ದೇಶದಲ್ಲಿ ಚುನಾವಣಾ ಆಯೋಗ ಕಾಣೆಯಾಗಿದೆ. ಅದಾಗಿದೆ, ಇದಾಗಿದೆ ಅಂತಾ ರೂಮರ್‌ಗಳನ್ನು ಹಬ್ಬಿಸಬೇಡಿ. ನಾವೇನೂ ಲಾಪತಾ ಜಂಟಲ್‌ಮನ್ಸ್‌ (ಲಾಪತಾ ಲೇಡೀಸ್‌ ಚಿತ್ರದ ಅನುಕರಣೆ ಮಾಡಿದ ಚುನಾವಣಾ ಆಯುಕ್ತರ ಮೀಮ್‌ ಲಾಪತಾ ಜಂಟಲ್‌ಮನ್‌) ಅಲ್ಲ. ನಾವೆಲ್ಲೂ ಕಾಣೆಯೂ ಆಗೋದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. 

ನವದೆಹಲಿ (ಜೂ.3): ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಸೋಮವಾರ ಕೇಂದ್ರ ಚುನಾವಣಾ ಅಯೋಗದ ಮುಖ್ಯ ಆಯುಕ್ತ ಹಾಗೂ ಇಬ್ಬರು ಇತರ ಆಯುಕ್ತರೊಂದಿಗೆ ಸುದ್ದಿಗೋಷ್ಠಿ ನಡೆಸಿ ದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಚುನಾವಣೆಯ ಬಗ್ಗೆ ಮಾಹಿತಿ ನೀಡಿದರು. ವಿಪಕ್ಷಗಳು ಆರೋಪ ಮಾಡಿರುವಂತೆ ನಾವೇನೂ ಕಾಣೆಯಾಗಲ್ಲ. ಸದಾ ಕಾಲ ಇಲ್ಲಿಯೇ ಇರುತ್ತೇವೆ ಎಂದು ಹೇಳಿದ್ದಾರೆ. ದೇಶದಲ್ಲಿ ಚುನಾವಣಾ ಆಯೋಗ ನಾಪತ್ತೆಯಾಗಿದೆ ಎಂದು ವಿಪಕ್ಷಗಳು, 'ಲಾಪತಾ ಜಂಟಲ್‌ಮನ್' ಎನ್ನುವ ಮೀಮ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದವು. ಚುನಾವಣಾ ಆಯೋಗದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಅವರನ್ನು ಹುಡುಕಿಕೊಡಿ ಎನ್ನುವ ಅರ್ಥದ ಮೀಮ್‌ಗಳು ಇವಾಗಿದ್ದವು. ಏಳು ಹಂತದ ಚುನಾವಣೆಯನ್ನು ಮುಕ್ತಾಯಗೊಳಿಸಿದ ಬಳಿಕ ಫಲಿತಾಂಶದ ಒಂದು ದಿನಕ್ಕೂ ಮುನ್ನ ಮಾತನಾಡಿದ ಸಿಇಸಿ ರಾಜೀವ್‌ ಕುಮಾರ್‌, 'ಸೋಶಿಯಲ್‌ ಮೀಡಿಯಾ ಮೀಮ್‌ ಪೇಜ್‌ಗಳು ನಮ್ಮನ್ನು ಲಾಪತಾ ಜಂಟಲ್‌ಮನ್ಸ್‌ ಎಂದು ಕರೆಯುತ್ತಿವೆ. ಆದರೆ, ನಾವೆಲ್ಲೂ ಮಿಸ್‌ ಆಗಿಲ್ಲ. ಸದಾ ಕಾಲ ಇಲ್ಲಿಯೇ ಇದ್ದೇವೆ' ಎಂದು ಹೇಳಿದ್ದಾರೆ.

ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದೇಶದಲ್ಲಿ ಬಹುತೇಕ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅವರು, 'ಯಾರೋ ಒಬ್ಬರು ಅಷ್ಟೆಲ್ಲಾ ಡಿಎಂ ಹಾಗೂ ಆರ್‌ಓಗಳ ಮೇಲೆ ಪ್ರಭಾವ ಬೀರಲು ಸಾಧ್ಯವೇ? ಈ ರೀತಿ ಯಾರು ಮಾಡಿದ್ದಾರೆ ಎಂದು ಹೇಳಲಿ. ಇದನ್ನು ಮಾಡಿದ ವ್ಯಕ್ತಿಗೆ ನಾವು ಶಿಕ್ಷೆ ನೀಡುತ್ತೇವೆ. ಒಂದು ರೂಮರ್‌ಗಳನ್ನು ಹಂಚಿಕೊಂಡು ಎಲ್ಲರ ಮೇಲೂ ಅನುಮಾನ ಪಡುವಂತೆ ಮಾಡುವುದು ಸರಿಯಲ್ಲ' ಎಂದು ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯನ್ನು ನೆನಪಿಸಿಕೊಳ್ಳುತ್ತಾ, ಈ ವರ್ಷ 31.2 ಕೋಟಿ ಮಹಿಳೆಯರು ಸೇರಿದಂತೆ 64.2 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಭಾರತವು ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಕುಮಾರ್ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಚುನಾವಣೆಯಲ್ಲಿ 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಮತದಾನ ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು. 2019 ರಲ್ಲಿ 540 ರೀಪೋಲ್‌ಗಳಿಗೆ ಹೋಲಿಸಿದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 39 ಮರುಮತದಾನಗಳು ನಡೆದಿವೆ ಎಂದು ಸಿಇಸಿ ಗಮನಿಸಿದೆ.

ಈ ವರ್ಷ ಒಟ್ಟು 33 ಕರ್ತವ್ಯನಿರತ ಚುನಾವಣಾ ಸಿಬ್ಬಂದಿಗಳು ಹೀಟ್‌ವೇವ್‌ ಹಾಗೂ ಇತರ ಕಾರಣಗಳಿಂದ ಬಲಿಯಾಗಿದ್ದಾರೆ. ಇದರಿಂದ ನಾವು ಪಾಠ ಕಲಿತಿದ್ದೇವೆ. ಆ ಕಾರಣದಿಂದಾ ಮುಂದಿನ ಲೋಕಸಭೆ ಚುನಾವಣೆಯನ್ನು ಏಪ್ರಿಲ್‌ ಅಂತ್ಯದ ಒಳಗಾಗಿ ಮುಕ್ತಾಯ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಅಚಲವಾಗಿ ಇರಲಿದೆ. ಹಲವು ಪಕ್ಷಗಳ ನಿಯೋಗಗಳು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಷೇರು ಮಾರುಕಟ್ಟೆ ಗೂಳಿ ಭರ್ಜರಿ ಓಟ; ಕೈಕೊಟ್ಟ Groww, Zerodha, ಲಾಭ ತಪ್ಪಿಸಿಕೊಂಡ ಹೂಡಿಕೆದಾರ!

ಭಾರತದ ಮತದಾನದ ವ್ಯವಸ್ಥೆಯು ಚುನಾವಣೋತ್ತರ ಪರಿಶೀಲನೆಗೆ ಅವಕಾಶ ನೀಡುತ್ತದೆ ಎಂದು ಕುಮಾರ್ ಹೇಳಿದರು, ಹಾಗಿದ್ದರೂ, ದೋಷಪೂರಿತ ಮತದಾರರ ಪಟ್ಟಿಗಳು ಮತ್ತು ಮತದಾನದ ದತ್ತಾಂಶಗಳ "ನಕಲಿ ನಿರೂಪಣೆ"ಯನ್ನು ಈ ಬಾರಿ ಮಾಡಲಾಗಿತ್ತು ಎಂದಿದ್ದಾರೆ. "ಇದರಲ್ಲಿ ಪ್ಯಾಟರ್ನ್ ಇದೆ, ವಿನ್ಯಾಸವಿದೆ... ಟೂಲ್‌ಕಿಟ್ ಇದೆ ಎಂದು ನಾನು ಹೇಳುವುದಿಲ್ಲ. ಮತದಾರರ ಅಂಕಿ-ಅಂಶಗಳ ದತ್ತಾಂಶ ಪ್ರಕಟಣೆಯನ್ನು ನಾವು ವಿಳಂಬ ಮಾಡಿಲ್ಲ, ಅಥವಾ ಡೇಟಾವನ್ನು ಬದಲಾಯಿಸಿಲ್ಲ. ಇನ್ನೂ ಮತದಾರರಲ್ಲಿ ಅಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಫೇಕ್‌ ನರೇಟಿವ್‌ಗಳ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಬೇಕಿದೆ ಎಂದು ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಅಮುಲ್ ಹಾಲಿನ ಬೆಲೆಯಲ್ಲಿ 2 ರೂಪಾಯಿ ಏರಿಕೆ? ಹೊಸ ದರ ಹೀಗಿವೆ

2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 495 ದೂರುಗಳಲ್ಲಿ 90 ಪ್ರತಿಶತಕ್ಕೂ ಹೆಚ್ಚು ವಿಲೇವಾರಿ ಮಾಡಲಾಗಿದೆ ಎಂದು ಕುಮಾರ್ ಹಂಚಿಕೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಡೀಫ್‌ಫೇಕ್‌ ಮತ್ತು ಎಐ ರಚಿತವಾದ ಸಿಂಥೆಟಿಕ್ ವಿಷಯಗಳ ಬೆದರಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದೆ ಎಂದು ಅವರು ಹೇಳಿದ್ದಾರೆ.