Ahmedabad Aircraft Crash Live Updates: ಮೇಘನಿನಗರ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ವ್ಯಾಪಕ ಭೀತಿ ಮತ್ತು ಅವ್ಯವಸ್ಥೆ ಉಂಟಾಗಿದೆ. ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಅಹಮದಾಬಾದ್ (ಜೂ.12): ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನೂರಾರು ಪ್ರಯಾಣಿಕರನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೆ ಈಡಾಗಿದೆ. ವಿಮಾನವು ಮೇಘನಿನಗರ ಪ್ರದೇಶದಲ್ಲಿ ಪತನಗೊಂಡಿದ್ದು, ವ್ಯಾಪಕ ಭೀತಿ ಮತ್ತು ಅವ್ಯವಸ್ಥೆ ಉಂಟಾಗಿದೆ. ಇದರ ನಡುವೆ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದೇ ವಿಮಾನದಲ್ಲಿ ಅಹಮದಾಬಾದ್‌ನಿಂದ ಪ್ರಯಾಣ ಮಾಡಿದ್ದರು ಎಂದು ವರದಿಯಾಗಿದ್ದು ಅವರ ಆರೋಗ್ಯದ ಬಗ್ಗೆ ಕಳವಳ ಂಟಾಗಿದೆ.
ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಏರುತ್ತಿರುವುದು ಕಂಡುಬಂದಿದ್ದು, ಇದು ವಸ್ತ್ರಾಪುರದವರೆಗೂ ಗೋಚರಿಸುತ್ತಿದೆ. ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸ್ಥಿತಿ ಇನ್ನೂ ತಿಳಿದಿಲ್ಲ.
ಇನ್ನೂ ಕೆಲವು ಮಾಹಿತಿಗಳ ಪ್ರಕಾರ ವಿಜಯ್ ರೂಪಾನಿ ಹಾಗೂ ಅವರ ಸಂಬಂಧಿಗಳು ಕೂಡ ಈ ವಿಮಾನದಲ್ಲಿದ್ದರು ಎನ್ನಲಾಗಿದೆ. 12 ಮಂದಿ ಸಿಬ್ಬಂದಿ ಹಾಗೂ 230 ಮಂದಿ ಪ್ರಯಾಣಿಕರು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿದ್ದರು ಎನ್ನಲಾಗಿದೆ.
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ವಿಮಾನವು 242 ಪ್ರಯಾಣಿಕರನ್ನು ಹೊಂದಿದ್ದ ಏರ್ ಇಂಡಿಯಾ ವಿಮಾನವಾಗಿದ್ದು, ಲಂಡನ್‌ಗೆ ಹೋಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕಟಣೆ ನೀಡಿದ ಏರ್ ಇಂಡಿಯಾ
"ಅಹಮದಾಬಾದ್-ಲಂಡನ್ ಗ್ಯಾಟ್ವಿಕ್ ನಡುವೆ ಕಾರ್ಯನಿರ್ವಹಿಸುತ್ತಿದ್ದ ಫ್ಲೈಟ್ AI171 ಇಂದು, ಜೂನ್ 12, 2025 ರಂದು ಒಂದು ಘಟನೆಯಲ್ಲಿ ಭಾಗಿಯಾಗಿದೆ. ಈ ಸಮಯದಲ್ಲಿ, ನಾವು ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಹೆಚ್ಚಿನ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತೇವೆ" ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
