ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಭಾಷಣ ಮಾಡುತ್ತಿದ್ದ ವೇಳೆಯಲ್ಲಿ ಜನರೆಲ್ಲಾ ಎದ್ದು ಹೋಗುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಅದರೊಂದಿಗೆ, ‘ಹಿಂದೊಮ್ಮೆ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದಾಗ ಕಾರ‍್ಯಕ್ರಮದಲ್ಲಿ ಭಾಗಿಯಾಗಿದ್ದ ಜನರೆಲ್ಲ ಎದ್ದು ಹೋಗಿದ್ದರು.

Fact check: PF ಸಂಸ್ಥೆಯಿಂದ ಕಾರ್ಮಿಕರಿಗೆ 80 ಸಾವಿರ ಬಂಪರ್ ಕೊಡುಗೆ!

ಈಗ ಓವೈಸಿ ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಮಾತನಾಡಿದಾಗಲೂ ಜನರು ಅದೇ ಪ್ರತಿಕ್ರಿಯೆ ತೋರಿದ್ದಾರೆ. ಹಳೆಯ ಘಟನೆಗಳಿಂದ ಓವೈಸಿ ಏನನ್ನೂ ಕಲಿತಿಲ್ಲ’ ಎಂದು ಬರೆಯಲಾಗಿದೆ. 1.12 ನಿಮಿಷ ಇರುವ ವಿಡಿಯೋದಲ್ಲಿ ಓವೈಸಿ ಸುಪ್ರೀಂಕೋರ್ಟ್‌ ತೀರ್ಪು ತೃಪ್ತಿಕರವಾಗಿಲ್ಲ ಎಂದು ಹೇಳುವ ಆಡಿಯೋ ಇದೆ.

ಆದರೆ ನಿಜಕ್ಕೂ ಓವೈಸಿ ಭಾಷಣ ಕೇಳಿ ಜನರು ಎದ್ದುಹೋದರೇ ಎಂದು ಬೂಮ್‌ಲೈವ್‌ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ ಇದರ ಮೂಲ ವಿಡಿಯೋ ಲಭ್ಯವಾಗಿದ್ದು, 2018ರ ಜನವರಿ 23ರಂದು ಜೀ ನ್ಯೂಸ್‌ ಅಪ್ಲೋಡ್‌ ಮಾಡಿರುವ ವಿಡಿಯೋದಲ್ಲಿ ಈಗ ವೈರಲ್‌ ಆಗಿರುವ ದೃಶ್ಯವೇ ಇದೆ.

 

ಅದರಲ್ಲಿ ಓವೈಸಿಯೆಡೆಗೆ ಯಾರೋ ಒಬ್ಬ ಚಪ್ಪಲಿ ಎಸೆಯುತ್ತಾನೆ. ಪೊಲೀಸರು ನಿಯಂತ್ರಿಸಲು ಯತ್ನಿಸುತ್ತಾರೆ. ಪರಿಸ್ಥಿತಿ ಬಿಗಡಾಯಿಸಿದಾಗ ಜನರು ಎದ್ದು ಹೋಗಲಾರಂಭಿಸುತ್ತಾರೆ. ಪ್ರಕರಣದ ಸಂಬಂಧ ನಾಗ್ಪದಾ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಸದ್ಯ ಅದೇ ವಿಡಿಯೋವನ್ನು ಮತ್ತೊಮ್ಮೆ ಅಪ್ಲೋಡ್‌ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್