ಯುವಕರ ಮನದಲ್ಲಿ ದ್ವೇಷ ತುಂಬುತ್ತಿದೆ: Facebook, ಸೋಶಿಯಲ್ ಮೀಡಿಯಾ ಬಗ್ಗೆ ಸಂಸತ್ತಿನಲ್ಲಿ ಸೋನಿಯಾ ಗುಡುಗು!
* ಸಂಸತ್ತಿನಲ್ಲಿ ಸೋನಿಯಾ ಗುಡುಗು
* ಸೋಶಿಯಲ್ ಮೀಡಿಯಾದಿಂದ ದೇಶದ ಪರಿಸ್ಥಿತಿ ಹದಗೆಡುತ್ತಿದೆ
* ಫೇಸ್‌ಬುಕ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ನಿಯಂತ್ರಿಸಲು ಸೋನಿಯಾ ಮನವಿ
ನವದೆಹಲಿ(ಮಾ.16): ಇಂದು ಲೋಕಸಭೆಯಲ್ಲಿ (ಸಂಸತ್ತಿನ ಬಜೆಟ್ ಅಧಿವೇಶನ) ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಫೇಸ್‌ಬುಕ್ ಮತ್ತು ಸಾಮಾಜಿಕ ಮಾಧ್ಯಮಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪ್ರಜಾಪ್ರಭುತ್ವವನ್ನು ಹ್ಯಾಕ್ ಮಾಡಲು ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಅಪಾಯ ಹೆಚ್ಚುತ್ತಿದೆ ಎಂದು ಹೇಳಿದರು. ರಾಜಕೀಯ ನಿರೂಪಣೆಗಳನ್ನು ರೂಪಿಸಲು ನಾಯಕರು, ಪಕ್ಷಗಳು ಮತ್ತು ಅವರ ಪ್ರತಿನಿಧಿಗಳು ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಕಂಪನಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಭಾವನಾತ್ಮಕವಾಗಿ ತಪ್ಪು ಮಾಹಿತಿಯ ಮೂಲಕ ದ್ವೇಷವು ಯುವಕರ ಮತ್ತು ಹಿರಿಯರ ಮನಸ್ಸನ್ನು ಉತ್ತೇಜಿಸುತ್ತಿದೆ ಮತ್ತು ಫೇಸ್‌ಬುಕ್‌ನಂತಹ ಕಂಪನಿಗಳು ಇದನ್ನೆಲ್ಲ ತಿಳಿದು ಲಾಭ ಪಡೆಯುತ್ತಿವೆ ಎಂದು ಕಿಡಿ ಕಾರಿದ್ದಾರೆ.
ಚುನಾವಣಾ ರಾಜಕೀಯದಲ್ಲಿ ಸಾಮಾಜಿಕ ಮಾಧ್ಯಮಗಳ ಹಸ್ತಕ್ಷೇಪವನ್ನು ನಿವಾರಿಸಿ
ಆಡಳಿತ ಸಂಸ್ಥೆಗಳು ಮತ್ತು ಫೇಸ್‌ಬುಕ್‌ನಂತಹ ದೈತ್ಯ ಜಾಗತಿಕ ಸಾಮಾಜಿಕ ಮಾಧ್ಯಮಳ ನಡುವೆ ಬೆಳೆಯುತ್ತಿರುವ ಸಂಬಂಧವನ್ನು ವರದಿ ತೋರಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯದಲ್ಲಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ವ್ಯವಸ್ಥಿತ ಪ್ರಭಾವ ಮತ್ತು ಹಸ್ತಕ್ಷೇಪವನ್ನು ಕೊನೆಗೊಳಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದು ಪಕ್ಷ, ರಾಜಕೀಯವನ್ನು ಮೀರಿದ್ದು ಎಂದರು. ಯಾರೇ ಅಧಿಕಾರದಲ್ಲಿದ್ದರೂ ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ನಾವು ರಕ್ಷಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಕಲಾವಿದರ ಪರವಾಗಿ ಧ್ವನಿ ಎತ್ತಿದ ಹೇಮಾ ಮಾಲಿನಿ
ನಮ್ಮ ಜಾನಪದ ಮತ್ತು ಶಾಸ್ತ್ರೀಯ ಕಲಾವಿದರು ಮತ್ತು ಇತರ ಕಲಾವಿದರ ಗುರುತು ಅಪಾಯದಲ್ಲಿದೆ. ಸಾಂಕ್ರಾಮಿಕ ರೋಗದಿಂದಾಗಿ ಅವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಮತ್ತು ಜೀವನೋಪಾಯಕ್ಕಾಗಿ ತಮ್ಮ ಕಲೆಯನ್ನು ತ್ಯಜಿಸಲು ಮತ್ತು ಸಣ್ಣ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕಲಾವಿದರಿಗೆ ಸರ್ಕಾರ ಆರ್ಥಿಕ ನೆರವು ಮತ್ತು ಪಿಂಚಣಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸುತ್ತೇನೆ. ಭಾರತವು ತನ್ನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯಿಂದಾಗಿ ವಿಶ್ವದ ಅತ್ಯುತ್ತಮ ದೇಶಗಳಲ್ಲಿ ಒಂದಾಗಿದೆ. ನಮ್ಮ ಕಲೆ, ಸಂಸ್ಕೃತಿ ಮತ್ತು ಕಲಾವಿದರು ಅದರ ಆಧಾರ. ತನ್ನ ಕಲಾವಿದರನ್ನು ನಿರ್ಲಕ್ಷಿಸಿದ ಯಾವುದೇ ದೇಶವು ಅಭಿವೃದ್ಧಿ ಕಂಡಿಲ್ಲ. ಕಲಾ ಕ್ಷೇತ್ರ ಮತ್ತು ಕಲಾವಿದರು ಸಮಸ್ಯೆ ಎದುರಿಸುತ್ತಿದ್ದಾರೆ. ಒಬ್ಬ ಕಲಾವಿದೆಯಾಗಿ ನನಗೆ ಅವರ ಬಗ್ಗೆ ಕಾಳಜಿ ಇದೆ ಎಂದಿದ್ದಾರೆ.