Asianet Suvarna News Asianet Suvarna News

1990 ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ ಓಡಿಸಿದ ಘಟನೆಗೆ ಕಾರಣವೇನು?

1989ರ ನವೆಂಬರ್‌ನಲ್ಲಿ ಮುಫ್ತಿ ಮೊಹಮ್ಮದ್‌ ಸಯೀದ್‌ ಪುತ್ರಿ ರುಬಿಯಾರನ್ನು ಕೆಲ ಬಂದೂಕು ಹಿಡಿದ ಕಾಶ್ಮೀರಿ ಯುವಕರು ಅಪಹರಿಸಿದಾಗ ಮಂಡಿ ಊರಿದ ಭಾರತ ಸರ್ಕಾರ 5 ಉಗ್ರರನ್ನು ಬಿಡುಗಡೆ ಮಾಡಿತು. ಇದರಿಂದ ಇನ್ನಷ್ಟುಪ್ರಚೋದನೆಗೆ ಒಳಗಾದ ಕಾಶ್ಮೀರಿ ಯುವಕರು ಗಲ್ಲಿ ಗಲ್ಲಿಗಳಲ್ಲಿ ಬಂದೂಕು ಹಿಡಿದು ಆಜಾದಿ ಎಂದು ಕೂಗತೊಡಗಿದರು.

Explained the Plight of Kashmiri Pandits and 1990s Exodus hls
Author
Bengaluru, First Published Mar 18, 2022, 9:41 AM IST

1989 ರಿಂದ 1991 ರಲ್ಲಿ ವಿಶ್ವದ ಇತಿಹಾಸ ಅನೇಕ ಮಹತ್ವಪೂರ್ಣ ಘಟನೆಗಳಿಗೆ ಸಾಕ್ಷಿಯಾಗಿದೆ. ಬಲಾಢ್ಯ ಸೋವಿಯತ್‌ ಯೂನಿಯನ್‌ ವಿಘಟನೆ ಜೊತೆಗಿನ ಶೀತಲ ಸಮರದ ಅಂತ್ಯ, ಪಶ್ಚಿಮ ಮತ್ತು ಪೂರ್ವ ಜರ್ಮನಿಯ ನಡುವಿನ ಗೋಡೆ ಕೆಡವಿದ್ದು, ಅಷ್ಘಾನಿಸ್ತಾನದಲ್ಲಿ ಮುಜಾಹಿದ್ದೀನ್‌ಗಳಿಗೆ ಅಮೆರಿಕದ ದುಡ್ಡು ಮತ್ತು ಶಸ್ತ್ರ ಪೂರೈಕೆ, ಭಾರತದಂಥ ದೊಡ್ಡ ದೇಶ ಜಾಗತೀಕರಣಕ್ಕೆ ತೆರೆದುಕೊಂಡಿದ್ದು ಇತ್ಯಾದಿ ಇತ್ಯಾದಿ. ಬಹುತೇಕ ಈ ಎಲ್ಲ ಘಟನೆಗಳು, ಪರಿಣಾಮಗಳು, ಆಯಾಮಗಳು ಮಾಧ್ಯಮ ವರದಿಗಳು, ಪುಸ್ತಕ, ಸಿನಿಮಾಗಳ ಮೂಲಕ ಜನಮಾನಸದಲ್ಲಿ ಚರ್ಚೆಯಾಗಿವೆ.

ಆದರೆ ವಿಪರ್ಯಾಸ ನೋಡಿ ಅದೇ ಕಾಲಘಟ್ಟದಲ್ಲಿ ನಮ್ಮದೇ ನೆಲದಲ್ಲಿ ನಮ್ಮ ಜನರ ಮೇಲೆ ಧರ್ಮ ಬೇರೆ ಎಂಬ ಕಾರಣಕ್ಕೆ ನಡೆದ ದಬ್ಬಾಳಿಕೆ, ಅತ್ಯಾಚಾರ, ಮತಾಂತರ, ದೇಶಾಂತರದ ಘಟನೆಗಳು ಯಾವ ಪ್ರಮಾಣದಲ್ಲಿ ವರದಿ ಆಗಬೇಕಿತ್ತೋ ಹಾಗೆ ವರದಿಯೂ ಆಗಿಲ್ಲ, ಹೀಗಾಗಿ ಜನಮಾನಸದವರೆಗೆ ತಲುಪಿಯೂ ಇಲ್ಲ. ಇದು ನಡೆದದ್ದು ಇಸ್ಲಾಂನ ಕಟ್ಟರ್‌ ಪಂಥದ ಕಾರಣದಿಂದ. ಹೀಗಾಗಿ ಎಲ್ಲಿ ಈ ಬಗ್ಗೆ ಮಾತಾಡಿದರೆ ನಮ್ಮ ಸೆಕ್ಯುಲರಿಸಂನ ವ್ರತ ಭಂಗ ಆಗುತ್ತದೆಯೋ ಎಂದು ನಮ್ಮ ಜನಮಾನಸದಿಂದ ಮುಚ್ಚಿಟ್ಟಿದ್ದು ಅಕ್ಷಮ್ಯ.

