ಹೀನಾಯ ಸೋಲಿನ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಪಿಣರಾಯಿ ವಿಜಯನ್ ದಿಢೀರ್ ರಾಜೀನಾಮೆ, ಆಡಳಿತ ವಿರೋಧಿ ಅಲೆಯಲ್ಲಿ ಸಿಪಿಂ ಕೊಚ್ಚಿ ಹೋಗಿದೆ. ಇದರ ಬೆನ್ನಲ್ಲೇ ಕೇರಳದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ತಿರುವನಂತಪುರಂ (ಮೇ.04) ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಲೆಕ್ಕಾಚಾರ ಉಲ್ಟಾ ಆಗಿದೆ. ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐ(ಎಂ) ಹೀನಾಯ ಸೋಲು ಕಂಡಿದೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕಣ್ಣೂರಿನ ತಮ್ಮ ನಿವಾಸದಲ್ಲಿರುವ ಅವರು, ರಾಜಧಾನಿ ತಿರುವನಂತಪುರಂಗೆ ಬಾರದೆ ವಿಶೇಷ ದೂತರ ಮೂಲಕ ರಾಜೀನಾಮೆ ಪತ್ರವನ್ನು ರಾಜಭವನಕ್ಕೆ ರವಾನಿಸಿದ್ದಾರೆ. ಮುಖ್ಯಮಂತ್ರಿಗಳ ರಾಜೀನಾಮೆಯನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅಂಗೀಕರಿಸಿದ್ದಾರೆ. ಅಲ್ಲದೆ, ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಪಿಣರಾಯಿ ವಿಜಯನ್ ಅವರಿಗೆ ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ಮನೆಯಿಂದ ಹೊರಬಂದಿಲ್ಲ ಪಿಣರಾಯಿ ವಿಜಯನ್

ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಪಿಣರಾಯಿ ವಿಜಯನ್ ಮನೆಯಿಂದ ಹೊರಬಂದಿಲ್ಲ ಮತ್ತು ಮಾಧ್ಯಮಗಳನ್ನೂ ಭೇಟಿಯಾಗಿಲ್ಲ. ಅವರು ನಾಳೆ ರಾಜೀನಾಮೆ ನೀಡಬಹುದು ಎಂಬ ಮಾತುಗಳು ಕೇಳಿಬಂದಿತ್ತು. ಇತ್ತ ಪಕ್ಷದ ಕೆಲ ಮೂಲಗಳು ಇದೇ ಮಾತನ್ನು ಹೇಳಿತ್ತು. ಆದರೆ, ಎಲ್ಲರ ನಿರೀಕ್ಷೆಗೂ ಮುನ್ನವೇ ಪಿಣರಾಯಿ ತಮ್ಮ ಸಿಎಂ ಹುದ್ದೆ ತೊರೆದಿದ್ದಾರೆ.

ಪಿಣರಾಯಿ ಸರ್ಕಾರಕ್ಕೆ ಎದುರಾದ ಭಾರೀ ಆಘಾತ

ಮೂರನೇ ಬಾರಿಗೆ ಅಧಿಕಾರಕ್ಕೇರುವ ಕನಸಿನಲ್ಲಿದ್ದ ಪಿಣರಾಯಿ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ದೊಡ್ಡ ಆಘಾತ ಎದುರಾಗಿದೆ. 10 ವರ್ಷಗಳ ನಂತರ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದರೆ, ಎಲ್‌ಡಿಎಫ್ ಕೇವಲ 35 ಸ್ಥಾನಗಳಿಗೆ ಕುಸಿದಿದೆ. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಧರ್ಮಡಂ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಸಾಧಿಸಿದರೆ, ಸ್ಪರ್ಧಿಸಿದ್ದ 20 ಸಚಿವರಲ್ಲಿ 13 ಮಂದಿ ಸೋಲು ಕಂಡಿದ್ದಾರೆ.

ಎಲ್‌ಡಿಎಫ್‌ನ ಭದ್ರಕೋಟೆಗಳೆನಿಸಿದ್ದ ಹಲವು ಕ್ಷೇತ್ರಗಳು ಈ ಬಾರಿ ಕೈತಪ್ಪಿವೆ. ಹತ್ತು ವರ್ಷಗಳ ಆಡಳಿತದ ಶಕ್ತಿ, ಸಚಿವರು ಮತ್ತು ಶಾಸಕರೆಲ್ಲರೂ ಇದ್ದರೂ ಗೆಲ್ಲಲು ಇನ್ನೇನು ಬೇಕು ಎಂಬ ಆತ್ಮವಿಶ್ವಾಸಕ್ಕೆ ಜನರು ತಣ್ಣೀರೆರಚಿದ್ದಾರೆ. ಕಾಲು ಶತಮಾನದಿಂದ ಶಾಸಕರಾಗಿದ್ದ ಕೆ.ಬಿ. ಗಣೇಶ್ ಕುಮಾರ್ ಪತ್ತನಾಪುರಂನಲ್ಲಿ ಜ್ಯೋತಿ ಕುಮಾರ್ ಚಾಮಕ್ಕಾಲ ಎದುರು ಸೋತಿದ್ದಾರೆ. ವೀಣಾ ಜಾರ್ಜ್ ಒಂದೇ ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸಲಿಲ್ಲ. ಅಲ್ಲಿ ಅಬಿನ್ ವರ್ಕಿ ಭರ್ಜರಿ ಜಯ ಸಾಧಿಸಿದರು. ಧರ್ಮಡಂನಲ್ಲಿ ಸೋಲಿನಂಚಿಗೆ ತಲುಪಿದ್ದ ಪಿಣರಾಯಿ ವಿಜಯನ್, ಕೊನೆಗೆ ಹೇಗೋ ಗೆದ್ದು ಬಂದರು.