2-4 ವಾರದಲ್ಲಿ 3ನೇ ಅಲೆ! 2ನೇ ಅಲೆಗಿಂತ ಭೀಕರ
- ಕೊರೋನಾ 2ನೇ ಅಲೆಯ ವೇಳೆ ದೇಶದಲ್ಲೇ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿದ್ದ ಮಹಾರಾಷ್ಟ್ರ
- ಮುಂದಿನ 2ರಿಂದ 4 ವಾರದಲ್ಲಿ 3ನೇ ಅಲೆ ಅಪ್ಪಳಿಸಬಹುದು ಎಂದು ತಜ್ಞರು ಎಚ್ಚರಿಕೆ
ಮುಂಬೈ (ಜೂ.18): ಕೊರೋನಾ 2ನೇ ಅಲೆಯ ವೇಳೆ ದೇಶದಲ್ಲೇ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿದ್ದ ಮಹಾರಾಷ್ಟ್ರಕ್ಕೆ ಮುಂದಿನ 2ರಿಂದ 4 ವಾರದಲ್ಲಿ 3ನೇ ಅಲೆ ಅಪ್ಪಳಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅದರಿಂದಾಗಿ ಈಗಷ್ಟೇ 2ನೇ ಅಲೆ ಇಳಿಕೆಯಾಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದ ಮಹಾರಾಷ್ಟ್ರಕ್ಕೆ ಮತ್ತೆ ಆತಂಕ ಎದುರಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, 3ನೇ ಅಲೆಯು 2ನೇ ಅಲೆಗಿಂತ ತೀವ್ರವಾಗಿರಲಿದೆ ಮತ್ತು ಈ ಅಲೆಯಲ್ಲಿ ಕೆಳ ಮಧ್ಯಮ ವರ್ಗದವರು ಹೆಚ್ಚು ನಷ್ಟಅನುಭವಿಸಲಿದ್ದಾರೆ ಎಂದು ತಜ್ಞರ ಸಮಿತಿ ಹೇಳಿದೆ.
2ನೇ ಹಂತದ ಅನ್ ಲಾಕ್‌ಗೆ ಸಿದ್ಧತೆ, ಯಾವುದಕ್ಕೆಲ್ಲ ವಿನಾಯಿತಿ? ..
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡೆಸಿದ ಸಭೆಯಲ್ಲಿ ರಾಜ್ಯ ಕೊರೋನಾ ಕಾರ್ಯಪಡೆಯ ತಜ್ಞರು ಈ ಕುರಿತು ವರದಿ ಮಂಡಿಸಿದ್ದಾರೆ. ಅದರಲ್ಲಿ ರಾಜ್ಯಕ್ಕೆ 2ರಿಂದ 4 ವಾರದಲ್ಲಿ 3ನೇ ಅಲೆ ಬರಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಮಾಧಾನಕರ ಸಂಗತಿಯೆಂದರೆ, ಈ ಹಿಂದೆ ನಿರೀಕ್ಷಿಸಿದ್ದಂತೆ 3ನೇ ಅಲೆಯು ಮಕ್ಕಳಿಗೆ ಮಾರಕವಾಗುವ ಲಕ್ಷಣ ಕಾಣಿಸುತ್ತಿಲ್ಲ. ಆದರೆ, 3ನೇ ಅಲೆ ಗರಿಷ್ಠಕ್ಕೆ ತಲುಪಿದಾಗ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕೆ ಏರಬಹುದು. 3ನೇ ಅಲೆ ಸುಮಾರು 100 ದಿನಗಳ ಕಾಲ ರಾಜ್ಯವನ್ನು ಬಾಧಿಸಬಹುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಅಲೆಯಲ್ಲಿ ಗರಿಷ್ಠ 3 ಲಕ್ಷ ಸಕ್ರಿಯ ಪ್ರಕರಣಗಳು, 2ನೇ ಅಲೆಯಲ್ಲಿ 7 ಲಕ್ಷ ಸಕ್ರಿಯ ಪ್ರಕರಣಗಳು ಕಾಣಿಸಿಕೊಂಡಿದ್ದವು. 3ನೇ ಅಲೆಯಲ್ಲಿ ಆ ಸಂಖ್ಯೆ 8 ಲಕ್ಷಕ್ಕೆ ಏರಿಕೆಯಾಗಬಹುದು. 3ನೇ ಅಲೆಯಲ್ಲಿ ಶೇ.10ರಷ್ಟುಪ್ರಕರಣಗಳು ಮಕ್ಕಳು ಹಾಗೂ ಯುವಜನರಲ್ಲಿ ಕಂಡುಬರಬಹುದು. ಬ್ರಿಟನ್ನಿನಲ್ಲಿ 2ನೇ ಅಲೆ ಇಳಿಕೆಯಾದ ನಂತರ ಕೇವಲ 4 ವಾರಗಳಲ್ಲಿ 3ನೇ ಅಲೆ ಕಾಣಿಸಿಕೊಂಡಂತೆ ನಮ್ಮ ರಾಜ್ಯದಲ್ಲೂ ಆಗಬಹುದು. 1 ಮತ್ತು 2ನೇ ಅಲೆಯಲ್ಲಿ ಹೆಚ್ಚು ಬಾಧಿತರಾಗಿಲ್ಲದ ಕೆಳ ಮಧ್ಯಮ ವರ್ಗದವರೇ ಈ ಬಾರಿ ಹೆಚ್ಚು ಬಾಧಿತರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
"
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ 2ನೇ ಅಲೆ ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನನ್ನು ದೇಶಕ್ಕೇ ಮಾದರಿಯಾಗುವ ರೀತಿಯಲ್ಲಿ 5 ಹಂತಗಳಲ್ಲಿ ಬಹಳ ಎಚ್ಚರಿಕೆಯಿಂದ ಅನ್‌ಲಾಕ್ ಮಾಡಲಾಗಿದೆ. ಆದರೂ 3ನೇ ಅಲೆ ಈಗಲೇ ಬರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದು ತರಾತುರಿಯಲ್ಲಿ 2ನೇ ಅಲೆಯ ಕೊನೆಯಲ್ಲಿ ಅನ್‌ಲಾಕ್ ಮಾಡಿದ ಇತರ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆಯಿದ್ದಂತೆ ಎಂದು ಹೇಳಲಾಗುತ್ತಿದೆ