ಜಗತ್ತಿನೆಲ್ಲಾ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?

ಹೀಗಾಗಿ ಒಂದು ಸಾಕ್ಷ್ಯಚಿತ್ರ ಇವತ್ತು ಕೋಟ್ಯಂತರ ಜನರ ಮನ ಕಲಕುತ್ತಿದೆ. ಯಾರು ಏನೇ ಹೇಳಲಿ 1990ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ, ಬೆದರಿಸಿ ಓಡಿಸಿದ ಘಟನೆಗಳಿಗೆ ಕಾರಣಗಳು: 1.ಇಸ್ಲಾಮಿಕ್‌ ಮೂಲಭೂತವಾದ, 2.ದಿಲ್ಲಿಯಲ್ಲಿ ಆಳುವವರ ಬೇಜವಾಬ್ದಾರಿತನ, 3.ತೀವ್ರತೆಯ ಕನಿಷ್ಠ ವರದಿಯನ್ನು ಮಾಡದೇ ಕೈಕಟ್ಟಿಕುಳಿತ ಮಾಧ್ಯಮಗಳು ಮತ್ತು ಬುದ್ಧಿಜೀವಿ ವರ್ಗ. ಯಾವತ್ತಿಗೂ ಒಂದು ಅತಿರೇಕವನ್ನು ಪೋಷಿಸಿ ಬೆಳೆಸಿದರೆ ಇನ್ನೊಂದು ಅತಿರೇಕವು ಬೆಳೆಯುತ್ತದೆ ಎನ್ನುವ ಕನಿಷ್ಠ ಪ್ರಜ್ಞೆ ನಮ್ಮ ಬುದ್ಧಿಜೀವಿಗಳಿಗೆ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ.

1990 ರಲ್ಲೇ ಏಕೆ ಹಾಗಾಯ್ತು?

1980ರಿಂದ 89ರವರೆಗೆ ಅಷ್ಘಾನಿಸ್ತಾನದಲ್ಲಿ ಸೋವಿಯತ್‌ ಯೂನಿಯನ್‌ ವಿರುದ್ಧ ಮುಜಾಹಿದ್ದೀನ್‌ಗಳ ಗೆರಿಲ್ಲಾ ಯುದ್ಧ ನಡೆದಿತ್ತು. ಅದಕ್ಕೆ ದುಡ್ಡು ಮತ್ತು ಶಸ್ತ್ರ ಪೂರೈಸಿದ್ದು ಅಮೆರಿಕ, ಅದೂ ಸಹ ಪಾಕಿಸ್ತಾನದ ಮೂಲಕ. ಯಾವಾಗ ಸೋವಿಯತ್‌ ಅಷ್ಘಾನಿಸ್ತಾನದಿಂದ ಕಾಲು ತೆಗೆಯಿತೋ ಪಾಕಿಸ್ತಾನಕ್ಕೆ ಕಂಡಿದ್ದು ಕಾಶ್ಮೀರ. ಹೀಗಾಗಿ ಅಷ್ಘಾನಿಸ್ತಾನದ ಯುದ್ಧದ ನಂತರ ಬಹುತೇಕ ಖಾಲಿ ಇದ್ದ ಮುಜಾಹಿದ್ದೀನ್‌ಗಳು ಕಾಶ್ಮೀರದ ಯುವಕರಿಗೆ ಶಸ್ತ್ರ ತರಬೇತಿ ನೀಡಿ ಹಿಂದೂ ಬಹುಸಂಖ್ಯಾತ ಭಾರತದಿಂದ ಬೇರೆಯಾಗಿ ಪ್ರತ್ಯೇಕವಾಗುವ ಹುಚ್ಚು ಬಿತ್ತತೊಡಗಿದರು. ಈ ಪ್ರತ್ಯೇಕತೆಯ ಜೊತೆಗೆ ಧರ್ಮದ ಲೇಪ ಹಚ್ಚಿದರೆ ಮಸ್ತಿಷ್ಕದ ಮೇಲೆ ಆಗುವ ಪರಿಣಾಮವೇ ಬೇರೆ ನೋಡಿ. ಪಾಕಿಸ್ತಾನದ ಜಮಾತೆ ಇಸ್ಲಾಂ ಮೂಲಕ ಸ್ಥಳೀಯ ಹುಡುಗರನ್ನು ಮೊದಲು ಶರಿಯತ್‌ ಮೂಲಕ ಸೆಳೆದು ನಂತರ ಕೈಗೆ ಬಂದೂಕು ನೀಡಲಾಯಿತು.

