬಾನಿ ಹೆಸರಿನ ಈ ನಕಲಿ ಅಕೌಂಟನ್ನು 18000 ಜನರು ಫಾಲೋ ಮಾಡುತ್ತಿದ್ದಾರೆ. ಅಲ್ಲಿಗೆ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟ.

ಟ್ವೀಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರನ್ನು ಬೆಂಬಲಿಸುವುದಾಗಿ ಹೇಳಲಾಗಿದೆ. ಇದರ ಸ್ಕ್ರೀನ್‌ಶಾಟ್‌ ವೈರಲ್‌ ಆಗುತ್ತಿದೆ. ಫೇಸ್‌ಬುಕ್‌ ಪೇಜ್‌ವೊಂದರಲ್ಲಿ ಈ ಟ್ವೀಟ್‌ ಸ್ಕ್ರೀನ್‌ಶಾಟ್‌ 4400 ಬಾರಿ ಶೇರ್‌ ಆಗಿದೆ. ಕೆಲವರು ಇದನ್ನು ಪೋಸ್ಟ್‌ ಮಾಡಿ ‘ಜಿಯೋವನ್ನು ಬಹಿಷ್ಕರಿಸಿ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ‘ಸ್ನೇಹಿತರೇ ಮೋದಿ ಮತ್ತು ಅಮಿತ್‌ ಶಾ ಪರವಾಗಿ ನಿಲ್ಲಿ. ಏಕೆಂದರೆ ಅವರು ಈಗ ಇಂಥ ನಿರ್ಧಾರ ಕೈಗೊಳ್ಳದಿದ್ದರೆ ಮತ್ಯಾರೂ ಇಂಥ ಧೈರ್ಯ ಮಾಡುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

Fact Check: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಿಳಿದ್ರಾ ಪೊಲೀಸರು?

ಈ ಕುರಿತು ರಿಲಯನ್ಸ್ ಜಿಯೋ ಅಧೀಕೃತ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ. ನೀತಾ ಅಂಬಾನಿ ಯಾವುದೇ ಟ್ವಿಟರ್ ಖಾತೆ ಹೊಂದಿಲ್ಲ. ಇಷ್ಟೇ ಅಲ್ಲ ಸದ್ಯ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದಿದೆ.

- ವೈರಲ್ ಚೆಕ್