ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಿಸಿದ ಫೇಸ್‌ಬುಕ್..!
ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಆತ್ಮಹತ್ಯೆ ಯತ್ನ, ಇದನ್ನು ಪೊಲೀಸರಿಗೆ ತಿಳಿಸಿದ ಫೇಸ್‌ಬುಕ್, 13 ನಿಮಿಷದಲ್ಲಿ ಪೊಲೀಸರಿಂದ ಯುವಕನ ರಕ್ಷಣೆ, ಉ.ಪ್ರ.ದ ಗಾಜಿಯಾಬಾದ್‌ನಲ್ಲಿ ಪ್ರಸಂಗ

ಗಾಜಿಯಾಬಾದ್(ಫೆ.03): ಇದೊಂದು ವಿಚಿತ್ರ ಘಟನೆ. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಹೇಗೆ ಸದ್ಬಳಕೆ ಮಾಡಿಕೊಂಡು ಜೀವ ರಕ್ಷಿಸಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಫೇಸ್‌ಬುಕ್‌ನ ಮಾತೃ ಕಂಪನಿ ‘ಮೆಟಾ’ದ್ದೇ ಆದ ಸಾಮಾಜಿಕ ಮಾಧ್ಯಮ ‘ಇನ್‌ಸ್ಟಾಗ್ರಾಂ’ನಲ್ಲಿ ಲೈವ್ ಪ್ರಸಾರ ಮಾಡಿ ಆತ್ಮಹತ್ಯೆಗೆ ಯತ್ನಿಸಿದವನನ್ನು ಪೊಲೀಸರಿಗೆ ಮಾಹಿತಿ ನೀಡಿ ಫೇಸ್‌ಬುಕ್ ಕಂಪನಿ ರಕ್ಷಿಸಿದೆ. ಯುವಕ ಅಭಯ್ ಶುಕ್ಲಾ ಎಂಬಾತನೇ ಆತ್ಮಹತ್ಯೆ ಯತ್ನದಿಂದ ರಕ್ಷಿಸಲ್ಪಟ್ಟ ಯುವಕ. ಈತ ಇನ್‌ಸ್ಟಾಗ್ರಾಂ ಲೈವ್ ಆರಂಭಿಸಿದ ಕೇವಲ 13 ನಿಮಿಷದೊಳಗೆ ಪೊಲೀಸರು ಆತನ ಮನೆಗೆ ಆಗಮಿಸಿ ರಕ್ಷಣೆ ಮಾಡಿದ್ದಾರೆ.
ಆಗಿದ್ದೇನು?:
ಅಭಯ್‌ನ ತಂಗಿ ಮದುವೆಗೆಂದು ಅಮ್ಮ 90 ಸಾವಿರ ರು. ಹಣ ಇಟ್ಟಿದ್ದರು. ಆದರೆ ಉದ್ಯಮದಲ್ಲಿ ಹೂಡಿಕೆ ಮಾಡಲು ಅಮ್ಮನಿಂದ ಈ ಹಣವನ್ನು ಪಡೆದಿದ್ದ. ಆದರೆ ಉದ್ಯಮ ಲಾಭ ಮಾಡದೇ ನಷ್ಟ ಅನುಭವಿಸಿದ ಕಾರಣ ಭಯದಿಂದ ಖಿನ್ನತೆಗೆ ಒಳಗಾಗಿದ್ದ. ಸಾವಿಗೆ ಶರಣಾಗಲು ಇನ್‌ಸ್ಟಾಗ್ರಾಂ ಲೈವ್ ಮೂಲಕ ತನ್ನ ಅಳಲು ತೋಡಿಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ.
ದೃಶ್ಯಂ ಚಿತ್ರದ ಸ್ಟೈಲ್‌ನಲ್ಲಿ ನಡೆಯಿತು ಕೊಲೆ, ಗಂಡನನ್ನು ಹೂತು ಸೆಪ್ಟಿಕ್ ಟ್ಯಾಂಕ್ ಕಟ್ಟಿದ್ದ ಪತ್ನಿ!
ವಿಷಯವು ಫೇಸ್‌ಬುಕ್-ಇನ್‌ಸ್ಟಾಗ್ರಾಂ ಮಾತೃಸಂಸ್ಥೆಯಾದ ‘ಮೆಟಾ’ ಗಮನಕ್ಕೆ ಬಂತು. ಮೆಟಾ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿತು. ಆಗ 13 ನಿಮಿಷಗಳಲ್ಲಿ ಯುವಕನ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ್ನು ರಕ್ಷಿಸಿದ್ದಾರೆ. ನಂತರ ಅವನಿಗೆ ಆತ್ಮಸ್ಥೈರ್ಯ ತುಂಬಿ ಮುಂದೆ ಈ ತಪ್ಪು ಮಾಡದಿರುವಂತೆ ಸೂಚಿಸಿದ್ದಾರೆ. ಅಭಯ್ ಕೂಡ ತಪ್ಪು ಒಪ್ಪಿಕೊಂಡು ಮುಂದೆ ಹೀಗೆ ಮಾಡಲ್ಲ ಎಂದಿದ್ದಾನೆ.