ರಫೇಲ್ ಯುದ್ಧವಿಮಾನವು ೧೪ ಕ್ಷಿಪಣಿ/ಇಂಧನ ಸ್ಥಾನಗಳನ್ನು ಹೊಂದಿದೆ. ಮೀಟಿಯೋರ್ ಕ್ಷಿಪಣಿಯು ೧೨೦ ಕಿ.ಮೀ ವ್ಯಾಪ್ತಿಯೊಂದಿಗೆ ಶತ್ರು ವಿಮಾನಗಳನ್ನು ನಾಶಪಡಿಸುತ್ತದೆ. ಮಿಕಾ ಕ್ಷಿಪಣಿಯು ೮೦ ಕಿ.ಮೀ ವ್ಯಾಪ್ತಿಯ ಕ್ಷಿಪಣಿ. SCALP ಕ್ಷಿಪಣಿಯು ೩೦೦ ಕಿ.ಮೀ ದೂರದ ಸ್ಥಾವರಗಳನ್ನು ಗುರಿಯಾಗಿಸುತ್ತದೆ. HAMMER ಕ್ಷಿಪಣಿಯು ಬಂಕರುಗಳನ್ನು ನಾಶಮಾಡಲು ಸಮರ್ಥವಾಗಿದೆ. AM 39 EXOCET ಕ್ಷಿಪಣಿಯು ಹಡಗುಗಳನ್ನು ಗುರಿಯಾಗಿಸುತ್ತದೆ. ರಫೇಲ್ ಮಧ್ಯಾಕಾಶದಲ್ಲೇ ಇಂಧನ ತುಂಬಿಸಿಕೊಳ್ಳಬಲ್ಲದು.

'ಆಪರೇಷನ್​ ಸಿಂದೂರ'ದ ಹೀರೊ ಆಗಿ ಮೆರೆದಿರುವ ರಫೇಲ್​ ಯುದ್ಧ ವಿಮಾನ ಹೇಗೆ ಕೆಲಸ ಮಾಡುತ್ತದೆ? ಅದರಲ್ಲಿ ಏನೇನಿದೆ ಇತ್ಯಾದಿಗಳ ಕುರಿತು ರೋಮಾಂಚಕಾರಿ ಮಾಹಿತಿಯನ್ನು ತೆರೆದಿಟ್ಟಿದ್ದಾರೆ ವಿಂಗ್​ ಕಮಾಂಡರ್​ ಸುದರ್ಶನ್​ ಅವರು. ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಅವರು ಬರೆದಿರುವ ಮಾಹಿತಿ ಇಲ್ಲಿ ಹಂಚಿಕೊಳ್ಳಲಾಗಿದೆ... 

