ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಸಂಜಯ್‌ ಮಿಶ್ರಾ ಅವರ ಅವಧಿಯನ್ನು ಸತತ ಮೂರನೇ ಬಾರಿಗೆ ವಿಸ್ತರಣೆ ಮಾಡುವ ಕೇಂದ್ರ ಸರ್ಕಾರದ ಆಸೆಗೆ ಸುಪ್ರೀಂ ಕೋರ್ಟ್‌ ಟೀಕೆ ಮಾಡಿದೆ. ಇದು  2021ರಲ್ಲಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಉಲ್ಲಂಘಿಸುತ್ತದೆ ಎಂದಿದ್ದು, ಮೂರನೇ ಅವಧಿಗೆ ವಿಸ್ತರಣೆ ನೀಡುವುದು ಅಕ್ರಮ ಎಂದು ಹೇಳಿದೆ. 

ನವದೆಹಲಿ (ಜು.11): ಕೇಂದ್ರ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಎನ್ನುವ ರೀತಿಯಲ್ಲಿ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಸಂಜಯ್‌ ಕುಮಾರ್‌ ಮಿಶ್ರಾ ಅವರಿಗೆ ನೀಡಲಾಗಿರುವ ಮೂರನೇ ಅವಧಿಯ ವಿಸ್ತರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಅಕ್ರಮ ಎಂದು ಬಣ್ಣಿಸಿದೆ. ಆದರೆ, 2023ರ ಜುಲೈ 31ರವರೆಗೆ ಅವದಿಗೆ ಈ ಹುದ್ದೆಯಲ್ಲಿ ಮುಂದುವರಿಯಲು ಕೋರ್ಟ್‌ ಅವಕಾಶ ನೀಡಿದೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ಪೀಠವು ಈ ವರ್ಷ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನಡೆಸುತ್ತಿರುವ ಪೀರ್ ರಿವ್ಯೂ ಮತ್ತು ಸುಗಮ ಸ್ಥಿತ್ಯಂತರವನ್ನು ಸಕ್ರಿಯಗೊಳಿಸಲು, ಮಿಶ್ರಾ ಅವರ ಅಧಿಕಾರಾವಧಿಯು ಜುಲೈ 31 ರವರೆಗೆ ಇರುತ್ತದೆ ಎಂದು ಹೇಳಿದೆ. ಕೇಂದ್ರೀಯ ತನಿಖಾ ಸಂಸ್ಥೆಗೆ ಹೊಸ ನಿರ್ದೇಶಕರನ್ನು ಹುಡುಕುವಂತೆಯೂ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. "ಮಿಶ್ರಾ ಅವರ ವಿಸ್ತೃತ ಅವಧಿಯು 2021 ರಲ್ಲಿನ ತೀರ್ಪಿನ ಆದೇಶವನ್ನು ಉಲ್ಲಂಘಿಸುತ್ತದೆ" ಎಂದು ತಿಳಿಸಿದೆ.ಕಾಂಗ್ರೆಸ್ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಠಾಕೂರ್ ಮತ್ತು ಟಿಎಂಸಿಯ ಮಹುವಾ ಮೊಯಿತ್ರಾ ಮತ್ತು ಸಾಕೇತ್ ಗೋಖಲೆ ಅವರು ಸಲ್ಲಿಸಿದ ಅರ್ಜಿಗಳ ಮೇಲಿನ ವಿಚಾರಣೆಯ ವೇಳೆ ಪೀಠ ಈ ಆದೇಶ ನೀಡಿದೆ.

ಹಾಗೇನಾದರೂ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ನೀಡದೇ ಇದ್ದಿದ್ದಲ್ಲಿ, ಸರ್ಕಾರದ ಆದೇಶದಲ್ಲಿ ಮುಂದಿನ ನವೆಂಬರ್‌ 18ರವರೆಗೂ 1984ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ ಸಂಜಯ್‌ ಕುಮಾರ್‌ ಮಿಶ್ರಾ ಇಡಿ ನಿರ್ದೇಶಕರಾಗಿ ಸೇವೆ ಸಲ್ಲಿಸಬೇಕಿತ್ತು. ಇದೇ ವೇಳೆ ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ವಿಜಿಲೆನ್ಸ್ ಕಮಿಷನ್ ಕಾಯ್ದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯ ತಿದ್ದುಪಡಿಗಳನ್ನು ಮಾಡುವಂತೆ ತಿಳಿಸಿದೆ.