ಮೂಲ ಉದ್ದೇಶ ಇದ್ದದ್ದು 1990ರ ಜ.26ರಂದು ಶ್ರೀನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸ್ಥಳೀಯ ಯುವಕರು ಸೇರಿ ಗಾಳಿಯಲ್ಲಿ ಗುಂಡು ಹೊಡೆಯುವುದು, ಆ ಮೂಲಕ ನಾವು ಪ್ರತ್ಯೇಕ ಎಂದು ಘೋಷಿಸುವುದು. ಅದಕ್ಕೆ ಪೂರ್ವಭಾವಿಯಾಗಿ ಮೊದಲು ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊರಹಾಕಬೇಕು. ಆಗ ಕಂಡಿದ್ದೇ ಕಾಶ್ಮೀರಿ ಪಂಡಿತರು. ಒಂದು ರೀತಿಯಲ್ಲಿ ಶತಮಾನಗಳ ಹಿಂದೂ ಕಾಶ್ಮೀರಿ ಸಭ್ಯತೆ ಸಂಸ್ಕೃತಿಗಳ ಪಳೆಯುಳಿಕೆಗಳಾದ ಪಂಡಿತರು ಅಲ್ಲಿದ್ದರೆ ಇಸ್ಲಾಮಿಕ್‌ ಕಾಶ್ಮೀರ ರಾಷ್ಟ್ರ ಸಾಧ್ಯ ಆಗುವುದಿಲ್ಲ. ಹೀಗಾಗಿ ಅವರನ್ನು ಓಡಿಸಲು ನಿರ್ಧರಿಸಲಾಗಿತ್ತು.

Russia -Ukraine Crisis:ಏನಿವು ವಾರ್ಸಾ ಮತ್ತು ನ್ಯಾಟೋ? ರಷ್ಯಾಗೆ ಉಕ್ರೇನ್ ಮೇಲೆ ಸಿಟ್ಟು?

