Asianet Suvarna News Asianet Suvarna News

ಶಿವಸೇನಾ ಸಂಸದ ಸಂಜಯ್‌ ರಾವುತ್‌ ನಿವಾಸದ ಮೇಲೆ ಇಡಿ ದಾಳಿ: ಪರಿಶೀಲನೆ

ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರ ಮುಂಬೈ ನಿವಾಸದ ಮೇಲೆ ಇಡಿ ಅಧಿಕಾರಿಗಳು ರೇಡ್‌ ಮಾಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಸಂಸದ, ನಾನು ಸತ್ತರೂ ಶಿವಸೇನೆ ಬಿಡುವುದಿಲ್ಲ ಎಂದಿದ್ದಾರೆ. 

enforcement directorate officials raid on shivsena mp sanjay raut residence
Author
Bangalore, First Published Jul 31, 2022, 9:44 AM IST

ಶಿವಸೇನಾ ಸಂಸದ ಸಂಜಯ್‌ ರಾವುತ್‌ಗೆ ಇಡಿ ಶಾಕ್‌ ನೀಡಿದೆ. ಭಾನುವಾರ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ಸಂಜಯ್‌ ರಾವುತ್‌ ಅವರ ಮುಂಬೈ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಸಂಸದರ ನಿವಾಸವನ್ನು ರೇಡ್‌ ಮಾಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪತ್ರ 'ಚಾಲ್' ಭೂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಮೂರು ತಂಡಗಳು ಸಂಜಯ್‌ ರಾವುತ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಮನೆಯನ್ನು ಪರಿಶೀಲಿಸುತ್ತಿದೆ. ಅಲ್ಲದೆ, ಉದ್ಧವ್‌ ಠಾಕ್ರೆ ಬಣದ ಸಂಸದ ಸಂಜಯ್‌ ರಾವುತ್‌ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಸಂಸದರ ಮುಂಬೈ ನಿವಾಸ ಮಾತ್ರವಲ್ಲದೆ ಇತರೆ ಹಲವು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Maharashtra Political Crisis ನಡುವೆ ಶಿವಸೇನೆ ಸಂಜಯ್‌ ರಾವತ್‌ಗೆ ಇಡಿ ನೊಟೀಸ್‌

ಸಂಜಯ್‌ ರಾವುತ್‌ಗೆ ಈ ಹಿಂದೆ ಹಲವು ಬಾರಿ ಸಮನ್ಸ್‌ ನೀಡಿತ್ತು. ಅಲ್ಲದೆ, ಜುಲೈ 27 ರಂದು ಸಹ ಸಮನ್ಸ್ ನೀಡಿ ಶಿವಸೇನಾ ಸಂಸದರನ್ನು ವಿಚಾರಣೆ ನಡೆಸಿತ್ತು. ಮುಂಬೈನ 'ಚಾಲ್' ಮರು-ಅಭಿವೃದ್ಧಿಯಲ್ಲಿನ ಅಕ್ರಮಗಳು ಮತ್ತು ರಾವುತ್‌ ಅವರ ಪತ್ನಿ ಹಾಗೂ 'ಸಹವರ್ತಿ'ಗಳನ್ನು ಒಳಗೊಂಡಿರುವ ಸಂಬಂಧಿತ ವಹಿವಾಟುಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವುತ್ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ವಿಚಾರಣೆ ನಡೆದ ಬಳಿಕ ಇಂದು ಬೆಳಗ್ಗೆ ಮತ್ತೆ ರೇಡ್‌ ನಡೆಸಿರುವುದು ಕುತೂಹಲಕಾರಿಯಾಗಿದೆ.

 

ಭಾನುವಾರ ಬೆಳಗ್ಗೆ 7 ಗಂಟೆಗೆ ಇಡಿ ಅಧಿಕಾರಿಗಳು, ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ಸಂಜಯ್‌ ರಾವುತ್‌ ಅವರ ನಿವಾಸವನ್ನು ತಲುಪಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಇಡಿ ಸಮನ್ಸ್‌ ನೀಡಿದಾಗಲೇ, ತಾನು ಯಾವುದೇ ತಪ್ಪನ್ನು ಮಾಡಿಲ್ಲ, ರಾಜಕೀಯ ದ್ವೇಷದ ಕಾರಣ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಉದ್ಧವ್ ಠಾಕ್ರೆ ಪಾಳಯದಲ್ಲಿರುವ ರಾಜ್ಯಸಭಾ ಸಂಸದ ಹೇಳಿದ್ದಾರೆ. 

ಶಿಂಧೆ ಬಣಕ್ಕೆ ಮತ್ತಷ್ಟು ಬಲ: ಸಂಜಯ್‌ ರಾವುತ್‌ ಸೋದರನಿಂದಲೂ ಬಂಡಾಯ?

ಸಾಯುತ್ತೇನೆ ಹೊರತು ಶಿವಸೇನೆ ಬಿಡಲ್ಲ..! 
ಇನ್ನು, ತನ್ನ ನಿವಾಸ ಮೇಲೆ ಭಾನುವಾರ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ರೇಡ್‌ ಮಾಡಿದ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್‌ ರಾವುತ್‌ ಟ್ವೀಟ್‌ಗಳನ್ನು ಮಾಡಿದ್ದಾರೆ. ಯಾವುದೇ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ದಿವಂಗತ ಬಾಳಾಸಾಬೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಸಾಯುತ್ತೇನೆಯೇ ಹೊರತು ಶಿವಸೇನೆ ಬಿಡುವುದಿಲ್ಲ ಎಂದು ಸಹ ಸಂಜಯ್‌ ರಾವುತ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದು, ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. 

Follow Us:
Download App:
  • android
  • ios