ರಫೇಲ್ ವಿಮಾನದ ಹೊಟ್ಟೆಭಾಗದಲ್ಲಿ ಒಟ್ಟು ಹದಿನಾಲ್ಕು strong point ಗಳಿರುತ್ತಾವೆ. ಈ ಪಾಯಿಂಟುಗಳನ್ನು ಕ್ಷಿಪಣಿಗಳನ್ನು ಅಥವಾ ಇಂಧನದ ಟ್ಯಾಂಕುಗಳನ್ನು ಅಳವಡಿಸಲು ಉಪಯೋಗಿಸಲಾಗುತ್ತದೆ. ಇದೊಂದು ಕ್ರಮಪಲ್ಲಟನೆಯ ಸಂಯೋಜನೆ, ಅಂದರೆ ಆಕ್ರಮಣದ ಉದ್ದೇಶದ ಅನುಸಾರವಾಗಿ ವಿವಿಧ ತರಹದ ಮಿಸೈಲುಗಳನ್ನು ಅಳವಡಿಸಲಾಗುತ್ತದೆ. ಒಟ್ಟಿನಲ್ಲಿ ಸುಮಾರು 9500 ಕೇಜಿಯಷ್ಟು ಭಾರವನ್ನು ಸಲೀಸಾಗಿ ಹೇರಿಕೊಂಡು ಹೋಗುತ್ತದೆ. ಬತ್ತಳಿಕೆಯಲ್ಲಿರುವ ಮೊಟ್ಟಮೊದಲ ಬ್ರಹ್ಮಾಸ್ತ್ರದ ಹೆಸರು 'ಮೀಟಿಯೋರ್'. ಪ್ರಪಂಚದ ಬೇರೆ ಯಾವ ದೇಶದಲ್ಲೂ ಈ ಶ್ರೇಣಿ ಮತ್ತು ಸಾಮರ್ಥ್ಯದ ಕ್ಷಿಪಣಿ ಇನ್ನೂ ಬಂದಿಲ್ಲ. ಇದು ರಫೇಲ್ ವಿಮಾನದಿಂದ ಇನ್ನೊಂದು ಯುದ್ಧವಿಮಾನದ ಮೇಲೆ ಪ್ರಯೋಗಿಸುವ ಕ್ಷಿಪಣಿ. ಇದರ ಕಾರ್ಯಪರಿಧಿ ಸುಮಾರು 120 ಕಿಮೀವರೆಗೂ ಇರುತ್ತದೆ. ಅಷ್ಟು ದೂರದವರೆಗೆ ಇದರ ಮಾರ್ಗದರ್ಶನ ಹೇಗೆ ನಡೆಯುತ್ತದೆ ಎನ್ನುವುದು ಬಹಳ ಕೌತುಕದ ಸಂಗತಿ. ಇದೊಂದು ಬಹಳ ಚಾಣಾಕ್ಷ ಕ್ಷಿಪಣಿ. ಶತ್ರು ವಿಮಾನವನ್ನು ರಡಾರಿನಲ್ಲಿ ಸೆರೆಹಿಡಿದು, ತಪ್ಪಿಸಿಕೊಳ್ಳದಂತೆ ಭದ್ರಪಡಿಸಿ ಈ ಕ್ಷಿಪಣಿಯನ್ನು ಫೈರ್ ಮಾಡಿದಕೂಡಲೇ ಅದು ಅತ್ಯಂತ ವೇಗದಲ್ಲಿ ಅಂದರೆ ವಿಮಾನಕ್ಕಿಂತ ದುಪ್ಪಟ್ಟು ವೇಗದಲ್ಲಿ ಶತ್ರು ವಿಮಾನದ ಕಡೆಗೆ ಹಾರಲಾರಂಬಿಸುತ್ತದೆ. ಇದರ ಮಾರ್ಗದರ್ಶನವನ್ನು ರಡಾರಿನಲ್ಲಿ ನಿಯಂತ್ರಿಸಲಾಗುತ್ತದೆ. ಅಕಸ್ಮಾತ್ತಾಗಿ ಪೈಲಟ್ ವಾಯುಕದನದ ವಾತಾವರಣದಲ್ಲಿ ಬ್ಯುಸಿಯಾಗಿ ಬಿಟ್ಟರೆ ಈ ಕ್ಷಿಪಣಿಯ ನಿಯಂತ್ರಣವನ್ನು 'ನೇತ್ರಾ' ವಿಮಾನದಂತಹ ನಿಯಂತ್ರಣ ಕೇಂದ್ರಕ್ಕೆ ಹಸ್ತಾಂತರ ಮಾಡಬಹುದು.

ಇದಕ್ಕೆ ಒಂದು ಜೆಟ್ ಇಂಜಿನ್ ಅಳವಡಿಸಿದ್ದಾರೆ. ಘನ ಇಂಧನವೇ ಇದಕ್ಕೆ ಉರುವಲು. ಆ ಇಂಜಿನ್ನಿನ ಮೇಲೆ ಮತ್ತು ಕ್ಷಿಪಣಿಯ ವೇಗದ ಮೇಲೆ ಪೈಲಟ್ಟಿಗೆ ನಿಯಂತ್ರಣವಿರುತ್ತದೆ, ಹಾಗಾಗಿ ಕ್ಷಿಪಣಿಯ ವೇಗವನ್ನು 1 Mach ನಿಂದ 4.5 Mach ವರೆಗೂ ನಿಯಂತ್ರಿಸಲು ಸಾಧ್ಯವಾಗುತ್ತದೆ. ಶತ್ರು ವಿಮಾನದ ದೂರ ಕಡಿಮೆಯಾಗುತ್ತಿದ್ದಂತೆ ಈ ಕ್ಷಿಪಣಿ 'No Escape Zone' (NEZ) ಎನ್ನುವ ಕೋನವನ್ನು ಪ್ರವೇಶಿಸುತ್ತದೆ. ಇಲ್ಲಿಂದ ಆ ವಿಮಾನ ಧ್ವಂಸವಾಗುವವರೆಗೆ ಅವಶ್ಯಕತೆ ಇರುವ ಎಲ್ಲಾ ಕಸರತ್ತುಗಳನ್ನು ಮಾಡಿ ಅಂತಿಮ ಹಂತದಲ್ಲಿ ಸುಮಾರು 4500 ಕಿಮೀ ವೇಗದಲ್ಲಿ ಡಿಕ್ಕಿ ಹೊಡೆಯುತ್ತದೆ. ಈ ವೇಗಕ್ಕೇನೆ ಆ ವಿಮಾನ ಮತ್ತು ಆಸುಪಾಸಿನ ವಿಮಾನಗಳು ಛಿದ್ರಗೊಳ್ಳುತ್ತವೆ, ಇನ್ನು ಅದರ ಸಿಡಿತಲೆ ಸ್ಪೋಟಗೊಂಡಾಗ ಆಗುವ ಪರಿಣಾಮವನ್ನು ನೀವೇ ಊಹಿಸಿಕೊಳ್ಳಿ.