ಪಂಡಿತರ ಮೇಲಿನ ಅತಿರೇಕಗಳು

ಹಾಗೆ ನೋಡಿದರೆ ಕಾಶ್ಮೀರದಲ್ಲಿ 100 ಪ್ರತಿಶತ ಇದ್ದ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಸತತ ಇಸ್ಲಾಮಿಕ್‌ ದಾಳಿಗಳಿಂದಾಗಿ. ಇವತ್ತು ಪ್ರತ್ಯೇಕತಾವಾದಿಗಳಾಗಿ ಕಾಣಿಸಿಕೊಳ್ಳುವ ಭಟ್‌, ಲೋನ್‌, ವಾನಿ, ಪಂಡಿತ್‌, ಸಫä್ರ, ಕಾಚರು ಹೆಸರಿನ ನಾಯಕರ ಪೂರ್ವಜರು ಎಷ್ಟೋ ತಲೆಮಾರುಗಳ ಹಿಂದೆ ಇಸ್ಲಾಮಿಗೆ ಮತಾಂತರಗೊಂಡವರೇ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಬರೀ 4 ಪ್ರತಿಶತ ಪಂಡಿತರು ಕಾಶ್ಮೀರದಲ್ಲಿ ಉಳಿದುಕೊಂಡಿದ್ದರು. ಆದರೆ ಯಾವಾಗ ಪಾಕಿಸ್ತಾನ ಸಾಮಾನ್ಯ ಕಾಶ್ಮೀರಿ ಯುವಕರ ತಲೆಯಲ್ಲಿ ಮೊದಲು ಜಿಹಾದ್‌ ತುಂಬಿ, ಕೈಯಲ್ಲಿ ಕಲಾಶ್ನಿಕೋವ್‌ ಬಂದೂಕು ನೀಡಿತೋ ಅವರಿಗೆ ಮೊದಲು ಶತ್ರುಗಳಾಗಿ ಕಂಡಿದ್ದೇ ಕಾಫಿರ್‌ಗಳು ಎಂದು ಕರೆಯಲಾಗುವ ಪಂಡಿತರು. ಪಂಡಿತರನ್ನು ಹೆದರಿಸಲೆಂದೇ ಹಾಡಹಗಲೇ ಟೀಕಾಲಾಲ್ ತಪಲು ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದನ್ನು ಮಾಡಿದ್ದು ಪಾಕ್‌ನಿಂದ ಬಂದ ಬಾಡಿಗೆ ಉಗ್ರರಲ್ಲ. ಯಾಸಿನ್‌ ಮಲ್ಲಿಕ್‌, ಬಿಟ್ಟಾಕರಾಟೆ, ಸಯ್ಯದ್‌ ಸಲಾವುದ್ದೀನ್‌ ತರಹದ ಸ್ಥಳೀಯ ಕಾಶ್ಮೀರಿ ಯುವಕರು.

ಒಂದು ಕಡೆ, ಪಂಡಿತ ಪುರುಷರನ್ನು ಕಾಶ್ಮೀರದಿಂದ ಹೊರಗೆ ಹಾಕಿ ಪಂಡಿತ ಮಹಿಳೆಯರ ಸಮೇತ ಪಾಕಿಸ್ತಾನ ನಿರ್ಮಿಸುತ್ತೇವೆ ಎಂಬ ಮೂಲಭೂತವಾದಿ ಧಾರ್ಮಿಕ ಮುಖಂಡರ ಭಾಷಣಗಳು, ಇನ್ನೊಂದು ಕಡೆ ಬೀದಿಯಲ್ಲಿ ನಿಂತ ಯುವಕರಿಂದ ‘ದಿಲ್ ಮೇ ರಕೋ ಅಲ್ಲಾ ಕಾ ಖಾವಫ್‌ ಹಾತ್‌ ಮೇ ಕಲಾಶ್ನಿಕೋವ್‌ ಹಂ ಕ್ಯಾ ಚಾಹತೆ ನಿಜಾಂ ಎ ಮುಸ್ತಫಾ’ ಎಂಬ ಗುಂಡಿನ ಮಳೆ ಸಹಿತ ಘೋಷಣೆಗಳು. ಎಲ್ಲವೂ ಪಂಡಿತರನ್ನು ಹೆದರಿಸಲು ಮಾಡುತ್ತಿದ್ದ ಪ್ರಯತ್ನದ ಭಾಗವಾಗಿತ್ತು. ಒಂದು ಅಂದಾಜಿನ ಪ್ರಕಾರ, 700 ಪಂಡಿತರ ಕಗ್ಗೊಲೆಗಳು ಆ ಕಾಲದಲ್ಲಿ ನಡೆದಿವೆ. ಬಿಟ್ಟಾಕರಾಟೆಯಂತೂ ಶ್ರೀನಗರದ ಬೀದಿ ಬೀದಿಗಳಲ್ಲಿ ಬಂದೂಕು ಹಿಡಿದು ಪಂಡಿತರ ಮನೆಗಳಿಗೆ ನುಗ್ಗಿದ್ದೇನೆ ಎಂದು ತಾನೇ ಹೇಳಿಕೊಂಡಿದ್ದಾನೆ.

ಆದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಈ ಕ್ರೌರ್ಯದ ಸುದ್ದಿಗಳು ದಿಲ್ಲಿಯವರೆಗೂ ಮುಟ್ಟಲಿಲ್ಲ ಎನ್ನುವುದು ನಮ್ಮ ಕಾಲದ ದೊಡ್ಡ ದುರಂತಗಳಲ್ಲಿ ಒಂದು. ಪ್ಯಾಲೆಸ್ತೀನ್‌ ನಿರಾಶ್ರಿತರು, ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಪುಟಗಟ್ಟಲೆ ಬರೆದ ನಾವು 5 ಲಕ್ಷ ಪಂಡಿತರನ್ನು ತಮ್ಮ ನೆಲದಿಂದ ಓಡಿಸಿದ ಕತೆಗೆ ಜಾಗೆ ನೀಡದೇ ಇದ್ದದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇದ್ದಂತಿಲ್ಲ. ಅಂತಾರಾಷ್ಟ್ರೀಯ ತಟಸ್ಥ ಪತ್ರಕರ್ತರಾಗುವ ನಿಟ್ಟಿನಲ್ಲಿ ನೈಜ ಸತ್ಯವನ್ನು ಮುಚ್ಚಿಡುವುದರಲ್ಲಿ ಮಾಧ್ಯಮಗಳ ಪಾಲೂ ಇದೆ, ಅದನ್ನು ಒಪ್ಪಿಕೊಳ್ಳೋಣ.

ಪಂಡಿತರ ಸಹಾಯಕ್ಕೆ ಬರದ ದಿಲ್ಲಿ

1989 ಮತ್ತು 90ರಲ್ಲಿ ಕಾಶ್ಮೀರಿ ಪಂಡಿತರು ಟ್ರಂಕ್‌ಕಾಲ್ ಮೂಲಕ ದಿಲ್ಲಿಯ ಸೌತ್‌ಬ್ಲಾಕ್‌, ನಾತ್‌ರ್‍ ಬ್ಲಾಕ್‌ಗಳಿಗೆ ಸಾವಿರಾರು ಫೋನ್‌ ಕರೆ ಮಾಡಿ ಸಹಾಯ ಕೇಳಿದರೂ ಯಾರೊಬ್ಬರಿಗೂ ಪಂಡಿತರ ನೋವು, ದುಗುಡ ಕೇಳುವ ಪುರುಸೊತ್ತು ಇರಲಿಲ್ಲ. ರಾತ್ರೋರಾತ್ರಿ ಜಮ್ಮುವಿಗೆ ಓಡಿ ಬಂದ ಲಕ್ಷಾಂತರ ಪಂಡಿತರ ಪೈಕಿ 10 ಸಾವಿರಕ್ಕೂ ಹೆಚ್ಚು ವೃದ್ಧರು, ಮಕ್ಕಳು, ಮಹಿಳೆಯರು ಬಿಸಿಲಿನಿಂದ, ಹಾವು ಚೇಳು ಕಡಿದು ಕ್ಯಾಂಪ್‌ನಲ್ಲಿ ಸತ್ತರೂ ಕೇಳುವ ಆಸಾಮಿ ಇರಲಿಲ್ಲ. ಪಂಡಿತರು ಮತ್ತು ಸಿಖ್ಖರು ಮಾತ್ರ ಕಾಶ್ಮೀರದಲ್ಲಿ ಭಾರತೀಯತೆಯನ್ನು ಒತ್ತಿ ಹೇಳುವ ದೇಶ ನಿಷ್ಠ ನಿವಾಸಿಗಳು ಎಂಬ ದೂರದೃಷ್ಟಿಕೋನ, ಪ್ರಜ್ಞೆ ಮತ್ತು ಜಾಣ್ಮೆ ಇದ್ದಿದ್ದೇ ಆದಲ್ಲಿ ದಿಲ್ಲಿ ಹೀಗೆ ನಡೆದುಕೊಳ್ಳುತ್ತಿರಲಿಲ್ಲ. ನಮ್ಮ ಜನ, ನಮ್ಮ ಸರ್ಕಾರಗಳು, ಜನಾಭಿಪ್ರಾಯ ರೂಪಿಸುವವರು ಇತಿಹಾಸದಿಂದ ಪಾಠ ಕಲಿಯುವುದಿಲ್ಲ ಬಿಡಿ. ಮಾಡಿದ ತಪ್ಪುಗಳನ್ನು ಪುನಃ ಪುನಃ ಮಾಡುವುದು ನಮ್ಮ ಕೆಟ್ಟಚಾಳಿಗಳಲ್ಲಿ ಒಂದು.

