ಶತಮಾನಗಳ ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು, ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿಯೇ ೫ ಎಕರೆ ಜಾಗ ನೀಡಬೇಕೆಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಗೆ ಪತ್ರ ಬರೆದು ‘ಹಿಂದು ರಾಷ್ಟ್ರದ ಪರವಾಗಿ ತೀರ್ಪು ನೀಡಿದ್ದಕ್ಕೆ ಧನ್ಯವಾದ’ ಎಂದು ತಿಳಿಸಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಈ ಪತ್ರದಲ್ಲಿ ಪ್ರಧಾನಿ ಕಾರ‌್ಯಾಲಯದ ಅಧಿಕೃತ ಲೆಟರ್ ಹೆಡ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಹಿಯನ್ನೂ ಬಳಕೆ ಮಾಡಲಾಗಿದೆ.  ಪತ್ರದಲ್ಲಿ ‘ನಿಮಗೆ ಮತ್ತು ಈ ತೀರ್ಪು ನೀಡಿದ ಸಾಂವಿಧಾನಿಕ ಪೀಠಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಈ ಐತಿಹಾಸಿಕ ತೀರ್ಪು ನೀಡಿದ್ದಕ್ಕೆ ಹಿಂದುಗಳು ನಿಮಗೆ ಹಾಗೂ ನಿಮ್ಮ ಟೀಮ್‌ಗೆ ಅಬಾರಿಯಾಗಿರುತ್ತಾರೆ. ಈ ಸಂದಿಗ್ಧ ಸಮಯದಲ್ಲಿ ನಮಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು’ ಎಂದಿದೆ.

Fact Check: ಓವೈಸಿ ಅಯೋಧ್ಯೆ- ಮೋದಿ ಬಗ್ಗೆ ಮಾತಾಡಿದ್ದಕ್ಕೆ ಜನ ಎದ್ದು ಹೋಗಿದ್ದು ನಿಜನಾ?

ಆದರೆ ನಿಜಕ್ಕೂ ಮೋದಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಈ ರೀತಿ ಪತ್ರ ಬರೆದಿದ್ದರೇ ಎಂದು ಬೂಮ್ ಲೈವ್ ಪರಿಶೀಲಿಸಿದಾಗ ಇದು ಸುಳ್ಳು , ಪ್ರಧಾನಿ ಮೋದಿ ಸಹಿಯನ್ನು ನಕಲು ಮಾಡಲಾಗಿದೆ ಎಂಬುದು ಖಚಿತವಾಗಿದೆ. ಪ್ರಧಾನಿ ಕಾರ‌್ಯಾಲಯದ ಅಧಿಕೃತ ಪತ್ರಗಳೊಂದಿಗೆ ವೈರಲ್ ಆಗಿರುವ ಪತ್ರವನ್ನು ಹೋಲಿಕೆ ಮಾಡಿದಾಗ ಸಾಕಷ್ಟು ವ್ಯತ್ಯಾಸಗಳು ಗೋಚರವಾಗಿವೆ. ನಕಲಿ ಪತ್ರದಲ್ಲಿ ರಂಜನ್ ಗೊಗೋಯ್ ಎಂದಿದೆ. ಆದರೆ ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡುವಾಗಲೂ ‘ಜಿ’ಯನ್ನು ಬಳಸುತ್ತಾರೆ. ಹಾಗೆಯೇ ನಕಲಿ ಪತ್ರದಲ್ಲಿ ಹಲವು ವ್ಯಾಕರಣ ದೋಷಗಳೂ ಇವೆ. ಮುಖ್ಯವಾಗಿ ನರೇಂದ್ರ ಮೋದಿ ಅವರ ಸಹಿಯೂ ತಪ್ಪಾಗಿದೆ.

- ವೈರಲ್ ಚೆಕ್