ದಕ್ಷಿಣ ಭಾರತದ ಜ್ಯೋತಿಷಿಯೊಬ್ಬರು ಸೂಚಿಸಿದ ನಂಬರ್‌ನ ಲಾಟರಿ ಟಿಕೆಟ್ ಖರೀದಿಸಿದ ತಮಿಳುನಾಡು ಮೂಲದ ಅರವಿಂದನ್ ದುಬೈನಲ್ಲಿ ಭಾರಿ ಮೊತ್ತದ ಲಾಟರಿ ಗೆದ್ದಿದ್ದಾರೆ. ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಹಣದ ಅಗತ್ಯವಿದ್ದ ಸಮಯದಲ್ಲಿ 6.3 ಲಕ್ಷ ರೂ. ಜಾಕ್‌ಪಾಟ್ ಒಲಿದು ಬಂದಿದೆ.

ನವದೆಹಲಿ: ದಕ್ಷಿಣ ಭಾರತದ ಜ್ಯೋತಿಷಿ ಒಬ್ಬರ ಸೂಚನೆಯಂತೆ ಅಬುಧಾಬಿಯಲ್ಲಿ ವ್ಯಕ್ತಿಯೊಬ್ಬರು ಲಾಟರಿ ಗೆದ್ದಿದ್ದಾರೆ. ಜ್ಯೋತಿಷಿ ಸೂಚಿಸಿದ ನಂಬರ್ ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಜಾಕ್‌ಪಾಟ್ ಹೊಡೆದಿದೆ.

ಅರವಿಂದನ್ ಕೆ.ಅಬುಧಾಬಿಯಲ್ಲಿ ಲಾಟರಿ ಗೆದ್ದ ವ್ಯಕ್ತಿ. ಮೂಲತಃ ತಮಿಳುನಾಡಿನವರಾಗಿರುವ ಅರವಿಂದನ್ ಅಬುಧಾಬಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರ್ ಆಗಿರುವ ಅರವಿಂದನ್ ಕಳೆದ ಒಂದು ವರ್ಷಗಳಿಂದ ನಾಲ್ವರು ಸ್ನೇಹಿತರೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಪ್ರತಿಬಾರಿ ಸ್ನೇಹಿತರ ಜೊತೆ ಹೋಗಿ ಟಿಕೆಟ್ ಖರೀದಿಸುತ್ತಿದ್ದ ಅರವಿಂದನ್, ಈ ಬಾರಿ ತಮ್ಮ ಸಹೋದರನ ಜೊತೆ ಜಂಟಿಯಾಗಿ ಟಿಕೆಟ್ ಖರೀದಿಸಿದ್ದರು ಎನ್ನಲಾಗಿದೆ.

ಇನ್ನು, ಟಿಕೆಟ್ ಖರೀದಿಸಲು ಹೋದಾಗ ದಕ್ಷಿಣ ಭಾರತದ ಜ್ಯೋತಿಷಿ ಅವರು ನೀಡಿದ ಸಲಹೆಯಂತೆ, ಅವರು ಸೂಚಿಸಿರುವ ನಂಬರ್‍‌ಗಳನ್ನು ಹೊಂದಿರುವ ಲಾಟರಿ ಟಿಕೆಟ್ ಖರೀದಿಸಿದ್ದರು ಎನ್ನಲಾಗಿದೆ. ಗಲ್ಫ್ ನ್ಯೂಸ್ ಪ್ರಕಾರ, ತನ್ನ ಸಹೋದರನೊಂದಿಗೆ ಜಂಟಿಯಾಗಿ ಟಿಕೆಟ್ ಖರೀದಿಸಿದ ನಂತರ ಲಾಟರಿ ಗೆದ್ದಿರುವ ಕರೆ ಬಂದಿದೆ.