ಜಗಮೋಹನರ ಪಾತ್ರ ಏನಿತ್ತು?

1989ರ ನವೆಂಬರ್‌ನಲ್ಲಿ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಪುತ್ರಿ ರುಬಿಯಾರನ್ನು ಕೆಲ ಬಂದೂಕು ಹಿಡಿದ ಕಾಶ್ಮೀರಿ ಯುವಕರು ಅಪಹರಿಸಿದಾಗ ಮಂಡಿ ಊರಿದ ಭಾರತ ಸರ್ಕಾರ 5 ಉಗ್ರರನ್ನು ಬಿಡುಗಡೆ ಮಾಡಿತು. ಇದರಿಂದ ಇನ್ನಷ್ಟುಪ್ರಚೋದನೆಗೆ ಒಳಗಾದ ಕಾಶ್ಮೀರಿ ಯುವಕರು ಗಲ್ಲಿ ಗಲ್ಲಿಗಳಲ್ಲಿ ಬಂದೂಕು ಹಿಡಿದು ಆಜಾದಿ ಎಂದು ಕೂಗತೊಡಗಿದರು. ಪಂಡಿತರ ಹತ್ಯೆ ಘಟನೆಗಳು ದಿನಂಪ್ರತಿ ನಡೆಯತೊಡಗಿದಾಗ ಫಾರೂಕ್‌ ಅಬ್ದುಲ್ಲಾ ಜನವರಿಯಲ್ಲಿ ರಾಜೀನಾಮೆ ನೀಡಿದರು. ಆಗ ಐಎಎಸ್‌ ಅಧಿಕಾರಿ ಆಗಿದ್ದ ಜಗಮೋಹನ್‌ ಉಪ ರಾಜ್ಯಪಾಲರಾಗಿ ನೇಮಕಗೊಂಡರು.

Russia -Ukraine Crisis:ಪುಟಿನ್ ಅಂತಿಮವಾಗಿ ಸಾಧಿಸಲು ಹೊರಟಿರುವುದು ಏನನ್ನು?

1990ರ ಜನವರಿ 18ಕ್ಕೆ ಬಿಎಸ್‌ಎಫ್‌ ವಿಮಾನದ ಮೂಲಕ ಜಮ್ಮುಗೆ ಬಂದು ಇಳಿದರಾದರೂ ಎರಡು ದಿನ ಶ್ರೀನಗರದಲ್ಲಿ ಮಂಜು ಬೀಳುತ್ತಿದ್ದರಿಂದ ಅವರ ವಿಮಾನ ಅಲ್ಲಿಗೆ ಹೋಗಲಿಲ್ಲ. 21ಕ್ಕೆ ಶ್ರೀನಗರಕ್ಕೆ ಜಗಮೋಹನ್‌ ಬರುವ ಮುನ್ನ ಜ.19ರ ರಾತ್ರಿ 4 ಲಕ್ಷಕ್ಕೂ ಹೆಚ್ಚು ಪಂಡಿತರ ವಲಸೆ ನಡೆದು ಹೋಗಿತ್ತು. 21ಕ್ಕೆ ಬಂದು ಜಗಮೋಹನ್‌ ಮಾಡಿದ ಮೊದಲ ಕೆಲಸ ಅಂದರೆ ಕಫä್ರ್ಯ ಕಟ್ಟುನಿಟ್ಟು ಮಾಡಿದ್ದು. ಹೀಗಾಗಿ ಜ.26ರಂದು ಶ್ರೀನಗರದ ಈದ್ಗಾ ಮೈದಾನದಲ್ಲಿ ಲಕ್ಷಾಂತರ ಯುವಕರನ್ನು ಸೇರಿಸುವ ಯೋಜನೆ ವಿಫಲ ಆಯಿತು. ಆದರೆ ಪ್ರತ್ಯೇಕತಾವಾದಿಗಳು ಮಾಡಿದ ಪ್ರಚಾರ ಏನು ಎಂದರೆ ಜಗಮೋಹನ್‌ ಬಂದು ಪಂಡಿತರನ್ನು ಜಮ್ಮುವಿಗೆ ಕರೆದುಕೊಂಡು ಹೋದರು ಎಂದು. ಆದರೆ ಅದಕ್ಕೆ ಸಾಕ್ಷ್ಯಗಳಿಲ್ಲ.

