‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.), ಸೋಮವಾರ 11 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ನವದೆಹಲಿ (ಜೂ.14): ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.), ಸೋಮವಾರ 11 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಒಂದೆಡೆ ಈ ವಿಚಾರಣೆ ವಿರುದ್ಧ ಇ.ಡಿ. ಕಚೇರಿ ಹೊರಗಡೆ ಹಾಗೂ ದೇಶದ ವಿವಿಧೆಡೆ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದರೆ, ಕಚೇರಿಯ ಒಳಗೆ ಇದ್ದ ರಾಹುಲ್, ರಾತ್ರಿಯವರೆಗೆ ಅಧಿಕಾರಿಗಳ ಪ್ರಶ್ನೆಗಳಿಗೆ ಬೆಳಗ್ಗೆಯಿಂದ ರಾತ್ರಿವರೆಗೆ ಉತ್ತರಿಸಿದರು. ಆದರೆ ವಿಚಾರಣೆ ಅಪೂರ್ಣವಾಗಿದ್ದು, ಮಂಗಳವಾರ ಮತ್ತೆ ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ.
ಇ.ಡಿ. ನೋಟಿಸ್ ಪ್ರಕಾರ ಸೋಮವಾರ ಬೆಳಗ್ಗೆ 11.10ಕ್ಕೆ, ಭಾರಿ ಬಿಗಿ ಭದ್ರತೆಯಲ್ಲಿ ಎಸ್‌ಯುವಿಯಲ್ಲಿ ಬಂದ ರಾಹುಲ್, ವಿಚಾರಣೆಗೆ ಹಾಜರಾದರು. ಕೂಡಲೇ ಅವರ ಹಾಜರಾತಿ ತೆಗೆದುಕೊಂಡ ಇ.ಡಿ. ಅಧಿಕಾರಿಗಳು ಕೆಲವು ಕಾನೂನು ಔಪಚಾರಿಕತೆಗಳನ್ನು ಪೂರೈಸಿದರು. ಇದಾದ 20 ನಿಮಿಷ ನಂತರ ವಿಚಾರಣೆ ಆರಂಭವಾಯಿತು. ಮೊದಲ ಸುತ್ತಿನಲ್ಲಿ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ಯ (ಪಿಎಂಎಲ್‌ಎ) ಸೆಕ್ಷನ್ 50ರ ಅಡಿ ಲಿಖಿತ ಹೇಳಿಕೆಯನ್ನು ರಾಹುಲ್ ನೀಡಿದರು ಎಂದು ಮೂಲಗಳು ಹೇಳಿವೆ.
ಪಠ್ಯ ಪರಿಷ್ಕರಣೆಗೆ ರಾಹುಲ್ ಗಾಂಧಿ ವಿರೋಧ: ಕನ್ನಡದಲ್ಲೇ ಸರಣಿ ಟ್ವೀಟ್!
ನಂತರ ಮಧ್ಯಾಹ್ನ 2.10ಕ್ಕೆ ಭೋಜನ ವಿರಾಮಕ್ಕೆಂದು ಇ.ಡಿ. ಕಚೇರಿಯಿಂದ ಹೊರಬಂದ ರಾಹುಲ್, ಪುನಃ ಅಪರಾಹ್ನ 3.30ಕ್ಕೆ ಕಚೇರಿಗೆ ಮರಳಿ ವಿಚಾರಣೆಗೆ ಹಾಜರಾದರು. ಈ ವಿಚಾರಣೆ ರಾತ್ರಿ 10ಕ್ಕೆ ಮುಕ್ತಾಯಗೊಂಡಿತು. ಇ.ಡಿ. ಸಹಾಯಕ ನಿರ್ದೇಶಕ ಹುದ್ದೆಯ ಅಧಿಕಾರಿಯು ವಿಚಾರಣೆಯ ನೇತೃತ್ವ ವಹಿಸಿದ್ದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಈ ಮುಂಚೆ ನೆಹರು ಒಡೆತನದಲ್ಲಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿ. (ಎಜೆಎಲ್)ನಿಂದ ಗಾಂಧಿ ಕುಟುಂಬದ ಒಡೆತನದ ‘ಯಂಗ್ ಇಂಡಿಯನ್’ ಹೇಗೆ ಖರೀದಿಸಿತು? ಖರೀದಿಗೆ ನಡೆಸಿದ ಪ್ರಕ್ರಿಯೆ ಏನು? ಎಜೆಎಲ್‌ಗೆ ಎಷ್ಟುಸಾಲ ನೀಡಿದ್ದಿರಿ?
National Herald case ಇಡಿ ಸಮನ್ಸ್ ಬೆನ್ನಲ್ಲೇ ವಿದೇಶದಿಂದ ದೆಹಲಿಗೆ ಆಗಮಿಸಿದ ರಾಹುಲ್ ಗಾಂಧಿ!
ನ್ಯಾಷನಲ್ ಹೆರಾಲ್ಡ್ ಆಸ್ತಿಯ ಮೂಲ ಮೌಲ್ಯ ಎಷ್ಟು? ಅಕ್ರಮ ನಡೆದಿದೆ ಎಂಬ ಆರೋಪಕೆ ನಿಮ್ಮ ಸ್ಪಷ್ಟನೆ ಏನು? ಎಂಬ ಇತ್ಯಾದಿ ಪ್ರಶ್ನೆಗಳನ್ನು ರಾಹುಲ್‌ಗೆ ಕೇಳಲಾಯಿತು ಎಂದು ಮೂಲಗಳು ಹೇಳಿವೆ. ಆದರೆ, ವಿಚಾರಣೆ ಅಪೂರ್ಣಗೊಂಡಿದ್ದು, ಮಂಗಳವಾರ ಮತ್ತೆ ಬರುವಂತೆ ರಾಹುಲ್‌ಗೆ ಸೂಚನೆ ನೀಡಲಾಗಿದೆ ಎಂದು ಇ.ಡಿ. ಮೂಲಗಳು ಹೇಳಿವೆ. ಇದಕ್ಕೂ ಮುನ್ನ ಜೂ.3ರಂದು ರಾಹುಲ್‌ಗೆ ವಿಚಾರಣೆಗೆ ಹಾಜರಾಗಲು ಇ.ಡಿ. ನೋಟಿಸ್ ನೀಡಿತ್ತು. ಆದರೆ ರಾಹುಲ್ ವಿದೇಶಕ್ಕೆ ಹೋಗಿದ್ದ ಕಾರಣ ಸಮಯಾವಕಾಶ ಕೇಳಿದ್ದರು. ಬಳಿಕ ಜೂ.13ಕ್ಕೆ ವಿಚಾರಣೆ ನಿಗದಿ ಆಗಿತ್ತು. ಇದಕ್ಕೂ ಮುನ್ನ ಯಂಗ್ ಇಂಡಿಯನ್ ಪದಾಧಿಕಾರಿಗಳಾಗಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪವನ್ ಬನ್ಸಲ್ ಅವರನ್ನು ಇ.ಡಿ. ವಿಚಾರಣೆ ನಡೆಸಿತ್ತು.
