ನ.2ರಂದು ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಇಡಿ ತಯಾರಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಚಿವೆ!
ದೆಹಲಿಯ ಆಮ್ ಆದ್ಮಿ ಪಾರ್ಟಿ ನಾಯಕರು ಒಬ್ಬರ ಹಿಂದೊಬ್ಬರು ಜೈಲು ಪರೇಡ್ ನಡೆಸುತ್ತಿದ್ದಾರೆ. ಇದೀಗ ಸಿಎಂ ಅರವಿಂದ್ ಕೇಜ್ರಿವಾಲ್ ಸರದಿ ಅನ್ನೋ ಮಾತುಗಳು ಹರಿದಾಡುತ್ತಿದೆ. ಇದರ ನಡುವೆ ಆಪ್ ಸರ್ಕಾರದ ಸಚಿವೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನವೆಂಬರ್ 2 ರಂದು ಕೇಜ್ರಿವಾಲ್ ಬಂಧಿಸಿ ಜೈಲಿಗಲಟ್ಟಲು ಇಡಿ ತಯಾರಿ ಮಾಡಿದೆ ಅನ್ನೋ ಮಾಹಿತಿ ಬಹಿರಂಗಪಡಿಸಿದ್ದಾರೆ.

ನವದೆಹಲಿ(ಅ.31) ದೆಹಲಿ ಅಬಕಾರಿ ಹಗರಣ ಆಪ್ ಸರ್ಕಾರಕ್ಕೆ ಪ್ರತಿ ದಿನ ಸಂಕಷ್ಟ ತರುತ್ತಿದೆ. ಈಗಾಗಲೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದಾರೆ. ನಿನ್ನೆ ಸಿಸೋಡಿಯಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇಡಿ ಅಧಿಕಾರಿಗಳು, ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದೆ. ಸಿಸೋಡಿಯಾ, ಸಂಸದ ಸಂಜಯ್ ಸಿಂಗ್ ರೀತಿಯಲ್ಲೇ ಸಿಎಂ ಆರವಿಂದ್ ಕೇಜ್ರಿವಾಲ್ ಬಂಧಿಸಿ ಜೈಲಿಗಟ್ಟಲು ಇಡಿ ಪ್ಲಾನ್ ಮಾಡಿದೆ ಎಂದು ಆಪ್ ಸಚಿವೆ ಅತಿಶಿ ಹೇಳಿದ್ದಾರೆ.
ನಮಗೆ ಕೆಲ ಮಾಹಿತಿಗಳು ಬಂದಿದೆ. ಈ ಮಾಹಿತಿ ಆಧಾರದಲ್ಲಿ ನಾನು ಹೇಳಿಕೆ ನೀಡುತ್ತಿದ್ದೇನೆ. ಅರವಿಂದ್ ಕೇಜ್ರಿವಾಲ್‌ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿರುವುದು ನಾಟಕ. ವಿಚಾರಣೆಗೆ ಕರೆಸಿಕೊಳ್ಳುವ ಇಡಿ ಅಧಿಕಾರಿಗಳು ಕೇಜ್ರಿವಾಲ್ ಬಂಧಿಸಲಿದೆ. ಈ ರಹಸ್ಯ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ಅತಿಶಿ ಹೇಳಿದ್ದಾರೆ.
ಕೇಜ್ರಿವಾಲ್‌ಗೆ ಅಬಕಾರಿ ಹಗರಣ ಸಂಕಷ್ಟ, ನ.2ಕ್ಕೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್!
ಕೇಂದ್ರದ ಬಿಜೆಪಿ ಸರ್ಕಾರ ಆಪ್ ಸರ್ಕಾರದ ಒಬ್ಬೊಬ್ಬ ಸಚಿವರನ್ನು, ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಸುಳ್ಳು ಕೇಸ್ ದಾಖಲಿಸಿ, ತನಿಖೆ ಹೆಸರಿನಲ್ಲಿ ಬಂಧನ ಮಾಡುತ್ತಿದೆ ಎಂದು ಅತಿಶಿ ಹೇಳಿದ್ದಾರೆ. ನವೆಂಬರ್ 2 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಸತತ ವಿಚಾರಣೆ ನಡೆಸಿ ಬಳಿಕ ಬಂಧಿಸಲು ಇಡಿ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಅತಿಶಿ ಹೇಳಿದ್ದಾರೆ.
ಅತಿಶಿ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಇಡಿ ಸ್ವತಂತ್ರ ಸಂಸ್ಥೆ. ತನಿಖೆಗೆ ಸಮನ್ಸ್ ನೀಡುವ ಅಧಿಕಾರ, ವಿಚಾರಣೆಗೆ ಕರೆಸುವ ಅಧಿಕಾರಿ ಇಡಿಗೆ ಇದೆ. ಇದರಲ್ಲಿ ರಾಜಕೀಯ ಇಲ್ಲ. ಸುಳ್ಳು ಕೇಸ್ ಹಾಕಿ ಬಂಧನವಾಗಿದ್ದರೆ, ಸುಪ್ರೀಂ ಕೋರ್ಟ್ ಸಿಸೋಡಿಯಾ ಜಾಮೀನು ನಿರಾಕರಿಸಿದ್ದು ಯಾಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಕೇಜ್ರಿವಾಲ್‌ಗೆ ಸಂಕಷ್ಟ ಶುರು, ನಿವಾಸ ನವೀಕರಣ ಅಕ್ರಮ ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರ!
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮನೀಶಿ ಸಿಸೋಡಿಯಾ ಬಂಧನದ ಬಳಿಕ, ಆಪ್ ಸಂಸದ ಸಂಜಯ್ ಸಿಂಗ್ ಬಂಧನವಾಗಿದೆ. ಈಗಾಗಲೇ ಸಿಬಿಐ ಅಧಿಕಾರಿಗಳು ಇದೇ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಅರವಿಂದ್ ಕೇಜ್ರಿವಾಲ್ ವಿಚಾರಣೆ ನಡೆಸಿದ್ದಾರೆ. ಅಬಕಾರಿ ನೀತಿ ಹಗರಣದ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಹಗರಣ ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ ಅನ್ನೋದು ಸ್ಪಷ್ಟವಾಗಿದೆ.