ಮೇ 8 ರಂದು, ಎಫ್‌ಎಟಿಎಫ್ ನಡೆಸುತ್ತಿರುವ ಪೀರ್ ರಿವ್ಯೂ ಆಧಾರದ ಮೇಲೆ ಕೇಂದ್ರದಿಂದ ಸಮರ್ಥಿಸಲ್ಪಟ್ಟ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ನೀಡಲಾದ ಮೂರನೇ ಸೇವೆಯ ವಿಸ್ತರಣೆಯನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್‌ನ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು. ಮಿಶ್ರಾ ಅವರಿಗೆ ನೀಡಲಾದ ಮೂರನೇ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಸುಪ್ರೀಂ ಕೋರ್ಟ್ ಕಳೆದ ಡಿಸೆಂಬರ್ 12 ರಂದು ಕೇಂದ್ರ ಮತ್ತು ಇತರರಿಂದ ಪ್ರತಿಕ್ರಿಯೆ ಕೇಳಿತ್ತು.

ಈ ವರ್ಷದ ಫೆಬ್ರವರಿಯಲ್ಲಿ, ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಮಿಶ್ರಾ ಅವರಿಗೆ ವಿಸ್ತರಣೆಯನ್ನು ನೀಡುವ ನಿರ್ಧಾರವನ್ನು ಕೇಂದ್ರವು ಸಮರ್ಥಿಸಿಕೊಂಡಿತ್ತು. ಅದರೊಂದಿಗೆ ಯಾರಿಂದಲೂ ಪ್ರೇರಿತವಾಗಿ ವಿರೋಧ ಪಕ್ಷಗಳ ನಾಯಕರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಹಾಗಾಗಿ ಅದನ್ನು ವಜಾ ಮಾಡಬೇಕು ಎಂದು ಉನ್ನತ ನ್ಯಾಯಾಲಯವನ್ನು ಕೇಳಿತ್ತು. ಇಡಿ ನಿರ್ದೇಶಕರ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ತನ್ನ ಹೇಳಿಕೆಯನ್ನು ನೀಡಿದೆ.

ಇ.ಡಿ. ನಿರ್ದೇಶಕರ ಅಧಿಕಾರವಧಿ ವಿಸ್ತರಣೆ ಪ್ರಶ್ನಿಸಿದ ಸುಪ್ರೀಂಕೋರ್ಟ್

62 ವರ್ಷದ ಸಂಜಯ್‌ ಮಿಶ್ರಾ 2018ರ ನವೆಂಬರ್ 19 ರಂದು ಎರಡು ವರ್ಷಗಳ ಕಾಲ ಇಡಿ ನಿರ್ದೇಶಕರಾಗಿ ನೇಮಕಗೊಂಡಿದ್ದರು. ನಂತರ, 2020ರ ನವೆಂಬರ್ 13 ರ ಆದೇಶದ ಮೂಲಕ ಕೇಂದ್ರ ಸರ್ಕಾರವು ಅವರ ನೇಮಕಾತಿ ಪತ್ರವನ್ನು ಬದಲಾವಣೆ ಮಾಡಿ, ಅವರ ಎರಡು ವರ್ಷಗಳ ಅವಧಿಯನ್ನು ಮೂರು ವರ್ಷಕ್ಕೆ ಬದಲಾವಣೆ ಮಾಡಿತ್ತು. ಸರ್ಕಾರವು ಕಳೆದ ವರ್ಷ ಇದೇ ವಿಚಾರದಲ್ಲಿ ಸುಗ್ರೀವಾಜ್ಞೆಯನ್ನು ಪ್ರಕಟಿಸಿತು, ಅದರ ಅಡಿಯಲ್ಲಿ ಇಡಿ ಮತ್ತು ಸಿಬಿಐ ಮುಖ್ಯಸ್ಥರ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಡ್ಡಾಯ ಅವಧಿಯ ನಂತರ ಮೂರು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಹೇಳಲಾಗಿತ್ತು.

ಒಬ್ಬ ಐಎಎಸ್‌ ಅಧಿಕಾರಿಗಾಗಿ ಮೋದಿ ಸರ್ಕಾರದ ಸುಗ್ರೀವಾಜ್ಞೆ, ಇಡಿ ನಿರ್ದೇಶಕ ಸಂಜಯ್‌ ಕುಮಾರ್‌ ಅವಧಿ ವಿಸ್ತರಣೆ!