Operation Sindoor: ಕೊಂದಿದ್ದನ್ನು ಹೋಗಿ ಮೋದಿಗೆ ತಿಳಿಸು ಅಂದಿದ್ದ... ತಿಳಿಸಿದೆ ಅಷ್ಟೇ...

ಇನ್ನು ಈ ಮೀಟಿಯೋರ್ ಗಿಂತ ಸ್ವಲ್ಪ ಚಿಕ್ಕ, ಅದರ ತಮ್ಮನಂತಿರುವ ಕ್ಷಿಪಣಿ 'ಮಿಕಾ'. ಇದೂ ಸಹಾ ಶತ್ರು ವಿಮಾನಗಳ ಮೇಲೆ ಪ್ರಹಾರಿಸುವ, ಸುಮಾರು 80 ಕಿಮೀಗಳ ಪರಿಧಿಯಲ್ಲಿರುವ ವಿಮಾನಗಳನ್ನು ಬಹಳ ಸುಲಭವಾಗಿ ಧ್ವಂಸ ಮಾಡುವ ಸಾಮರ್ಥ್ಯವುಳ್ಳ ಕ್ಷಿಪಣಿ. ಇದನ್ನು Fire and Forget ಮಿಸೈಲ್ ಅಂತನೂ ಕರೀತಾರೆ, ಯಾಕೆಂದರೆ ಇದನ್ನು ಫೈರ್ ಮಾಡಿದ ಕೂಡಲೇ ಅಂತರಿಕ್ಷದಲ್ಲಿ Infra-red ಸಾಂದ್ರತೆಯ ವ್ಯತ್ಯಾಸವನ್ನು ಗಮನಿಸಿ ಯುದ್ಧವಿಮಾನದ ಸಾಂದ್ರತೆಯನ್ನು ಗುರುತಿಸಿ ಅಲ್ಲಿಗೆ ದೌಡಾಯಿಸುತ್ತದೆ. ಇದರ exhaust ನಲ್ಲಿ ಅಳವಡಿಸಿರುವ thrust vector guide vanes ಇವುಗಳ ಸಹಾಯದಿಂದ 4 mach ವೇಗದಲ್ಲಿಯೂ ಲೀಲಾಜಾಲವಾಗಿ ತಿರುಗಾಡಿ ಶತ್ರು ವಿಮಾನವನ್ನು ಗುರುತಿಸಿ ಹೊಡೆದು ಹಾಕುತ್ತದೆ.
ಇನ್ನು ನಮ್ಮ ನೆರೆಹೊರೆಯವರ ನಿದ್ದೆಗೆಡಿಸಿರುವ ಪಾಶುಪತಾಸ್ತ್ರಕ್ಕೆ ಬರೋಣ. ಹೆಸರು SCALP ಕ್ಷಿಪಣಿ, Storm Shadow ಅಂತಾನೂ ಕರೀತಾರೆ. 1300 ಕೇಜಿ ತೂಕದ ದೈತ್ಯ 300 ಕಿಮೀ ದೂರದ ಶತ್ರುಗಳ ಸ್ಥಾವರಗಳ ಮೇಲೆ 450 ಕೇಜಿಯಷ್ಟು ಸ್ಪೋಟಕ ವಸ್ತುಗಳಿಂದ ನಿರ್ದಿಷ್ಟ ಗುರಿಯಿಂದ ದಾಳಿಮಾಡುತ್ತಿದ್ದರೆ ಅಲ್ಲಿಗೆ ಮುಗಿಯಿತು ಶತ್ರುಗಳ ಕಥೆ. ಇಸ್ಲಾಮಿಕ್ ಬಾಂಬುಗಳನ್ನು ಶೇಖರಿಸಿಟ್ಟಿರುವ ಕಹುಟಾ ಅಣುಸ್ಥಾವರವು ಸೇರಿದಂತೆ ಇಡೀ ಪಾಕಿಸ್ತಾನವೇ ಇದರ ಕಾರ್ಯಪರಿಧಿಯಲ್ಲಿ ಬರುತ್ತದೆ. ಸಿರಿಯಾದ ಐಸಿಸ್ ಪಡೆಗಳು ಹತವಾಗಿದ್ದೇ ಈ ಮಿಸೈಲುಗಳ ದಾಳಿಯಿಂದ.

