65ರ ಹರೆಯದ ವೃದ್ಧ ಹಾಗೂ ಆತನ ಪತ್ನಿ ಮಾತ್ರ ಮನೆಯಲ್ಲಿ ವಾಸವಿದ್ದಾರೆ. ಆದರೆ ಈ ವೃದ್ಧನ ಮನೆಗೆ ಬರೋಬ್ಬರಿ 69 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಕಳುಹಿಸಿದ್ದಾರೆ. ಈ ಬಿಲ್ ನೋಡಿದ ವೃದ್ಧಿನ ಬಿಪಿ ಹೆಚ್ಚಾಗಿ ಆಸ್ವಸ್ಥಗೊಂಡ ಘಟನೆ ನಡೆದಿದೆ.
ಭೋಪಾಲ್ (ಜು.01) ಹಲವು ಭಾರಿ ಅಧಿಕಾರಿಗಳ ಎಡವಟ್ಟಿನಿಂದ ಅಮಾಯಕರು ಪರದಾಡುತ್ತಾರೆ. ಅಧಿಕಾರಿಗಳ ತಪ್ಪಿನಿಂದ ಅಮಾಯಕರು ದುಬಾರಿ ವಿದ್ಯುತ್ ಬಿಲ್ ನೋಡಿ ಕಂಗಾಲಾದ ಹಲವು ಘಟನೆಗಳಿವೆ. ಇದೀಗ 65ರ ವೃದ್ಧನ ಮನೆಗೆ ಸಿಬ್ಬಂದಿಗಳ ತಪ್ಪಿನಿಂದ 69 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡುವಂತೆ ಕಳುಹಿಸಿದ್ದಾರೆ. 2 ಲೈಟ್, ರಾತ್ರಿ ಒಂದಷ್ಟು ಹೊತ್ತು ಟಿವಿ. ಇದನ್ನು ಬಿಟ್ಟರೆ ಈ ಮನೆಯಲ್ಲಿ ವಿದ್ಯುತ್ ಬಳಕೆ ಮಾಡಿದ್ದೇ ಇಲ್ಲ. ಹೆಚ್ಚೆಂದರೆ 200 ರೂಪಾಯಿಗಿಂತ ಮೇಲೆ ವಿದ್ಯುತ್ ಬಳಕೆ ಮಾಡದ ಈ ದಂಪತಿ 69 ಲಕ್ಷ ರೂಪಾಯಿ ವಿದ್ಯುತ್ ಬಿಲ್ ನೋಡಿ ಕಂಗಾಲಾಗದ ಘಟನೆ ಮಧ್ಯಪ್ರದೇಶಧ ಭೋಪಾಲದಲ್ಲಿ ನಡೆದಿದೆ. ವೃದ್ಧಿನ ಬಿಪಿ ಏರಿಳಿತಗೊಂಡ ಅಸ್ವಸ್ಥಗೊಂಡ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫ್ಯಾನ್ ಕೂಡ ಬಳಸದ ದಂಪತಿಗೆ 69.75 ಲಕ್ಷ ರೂ ಬಿಲ್
ಹೋಮ್ ಗಾರ್ಡ್ ರಸ್ತೆಯ ನಿವಾಸಿಯಾಗಿರುವ ಮುರಳಿಲಾಲ್ ತಿವಾರಿ, ತನ್ನ ಪತ್ನಿ ಜೊತೆ ವಾಸವಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಮನೆಯಲ್ಲಿ ಯಾರೂ ಇಲ್ಲ. ಒಬ್ಬ ಮಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇವರಿಬ್ಬರು ರಾತ್ರಿಯಾದರೆ 2 ಲೈಟ್ ಉರಿಸುತ್ತಾರೆ. ಇನ್ನು ಕೆಲ ಹೊತ್ತು ಟಿವಿ ನೋಡುತ್ತಾರೆ. ಫ್ಯಾನ್ ಕೂಡ ಬಳಸುವುದಿಲ್ಲ. ಆದರೆ ಇವರಿಗೆ ಅಧಿಕಾರಿಗಳು ನೀಡಿದ ವಿದ್ಯುತ್ ಬಿಲ್ ಬರೋಬ್ಬರಿ 69.75 ಲಕ್ಷ ರೂಪಾಯಿ.
