ಇಸ್ರೇಲ್ ದೂತಾವಾಸ ಸ್ಫೋಟ ಉಗ್ರ ಕೃತ್ಯ?
ಇಸ್ರೇಲ್ ದೂತಾವಾಸ ಸ್ಫೋಟ ಉಗ್ರ ಕೃತ್ಯ?| ದಿಲ್ಲಿಯಲ್ಲಿ ರಾಯಭಾರ ಕಚೇರಿ ಹೊರಗೆ ಸ್ಫೋಟ ಎಸಗಿದ್ದು ನಾವೇ: ಜೈಷ್ ಅಲ್ ಹಿಂದ್ ಸಂಘಟನೆ| ಈವರೆಗೂ ಹೆಸರು ಕೇಳದ ಸಂಘಟನೆಯಿದು| ಸಾಕ್ಷ್ಯ ಸಿಗೋವರೆಗೂ ಈ ಹೇಳಿಕೆ ನಂಬಲ್ಲ: ಪೊಲೀಸ್
ನವದೆಹಲಿ(ಜ.31): ದಿಲ್ಲಿಯ ಇಸ್ರೇಲ್ ರಾಯಭಾರ ಕಚೇರಿ ಹೊರಗೆ ಶುಕ್ರವಾರ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡ ಇರುವ ಬಲವಾದ ಶಂಕೆ ವ್ಯಕ್ತವಾಗಿದೆ. ಈವರೆಗೆ ಯಾರೂ ಹೆಸರು ಕೇಳಿಲ್ಲದ ‘ಜೈಷ್- ಅಲ್- ಹಿಂದ್’ ಎಂಬ ಭಯೋತ್ಪಾದಕ ಸಂಘಟನೆ ಸ್ಫೋಟ ಕೃತ್ಯ ಎಸಗಿದ್ದು ತಾನೇ ಎಂದು ಶನಿವಾರ ಹೇಳಿಕೊಂಡಿದೆ. ಆದರೆ, ಸಾಕ್ಷ್ಯ ಸಿಗುವವರೆಗೂ ಇದನ್ನು ನಂಬುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಆ್ಯಪ್ ‘ಟೆಲಿಗ್ರಾಂ’ನಲ್ಲಿ ಜೈಷ್ ಅಲ್ ಹಿಂದ್ ಎಂಬ ಸಂಘಟನೆ ನೀಡಿರುವ ಹೇಳಿಕೆಯ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ. ‘ದೇವರ ದಯೆ ಹಾಗೂ ಆಶೀರ್ವಾದರಿಂದ ಜೈಷ್ ಅಲ್ ಹಿಂದ್‌ನ ಯೋಧರು ಭಾರೀ ಭದ್ರತೆಯ ದಿಲ್ಲಿ ಪ್ರದೇಶಕ್ಕೆ ನುಸುಳಲು ಯಶಸ್ವಿ ಆಗಿದ್ದು ಐಇಡಿ ದಾಳಿ ನಡೆಸಿದ್ದಾರೆ. ದೇವರ ಭಾರತದಲ್ಲಿ ನಡೆಸಲಾದ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಇಚ್ಛೆಯಂತೆ ದೊಡ್ಡ ನಗರಗಳ ಮೇಲೆ ದಾಳಿ ನಡೆಸಲಾಗುತ್ತದೆ. ಇದು ಆರಂಭ ಮಾತ್ರ. ಕಾಯ್ತಾ ಇರಿ’ ಎಂದು ಸಂದೇಶದಲ್ಲಿ ಬರೆಯಲಾಗಿದೆ.