ಆಜಾದಿ ಕೂಗಿನ ಹಿಂದಿನ ಕಥೆ

ಇವತ್ತು ಕೆಲ ಹುಡುಗರು ಆಜಾದಿ ಆಜಾದಿ ಎಂದು ಘೋಷಣೆ ಕೂಗುತ್ತಾರೆ. ಆದರೆ ಹಾಗೆ ಕೂಗುವವರಿಗೆ ಇತಿಹಾಸದ ಅರಿವು ಇರಬೇಕು. ಫೆ.27, 1990ರಂದು ಶ್ರೀನಗರದ ಹಬ್ಬಾ ಕದಲ…ನಲ್ಲಿ ಮನೆಗೆ ಹೊರಟಿದ್ದ ಕೇಂದ್ರ ಸರ್ಕಾರಿ ನೌಕರ ನವೀನ್‌ ಸಫä್ರನನ್ನು ತಡವಿದ ಬಂದೂಕುಧಾರಿ ಕಾಶ್ಮೀರ ಮುಸ್ಲಿಂ ಯುವಕರು ಆತನಿಗೆ ಗುಂಡು ಹೊಡೆದು ಸಾಯಿಸಿ, ಮೃತ ದೇಹದ ಸುತ್ತ ‘ಹಂ ಕ್ಯಾ ಚಾಹತೆ ಆಜಾದಿ’ ಎಂದು ಬಂದೂಕು ಹಿಡಿದು ಕುಣಿದರು. ಅಷ್ಟಕ್ಕೇ ನಿಲ್ಲಲಿಲ್ಲ, ಅವತ್ತೇ ಸಂಜೆ ತೇಜ್‌ ಎಂಬ ಪಂಡಿತ ಯುವಕನನ್ನು ಅಪಹರಿಸಿ ನೇಣು ಹಾಕಲಾಯಿತು. ಅಲ್ಲಿ ಹಿಮ್ಮೇಳದಲ್ಲಿ ಕೇಳಿಬಂದಿದ್ದು ‘ಇವೇ ಹಿಂದೂಸ್ತಾನ ಸೇ ಆಜಾದಿ’ ಘೋಷಣೆಗಳು.

ಕಮ್ಯುನಿಸ್ಟ್‌ ರಿಷಿದೇವ್‌ ಬರೆದ ಸತ್ಯ

1990ರ ಕಾಲಘಟ್ಟದಲ್ಲಿ ಶ್ರೀನಗರದಲ್ಲಿ ಕಾಮ್ರೇಡ್‌ ರಿಷಿದೇವ್‌ ಎಂಬ ಕಮ್ಯುನಿಸ್ಟ್‌ ಚಿಂತಕ ಒಬ್ಬರಿದ್ದರು. ಅವರು ಸ್ವತಃ ಕಾಶ್ಮೀರಿ ಪಂಡಿತರು. ತಮ್ಮ ಪೊಲಿಟಿಕಲ್ ಡೈರಿಯಲ್ಲಿ ಅವರು ಬರೆದಿರುವ ಪ್ರಕಾರ, 1990ರ ಪಂಡಿತರ ಮಾರಣಹೋಮದ ಘಟನೆಗಳ ನಂತರ ಅವರು ದಿಲ್ಲಿಗೆ ಆಗಿನ ಸಿಪಿಎಂ ನಾಯಕ ಹರಕಿಶನ್‌ ಸಿಂಗ್‌ ಸುರ್ಜಿತ್‌ ಬಳಿಗೆ ಹೋಗಿ,‘ಕಾಶ್ಮೀರದ ಧಾರ್ಮಿಕ ಅಲ್ಪಸಂಖ್ಯಾತರ ಪರವಾಗಿ ನಾವು ಮಾತನಾಡಬೇಕು’ ಎಂದಾಗ ಸುರ್ಜಿತ್‌, ‘ಇಂಥದ್ದೆಲ್ಲಾ ಆಗುತ್ತಿರುತ್ತದೆ, ನೀವು ಸುಮ್ಮನಿರಿ’ ಎಂದು ವಾಪಸ್‌ ಕಳುಹಿಸಿದರಂತೆ.

- ಪ್ರಶಾಂತ್ ನಾತು, ಇಂಡಿಯಾ ಗೇಟ್ 

- ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios