ಹೈದರಾಬಾದ್(ನ.25)‌: ದಕ್ಷಿಣ ಭಾರತ ಸಂಪೂರ್ಣ ಕೇಸರೀಕರಣಗೊಳ್ಳಲಿದ್ದು, ಅದರ ಪ್ರಾರಂಭ ಹೈದರಾಬಾದ್‌ನಿಂದಲೇ ಆಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ. ಗ್ರೇಟರ್‌ ಹೈದರಾಬಾದ್‌ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಹೈದಬಾದ್‌ಗೆ ತೆರಳಿರುವ ಅವರು, ಸದ್ಯ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಟಿಆರ್‌ಎಸ್‌ ಪಕ್ಷ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಕುಟುಂಬ ರಾಜಕಾರಣವೇ ಮೇಲುಗೈ ಸಾಧಿಸಿದೆ. ಗೋಲ್ಡನ್‌ ತೆಲಂಗಾಣದ ಬಗ್ಗೆ ಭರವಸೆ ಕೊಟ್ಟಿದ್ದರು, ಆದರೆ ಅವರ ಕುಟುಂಬವೇ ಗೋಲ್ಡನ್‌ ಆಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ವಿರುದ್ಧ ಕಿಡಿ ಕಾರಿದರು.

ಹೈದರಾಬಾದ್‌ ಹೆಸರು ಬದಲಿಸಿದ ತೇಜಸ್ವಿ ಸೂರ್ಯ, ಭಾಗ್ಯನಗರ!

ಮುಂದಿನ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಇದು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ತೆಲಂಗಾಣವನ್ನೂ ಗೆಲ್ಲುತ್ತೇವೆ, ತಮಿಳುನಾಡು ಹಾಗೂ ಕೇರಳವನ್ನೂ ಗೆಲ್ಲುತ್ತೇವೆ. ದಕ್ಷಿಣ ಭಾರತದ ಸಂಪೂರ್ಣ ಕೇಸರಿಕರಣ ಹೈದರಾಬಾದ್‌ನಿಂದಲೇ ಪ್ರಾರಂಭವಾಗಲಿದೆ ಎಂದು ಹೇಳಿದರು.

ಇದೇ ವೇಳೆ 1969ರ ತೆಲಂಗಾಣ ಚಳುವಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವ ಸಲುವಾಗಿ ಒಸ್ಮಾನಿಯಾ ವಿಶ್ವ ವಿದ್ಯಾನಿಲಯ ಪ್ರವೇಶ ಮಾಡುವ ತೇಜಸ್ವಿ ಹಾಗೂ ಬೆಂಬಲಿಗರನ್ನು ಪೊಲೀಸರು ತಡೆದರು. ಈ ವೇಳೆ ಬ್ಯಾರಿಕೇಡ್‌ಗಳನ್ನು ತಳ್ಳಿ ವಿವಿಯೊಳಗೆ ನುಗ್ಗಿದ ಪ್ರಸಂಗವೂ ನಡೆಯಿತು.

ಜಿನ್ನಾರ ಮತ್ತೊಂದು ಅವತಾರ ಓವೈಸಿ: ಹೈದ್ರಾಬಾದ್‌ ಚುನಾವಣೆ, ತೇಜಸ್ವಿ ಸೂರ್ಯ ರಣಕಹಳೆ!

ಬ್ಯಾರಿಕೇಡ್‌ಗಳನ್ನು ಮುರಿದು ಒಸ್ಮಾನಿಯಾ ವಿಶ್ವ ವಿದ್ಯಾನಿಲಯಕ್ಕೆ ಪ್ರವೇಶ ಮಾಡಿದ್ದಾರೆ ಎನ್ನುವ ಸುದ್ದಿಯನ್ನು ಪೊಲೀಸರು ನಿರಾಕರಿಸಿದ್ದಾರೆ. ಅಲ್ಲಿ ಯಾವುದೇ ಘರ್ಷಣೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಕಾರ್ಯಕ್ರಮ ಯುವ ಮೋರ್ಚಾದಿಂದ ಒಸ್ಮಾನಿಯ ವಿವಿಯಲ್ಲಿ ಆಯೋಜಿಸಲಾಗಿತ್ತು. ಮುಂಜಾಗೃತ ಕ್ರಮವಾಗಿ ಅಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಮೆರವಣಿಗೆ ಮೂಲಕ ತನ್ನ ಬೆಂಬಲಿಗರೊಂದಿಗೆ ಬಂದು ಬ್ಯಾರಿಕೇಡ್‌ಗಳನ್ನು ಮುರಿದು ವಿವಿಯೊಳಗೆ ನುಗ್ಗಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಇದನ್ನು ನೋಡಿಯೂ ಸುಮ್ಮನಿದ್ದರು ಎನ್ನಲಾಗಿದೆ. ಆದರೆ ಇದನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.

ಇದೇ ವೇಳೆ ಬ್ಯಾರಿಕೇಡ್‌ ಹಾಕಿ ತಡೆಯಲೆತ್ನಿಸಿದ ತೆಲಂಗಾಣದ ಕೆ. ಚಂದ್ರಶೇಖರ್‌ ರಾವ್‌ ಅವರ ಸರ್ಕಾರವನ್ನು ತೇಜಸ್ವಿ ತರಾಟೆಗೆ ತೆಗೆದುಕೊಂಡಿದ್ದು, ಎಷ್ಟುತಡೆಯುತ್ತಿರೋ ನೋಡುತ್ತೇವೆ. ಹುತಾತ್ಮರಿಗೆ ಗೌರವ ಸಲ್ಲಿಸುವ ನಮ್ಮ ಪ್ರಯತ್ನವನ್ನು ಯಾರೂ ತಡೆಯಲಾರರು ಎಂದು ಹೇಳಿದ್ದಾರೆ.