‘ಆದರೆ ಇದು ತನಿಖೆಯ ದಾರಿ ತಪ್ಪಿಸುವ ತಂತ್ರವಾಗಿರಬಹುದು. ಸೂಕ್ತ ಸಾಕ್ಷ್ಯ ಲಭಿಸುವವರೆಗೂ ಇದನ್ನು ನಂಬಲಾಗುವುದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಹೊರಭಾಗದಲ್ಲಿನ ಹೂಕುಂಡದಲ್ಲಿ ಶುಕ್ರವಾರ ಸಂಜೆ 5ರ ಸುಮಾರಿಗೆ ಲಘು ಸ್ಫೋಟ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಿರಲಿಲ್ಲ. ಕೆಲವೊಂದು ವಾಹನಗಳಿಗೆ ಹಾನಿಯಾಗಿತ್ತು. ಸ್ಫೋಟ ನಡೆದ 2.5 ಕಿ.ಮೀ. ದೂರದಲ್ಲೇ ಗಣರಾಜ್ಯೋತ್ಸವ ಸಮಾರಂಭದ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯುತ್ತಿತ್ತು. ಅದರಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಹೀಗಾಗಿ ತೀವ್ರ ಆತಂಕ ವ್ಯಕ್ತವಾಗಿತ್ತು.
ಏನಾಗಿತ್ತು?
ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಹೊರಭಾಗದ ಹೂಕುಂಡದಲ್ಲಿ ಶುಕ್ರವಾರ ಸಂಜೆ ಲಘು ಸ್ಫೋಟ ಸಂಭವಿಸಿತ್ತು. ಇಲ್ಲಿಂದ 2.5 ಕಿ.ಮೀ. ದೂರದಲ್ಲೇ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರ ಕಾರ‍್ಯಕ್ರಮ ನಡೆಯುತ್ತಿತ್ತು.
ಇದು ಉಗ್ರರ ದಾಳಿ
ನಮ್ಮ ದೇಶದ ರಾಯಭಾರ ಕಚೇರಿಯ ಹೊರಗೆ ನಡೆದ ಬಾಂಬ್ ಸ್ಫೋಟ ಒಂದು ಭಯೋತ್ಪಾದಕ ದಾಳಿ ಎಂಬುದಕ್ಕೆ ಸಾಕಷ್ಟುಪುರಾವೆಗಳು ಇವೆ. ದಾಳಿಯ ಬಗ್ಗೆ ನಮಗೆ ಅಚ್ಚರಿ ಆಗಿಲ್ಲ. ಕೆಲವು ವಾರಗಳಿಂದ ಸನ್ನದ್ಧ ಸ್ಥಿತಿಯಲ್ಲಿದ್ದೆವು. ಇಂತಹ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಕದಡಲು ಹಾಗೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ.
- ರೊನ್ ಮಲ್ಕಾ
ಭಾರತದಲ್ಲಿನ ಇಸ್ರೇಲ್ ರಾಯಭಾರಿ ಸ್ಫೋಟದ ಹಿಂದೆ ಇಸ್ರೇಲ್‌ನ ವೈರಿ ಇರಾನ್?
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಸಂಭವಿಸಿದ ಸ್ಫೋಟದ ಹಿಂದೆ ಇಸ್ರೇಲ್‌ನ ವೈರಿ ದೇಶವಾಗಿರುವ ಇರಾನ್‌ನ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಫೋಟದ ಸ್ಥಳದಲ್ಲಿ ಸಿಕ್ಕ ಚೀಟಿಯಲ್ಲಿ ‘ಟ್ರೇಲರ್’ ಎಂದು ಬರೆಯಲಾಗಿದ್ದು, ಕಳೆದ ವರ್ಷ ಹತ್ಯೆಗೀಡಾದ ಇರಾನ್‌ನ ಮಿಲಿಟರಿ ಮತ್ತು ಅಣ್ವಸ್ತ್ರ ವಿಜ್ಞಾನಿಗಳ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಈ ಕೃತ್ಯದ ಹಿಂದೆ ಇರಾನ್ ಕೈವಾಡವಿರಬಹುದು ಎಂಬ ಅನುಮಾನ ತನಿಖಾಧಿಕಾರಿಗಳಲ್ಲಿ ಮೂಡಿದೆ. ಹೀಗಾಗಿ ಕೆಲ ವಾರಗಳ ಹಿಂದಿನಿಂದ ಭಾರತಕ್ಕೆ ಬಂದ ಇರಾನ್ ಪ್ರಜೆಗಳ ವಿವರ ಕಲೆಹಾಕಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.