ಬಿಲ್ ನೋಡಿ ಕಂಗಾಲಾದ ದಂಪತಿಯಿಂದ ಮನವಿ
ಬಿಲ್ ನೋಡುತ್ತಿದ್ದಂತೆ ವೃದ್ಧ ದಂಪತಿಗಳು ಕಂಗಾಲಾಗಿದ್ದಾರೆ. ಸ್ಥಳೀಯ ವಿದ್ಯುತ್ ಸರಬರಾಜು ಕಚೇರಿಗೆ ತೆರಳಿದ ಮುರಳಿಲಾಲ್ ತಿವಾರಿ, ದುಬಾರಿ ಬಿಲ್ ನೀಡಲಾಗಿದೆ. ಇಷ್ಟು ವಿದ್ಯುತ್ ತಾವು ಬಳಸಿಲಿಲ್ಲ. ಪ್ರತಿ ತಿಂಗಳು ನಮಗೆ 200 ರಿಂದ 300 ರೂ ಬರುತ್ತಿತ್ತು. ಕೆಲ ತಿಂಗಳಲ್ಲಿ 500 ರೂಪಾಯಿ ಬಂದಿದೆ. ಈ ಬಿಲ್ ಸರಿಪಡಿಸಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಬಿಲ್ ಪಾವತಿ ಮಾಡದ ಕಾರಣ 1 ಲಕ್ಷ ರೂ ದಂಡ
ಮನವಿ ಮಾಡಿ ಬಂದ ವೃದ್ಧ ದಂಪತಿ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಬಿಲ್ ನೋಡಿ ಕಂಗಲಾಗಿದ್ದರೂ ಮನವಿ ಮಾಡಲಾಗಿದೆ. ಅಧಿಕಾರಿಗಳು ಸರಿಪಡಿಸುತ್ತಾರೆ ಎಂದು ಕುಳಿತಿದ್ದರು. ಆದರೆ ನಿಗಧಿತ ದಿನಾಂಕ ಬಿಲ್ ಪಾವತಿ ಮಾಡಿಲ್ಲ ಎಂದು 6.75 ಲಕ್ಷ ರೂಪಾಯಿಗೆ ಮತ್ತೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈ ಮೂಲಕ ಒಟ್ಟು 70.75 ಲಕ್ಷ ರೂಪಾಯಿ ಪಾವತಿಸುವಂತೆ ಬಿಲ್ ನೀಡಲಾಗಿದೆ. ಈ ಬಿಲ್ ನೋಡಿ 65ರ ವೃದ್ಧ ಮುರಳಿಲಾಲ್ ತಿವಾರಿ ಬಿಪಿ ಏರಿಳಿತಗೊಂಡಿದೆ. ಆರೋಗ್ಯ ಏರುಪೇರಾಗಿ ಅಸ್ವಸ್ಥಗೊಂಡಿದ್ದಾರೆ.
ಗ್ರಾಮಸ್ಥರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು
ಮುರಳಿಲಾಲ್ ತಿವಾರಿ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ವಿದ್ಯುತ್ ಸರಬರಾಜು ಅಧಿಕಾರಿಗಳು ದೌಡಾಯಿಸಿದ್ದಾರೆ. ಸಿಬ್ಬಂದಿಗಳ ಎಡವಟ್ಟಿನಿಂದ ತಪ್ಪಾಗಿ ಬಿಲ್ ಮಾಡಿದ್ದಾರೆ. ನಿಮ್ಮ ಬಿಲ್ 635 ರೂಪಾಯಿ ಎಂದು ಸರಿಪಡಿಸಿದ್ದಾರೆ.