ಅರವಿಂದನ್ ಗಲ್ಫ್‌ ನ್ಯೂಸ್‌ಗೆ ನೀಡಿರುವ ಮಾಹಿತಿ ಪ್ರಕಾರ, ಲಾಟರಿ ಆಯೋಜಕರಿಂದ ಕರೆ ಬಂದಾಗ ನಾನು ತುಂಬಾನೇ ಎಕ್ಸೈಟ್ ಆಗಿದ್ದೆ. ಕೊನೆಗೂ ನನ್ನ ಅದೃಷ್ಟ ಕೈಹಿಡಿದಿದೆ. ನನ್ನ ಕುಟುಂಬಕ್ಕೆ ಈ ಆರ್ಥಿಕ ನೆರವು ಅಗತ್ಯವಾಗಿತ್ತು. ವಿಶೇಷವಾಗಿ ನನ್ನ ತಾಯಿಯ ವೈದ್ಯಕೀಯ ವೆಚ್ಚಗಳಿಗೆ ಹಣದ ಅಗತ್ಯ ಇತ್ತು. ತುಂಬಾ ಅಗತ್ಯ ಇರುವ ಸಮಯದಲ್ಲೇ ನನಗೆ ಹಣ ಸಿಕ್ಕಿದೆ. ನನಗೆ ಬಹಳ ಸಂತೋಷವಾಗಿದೆ ಎಂದಿದ್ದಾರೆ ಎಂದು ವರದಿಯಾಗಿದೆ.

ಗೆದ್ದಿರುವ ಹಣ ಎಷ್ಟು?

35 ವರ್ಷದ ಅರವಿಂದನ್ ದೊಡ್ಡ ಪ್ರಮಾಣದಲ್ಲಿ ಹಣವನ್ನು ಗೆದ್ದಿಲ್ಲ. 25,0000 ದಿರ್ಹಮ್ (ಭಾರತೀಯ ಕರೆನ್ಸಿಯಲ್ಲಿ 6.3 ಲಕ್ಷ ರೂಪಾಯಿ) ಗೆದ್ದಿದ್ದಾರೆ. ತಾಯಿಯ ವೈದ್ಯಕೀಯ ಖರ್ಚುಗಳಿಗೆ ಹಣ ಹುಡುಕುತ್ತಿದ್ದಾಗ ಲಾಟರಿ ಹೊಡೆದಿರೋದು ದೊಡ್ಡ ವರದಾನ ಆಗಿದೆ. ಇನ್ನು, ಇದೇ ನಂಬರ್‍‌ನ ಲಾಟರಿ ಟಿಕೆಟ್ ಖರೀದಿಸು ಎಂದು ಸಲಹೆ ನೀಡಿದ್ದ ಜ್ಯೋತಿಷಿ ಯಾರು ಎಂಬುವುದರ ಬಗ್ಗೆ ರಿವೀಲ್ ಆಗಿಲ್ಲ. ಇದೀಗ ಜ್ಯೋತಿಷಿ ಮಾತನ್ನು ನಂಬಿ ಲಾಟರಿ ಟಿಕೆಟ್ ಖರೀದಿಸಿದರೆ ವರ್ಕೌಟ್ ಆಗಲಿದೆಯಾ ಎಂಬ ಚರ್ಚೆ ಶುರುವಾಗಿದೆ.

ಅರವಿಂದನ್ ಅವರಿಗೆ ಕಷ್ಟದ ಸಂದರ್ಭದಲ್ಲಿ ಲಾಟರಿ ಸಿಕ್ಕಿದೆ. ಡಿಸೆಂಬರ್ 3 ರಂದು ವಿಜೇತರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಇನ್ನು, ನವೆಂಬರ್ ತಿಂಗಳ ಬಿಗ್ ಟಿಕೆಟ್‌ನ ಮೂರನೇ ಸಾಪ್ತಾಹಿಕ ಎಲೆಕ್ಟ್ರಾನಿಕ್ ಡ್ರಾದಲ್ಲಿ ತಲಾ 25,000 ದಿರ್ಹಮ್ ಗೆದ್ದ ನಾಲ್ವರು ಭಾರತೀಯ ವಲಸಿಗರಲ್ಲಿ ಅರವಿಂದನ್ ಕೂಡ ಒಬ್ಬರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಇತರ ವಿಜೇತರು ಶಾರ್ಜಾದಲ್ಲಿ ವಾಸಿಸುವ ಭಾರತೀಯ ವಲಸಿಗ ಮಕರಂದ್ ನಿವೃತ್ತಿ ಪಾಟೀಲ್ ಮತ್ತು ಯುಎಇಯಲ್ಲಿ ನೆಲೆಸಿರುವ ಶರಫುದ್ದೀನ್ ಕಾಸಿಮ್ ಆಗಿದ್ದಾರೆ.