ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣಾ ದಿನಾಂಕ ಘೋಷಣೆ, ಫೆ.27ಕ್ಕೆ ಮತದಾನ!
ಲೋಕಸಭೆ ಹಾಗೂ ವಿಧಾನಸಭಾ ಉಪ ಚುನಾವಣೆಗಳ ದಿನಾಂಕ ಘೋಷಣೆಯಾಗಿದೆ. ಇಂದು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಫೆಬ್ರವರಿ 27 ರಂದು ಮತದಾನ ನಡೆಯಲಿದೆ. ಮಾರ್ಚ್ 2ಕ್ಕೆ ಫಲಿತಾಂಶ ಹೊರಬೀಳಲಿದೆ.
ನವದೆಹಲಿ(ಜ.18): ಈಶಾನ್ಯ 3 ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಿಸಿದ ಬೆನ್ನಲ್ಲೇ ಚುನಾವಣಾ ಆಯೋಗ 1 ಲೋಕಸಭೆ ಹಾಗೂ 6 ವಿಧಾನಸಭಾ ಉಪ ಚುನಾವಣೆಗಳ ದಿನಾಂಕವನ್ನು ಘೋಷಿಸಿದೆ. ಲಕ್ಷದ್ವೀಪದ ಲೋಕಸಭೆ ಉಪಚುನಾವಣೆ ಹಾಗೂ 5 ರಾಜ್ಯಗಳ 6 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ. ಒಟ್ಟು 6 ಸ್ಥಾನಗಳ ಉಪ ಚುನಾವಣೆ ಫೆಬ್ರವರಿ 27ಕ್ಕೆ ನಡೆಯಲಿದೆ. ಇನ್ನು ಮಾರ್ಚ್ 2ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.
ಲಕ್ಷದ್ವೀಪದಲ್ಲಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ನಾಯಕ ಮೊಹಮ್ಮದ್ ಫೈಜಲ್ ಮೇಲಿನ ಕ್ರಿಮಿನಲ್ ಕೇಸ್ ಸಾಬೀತಾಗಿರುವ ಕಾರಣ ಎಂಪಿ ಸ್ಥಾನದಿಂದ ವಜಾಗೊಂಡಿದ್ದಾರೆ. ಹೀಗಾಗಿ ಇಲ್ಲಿ ತೆರವಾಗಿರುವ ಲೋಕಸಭಾ ಸ್ಥಾನಕ್ಕೆ ಫೆಬ್ರವರಿ 27ರಂದು ಉಪ ಚುನಾವಣೆ ನಡೆಯಲಿದೆ. ಇನ್ನು ಮಹಾರಾಷ್ಟ್ರದಲ್ಲಿ 2 ವಿಧಾನಸಭಾ ಸ್ಥಾನ ಹಾಗೂ ಅರುಣಾಚಲ ಪ್ರದೇಶ, ಜಾರ್ಖಂಡ್, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ತಲಾ ಒಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
3 ಈಶಾನ್ಯ ರಾಜ್ಯಗಳಿಗೆ ಚುನಾವಣಾ ದಿನಾಂಕ ಘೋಷಣೆ: ಫೆಬ್ರವರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ
ಅರುಣಾಚಲ ಪ್ರದೇಶದ ಲುಮ್ಲಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಜಂಬೆ ತಾಶಿ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಇನ್ನು ಜಾರ್ಖಂಡ್ ರಾಮಘಡ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಮಮತಾ ದೇವಿ ಅಮಾನತುಗೊಂಡಿದ್ದಾರೆ. ಹೀಗಾಗಿ ಇಲ್ಲಿ ತೆರವಾಗಿರುವ ಸ್ಥಾನಕ್ಕೂ ಉಪ ಚುನಾವಣೆ ನಡೆಯಲಿದೆ. ತಮಿಳುನಾಡಿನ ಈರೋಡ ಕ್ಷೇತ್ರದ ಕಾಂಗ್ರೆಸ್ ನಾಯಕ ತಿರು ಇ ತಿರುಮಹಾನ್ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯುತ್ತಿದೆ.
ಪಶ್ಚಿಮ ಬಂಗಾಳದ ಸಗರ್ದಿಗಿ ಕ್ಷೇತ್ರದ ಟಿಎಂಸಿ ನಾಯಕಿ ಸುಬ್ರತಾ ಸಾಹ ನಿಧನದಿಂದ ತೆರವಾಗಿರುವ ಸ್ಥಾನಕ್ಕೂ ಉಪ ಚುನಾವಣೆ ನಡೆಯಲಿದೆ. ಇನ್ನು ಮಹಾರಾಷ್ಟ್ರದ ಕಸಾಬ್ ಪೇತ್ ಕ್ಷೇತ್ರದ ಬಿಜೆಪಿ ನಾಯಕ ಮುಕ್ತಾ ಶೈಲೇಶ್ ನಿಧನ ಹಾಗೂ ಚಿಂಚಿವಾಡ ಕ್ಷೇತ್ರದ ಬಿಜೆಪಿ ನಾಯಕ ಲಕ್ಷ್ಮಣ್ ಪಾಂಡುರಂಗ ಜಗ್‌ತಾಪ್ ನಿಧನದಿಂದ ತೆರವಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಚುನಾವಣೆಗೆ ಸಿದ್ಧರಾಗಿ ಕಾರ್ಯಕರ್ತರಿಗೆ, ನಾಯಕರಿಗೆ ಕರೆ ನೀಡಿದ ಪ್ರಧಾನಿ ಮೋದಿ
ಜನವರಿ 31ಕ್ಕೆ ಗಜೆಟ್ ನೋಟಿಫಿಕೇಶನ್ ಹೊರಡಿಲಾಗುತ್ತದೆ. ಫೆಬ್ರವರಿ 7ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನಾಮಪತ್ರ ಪರಿಶೀಲನೆ ಫೆಬ್ರವರಿ 8ಕ್ಕೆ ನಡೆಯಲಿದೆ. ಇನ್ನು ಫೆಬ್ರವರಿ 10ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
3 ಈಶಾನ್ಯ ರಾಜ್ಯಗಳಿಗೆ ಫೆಬ್ರವರಿಯಲ್ಲಿ ಚುನಾವಣೆ
ಈ ವರ್ಷ ನಡೆಯಲಿರುವ 9 ವಿಧಾನಸಭೆ ಚುನಾವಣೆಗಳ ಪೈಕಿ ಮೊದಲ 3 ಚುನಾವಣೆಗಳಿಗೆ ಬುಧವಾರ ದಿನಾಂಕ ಘೋಷಣೆ ಆಗಿದೆ. ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿವೆ. ತ್ರಿಪುರಾದಲ್ಲಿ ಫೆ.16ರಂದು ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆ.27ರಂದು ಚುನಾವಣೆ ನಡೆಯಲಿದೆ. ಮಾ.2ರಂದು ಎಲ್ಲ ಕಡೆ ಒಟ್ಟಿಗೇ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಆಘಲಿದೆ.ಮೂರೂ ರಾಜ್ಯಗಳು ತಲಾ 60 ಸದಸ್ಯ ಬಲ ಹೊಂದಿವೆ ಎಂಬುದು ವಿಶೇಷ. ಮಾ.12ರಂದು ನಾಗಾಲ್ಯಾಂಡ್, ಮಾ.15ರಂದು ಮೇಘಾಲಯ ಮತ್ತು ಮಾ.22 ರಂದು ತ್ರಿಪುರಾ ವಿಧಾನಸಭೆ ಅವಧಿ ಅಂತ್ಯಗೊಳ್ಳುತ್ತಿದೆ.