ನವದೆಹಲಿ(ಜು.09): ಮಾರ್ಚ್, ಏಪ್ರಿಲ್‌ ತಿಂಗಳಲ್ಲಿ ಕೊರೋನಾ ವೈರಸ್‌ನಿಂದ ಸಂಪೂರ್ಣ ನಲುಗಿ ಹೋಗಿದ್ದ ಯುರೋಪ್‌ ಖಂಡದಲ್ಲಿ ಈಗ ಪರಿಸ್ಥಿತಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸುಧಾರಣೆಯಾಗಿದೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.

"

ಯಾವುದೇ ದೇಶದಲ್ಲಿ ಕೊರೋನಾ ತನ್ನ ಗರಿಷ್ಠ ಮಟ್ಟತಲುಪಿದ ಬಳಿಕ ಅದರ ಉಗ್ರ ಪ್ರತಾಪ ಕಡಿಮೆಯಾಗುತ್ತದೆ ಎಂಬ ವಿಜ್ಞಾನಿಗಳು, ವೈದ್ಯರ ವಾದಕ್ಕೆ ಈ ಬೆಳವಣಿಗೆ ಪೂರಕವಾಗಿದೆ. ಹೀಗಾಗಿ, ಭಾರಿ ಪ್ರಮಾಣದಲ್ಲಿ ಸೋಂಕು ವರದಿಯಾಗುತ್ತಿರುವ ಭಾರತಕ್ಕೆ ಯುರೋಪ್‌ ಖಂಡ ಈಗ ಆಶಾಕಿರಣವಾಗಿ ಗೋಚರಿಸತೊಡಗಿದೆ.

ಇಂದು (ಬುಧವಾರ) ಒಂದೇ ದಿನ ಕರ್ನಾಟಕದಲ್ಲಿ 2 ಸಾವಿರ ಗಡಿದಾಟಿದ ಕೊರೋನಾ...!

ಇಟಲಿ, ಬ್ರಿಟನ್‌, ಸ್ಪೇನ್‌, ಫ್ರಾನ್ಸ್‌ ಸೇರಿದಂತೆ ಐರೋಪ್ಯ ಖಂಡದ ಹಲವು ದೇಶಗಳಲ್ಲಿ ಮಾಚ್‌ರ್‍, ಏಪ್ರಿಲ್‌ ಅವಧಿಯಲ್ಲಿ ಪ್ರತಿನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದವು. ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಹೊಂದಿದ್ದರೂ ರೋಗಿಗಳ ಪ್ರವಾಹದಿಂದ ಆರೋಗ್ಯ ವ್ಯವಸ್ಥೆಯೇ ಬುಡಮೇಲಾಗಿತ್ತು. ಸಾವಿನ ಪ್ರಮಾಣ ಹೆಚ್ಚಾಗಿ, ಶವ ವಿಲೇವಾರಿಯೇ ಸಮಸ್ಯೆಯಾಗಿತ್ತು. ಆದರೆ, ಈಗ ನಿತ್ಯ 500ಕ್ಕಿಂತಲೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದು, ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸದ್ಯ ಅಮೆರಿಕ, ಭಾರತ ಮತ್ತು ಬ್ರೆಜಿಲ್‌ಗಳಲ್ಲಿ ಮಾತ್ರ ಕೊರೋನಾ ಮಹಾಮಾರಿ ತಾಂಡವವಾಡುತ್ತಿದೆ.

ಕೊರೋನಾದ ಉಗಮಸ್ಥಾನವಾದ ಚೀನಾದಲ್ಲಿ ಈಗ ಕೊರೋನಾ ಪ್ರಕರಣಗಳು ಬೆರಳೆಣಿಕೆಯಷ್ಟಿವೆ. ಸಾವು ಶೂನ್ಯಕ್ಕೆ ಇಳಿದಿದೆ. ಹೀಗಾಗಿ ಕೊರೋನಾ ವೈರಸ್‌ ಒಮ್ಮೆ ಉಚ್ಛ್ರಾಯ ಸ್ಥಿತಿ ತಲುಪಿದ ಬಳಿಕ ಹಂತ ಹಂತವಾಗಿ ಇಳಿಕೆಯಾಗುತ್ತದೆ ಎಂಬುದಕ್ಕೆ ಇದು ಕೂಡ ಪುರಾವೆಯಂತಿದೆ.

ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು....

ಕೊರೋನಾ ಸಾವಿನ ಮನೆಯಾಗಿದ್ದ ಸ್ಪೇನ್‌ನಲ್ಲಿ ಮಂಗಳವಾರ ಕೇವಲ 4 ಮಂದಿ ಸಾವನ್ನಪ್ಪಿದ್ದರೆ, ಇಟಲಿಯಲ್ಲಿ 30 ಮಂದಿ ಬಲಿಯಾಗಿದ್ದಾರೆ. ಬ್ರಿಟನ್‌ನಲ್ಲಿ ದೈನಂದಿನ ಸಾವಿನ ಸಂಖ್ಯೆ 155ಕ್ಕೆ ಇಳಿಕೆಯಾಗಿದೆ. ಮತ್ತೊಂದೆಡೆ ರಷ್ಯಾದಲ್ಲೂ ಸಾವಿನ ಪ್ರಮಾಣ 198ಕ್ಕೆ ಇಳಿದಿದೆ.

ಕೊರೋನಾ ವೈರಸ್‌ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಯುರೋಪ್‌ ಸಹಜ ಸ್ಥಿತಿಗೆ ಮರಳುತ್ತಿದ್ದು, ಲಾಕ್‌ಡೌನ್‌ ನಿಯಮಗಳನ್ನು ಹಿಂಪಡೆದುಕೊಳ್ಳಲಾಗಿದೆ. ಲಾಕ್‌ಡೌನ್‌ ಹಿಂಪಡೆದರೂ ಯುರೋಪ್‌ನಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಪ್ರತಿನಿತ್ಯದ ಸೋಂಕಿನ ಪ್ರಮಾಣ

ದೇಶ ಮಾರ್ಚ್- ಏಪ್ರಿಲ್‌ ಜುಲೈ

ಇಟಲಿ 6553 137

ಸ್ಪೇನ್‌ 8271 341

ಫ್ರಾನ್ಸ್‌ 7578 475

ಜರ್ಮನಿ 6933 298

ಬ್ರಿಟನ್‌ 7837 581

ಚೀನಾ 14108 8

ಪ್ರತಿನಿತ್ಯದ ಸಾವಿನ ಪ್ರಮಾಣ

ದೇಶ ಮಾರ್ಚ್‌- ಏಪ್ರಿಲ್‌ ಜುಲೈ

ಇಟಲಿ 917 30

ಸ್ಪೇನ್‌ 961 4

ಫ್ರಾನ್ಸ್‌ 1438 13

ಜರ್ಮನಿ 333 11

ಬ್ರಿಟನ್‌ 1172 155

ಚೀನಾ 1290 0