ಇತ್ತೀಚಿನ ಗಲ್ವಾನ್ ಕಣಿವೆಯಲ್ಲಿ ಚೀನಾದ ದುಷ್ಕರ್ಮಿಗಳ ದುಸ್ಸಾಹಸಕ್ಕೆ ಪ್ರತಿಯಾಗಿ ಅವರಿಗೆಂದೇ ಭಾರತ ತುರ್ತಾಗಿ ಇನ್ನೊಂದು ಮಿಸೈಲ್ ಖರೀದಿಸಿದೆ, ಹೆಸರು HAMMER, ಪರ್ವತ ಶಿಖರಗಳಲ್ಲಿ ಕಟ್ಟಿರುವ ಬಂಕರುಗಳನ್ನು ಹುಡುಕಿಕೊಂಡು ಹೋಗಿ ಮಟಾಷ್ ಮಾಡುವ ಸಾಮರ್ಥ್ಯವುಳ್ಳದ್ದು. ಬಾಲಾಕೋಟಿನ ದಾಳಿಯಲ್ಲಿ ಪ್ರಯೋಗಿಸಿದ್ದ SPICE ಮಿಸೈಲುಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆಯಂತೆ. ಇವುಗಳ ಕಾರ್ಯಪರಿಧಿ 60 ಕಿಮೀನಷ್ಟಿದೆ. ಇನ್ನು ಹಿಂದೂ ಮಹಾಸಾಗರದಲ್ಲಿ ನಡೆಯಬಹುದಾದ ಕಾರ್ಯಾಚರಣೆಗೆ ರಫೇಲ್ ವಿಮಾನದಲ್ಲಿ AM 39 EXOCET ಕ್ಷಿಪಣಿಗಳನ್ನು ಅಳವಡಿಕೆ ಸಾಧ್ಯ. ಇವು ಚೀನಾದ ಹಡಗುಗಳ ಮೇಲೆ ದಾಳಿ ಮಾಡುವ ಸಮಯದಲ್ಲಿ ಕೆಲಸಕ್ಕೆ ಬರುತ್ತವೆ. ರಣನೀತಿಗೆ ತಕ್ಕಂತೆ ಲೇಸರ್ ಗೈಡೆಡ್ ಬಾಂಬುಗಳು, NEXTER 30M 79130 ಗನ್ನುಗಳನ್ನೂ ಅಳವಡಿಸಲಾಗಿದೆ.

ಅಂತರಿಕ್ಷದಲ್ಲೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವಿರುವುದರಿಂದ ರಫೇಲ್ ವಿಮಾನ ಸುಮಾರು ಹತ್ತು ಗಂಟೆಗಳ ಅವಧಿಯವರೆಗೂ ಇಷ್ಟೆಲ್ಲಾ ಕ್ಷಿಪಣಿಗಳನ್ನು ಹೊತ್ತುಕೊಂಡು ಹಾರಾಡುತ್ತಾ ಒಂದೊಂದೇ ಕ್ಷಿಪಣಿಗಳನ್ನು ಶತ್ರುಗಳ ಮೇಲೆ ಪ್ರಯೋಗಿಸುತ್ತಿದ್ದ ಜಲ್ವಂತ ನಿದರ್ಶನಗಳು ಈಗಾಗಲೇ ಸ್ಥಾಪಿತವಾಗಿವೆ. ಇದಕ್ಕೇ ಹೇಳೋದು ರಫೇಲಿನಿಂದ ರಣತಂತ್ರದ ದಿಕ್ಕು, ಆಯಾಮ ಊಹಿಸಲೂ ಸಾಧ್ಯವಿಲ್ಲದಷ್ಟು ಬದಲಾಗಿ ಹೋಗಲಿದೆ ಅಂತಾ.

Operation Sindoor: ಸಿಂದೂರ ಕಸಿದ ಉಗ್ರರ ಮಟ್ಟ ಹಾಕಲು ನಿಂತ ಸೋಫಿಯಾ, ವ್ಯೋಮಿಕಾ