National Herald case ಇಡಿ ಸಮನ್ಸ್ ಬೆನ್ನಲ್ಲೇ ವಿದೇಶದಿಂದ ದೆಹಲಿಗೆ ಆಗಮಿಸಿದ ರಾಹುಲ್ ಗಾಂಧಿ!

  • ಹೆರಾಲ್ಡ್ ಪ್ರಕರಣ ಸಂಬಂಧ ರಾಹುಲ್ ಗಾಂಧಿಗೆ ಸಮನ್ಸ್
  • ಜೂನ್ 13ರೊಳಗೆ ಹಾಜರಾಗುವಂತೆ ಸಮನ್ಸ್ ನೀಡಿರುವ ಇಡಿ
  • ಸಮನ್ಸ್ ಹಿನ್ನಲೆಯಲ್ಲಿ ನವದೆಹಲಿಗೆ ಆಗಮಿಸಿದ ರಾಹುಲ್ ಗಾಂಧಿ
Congress leader Rahul Gandhi return to Delhi from abroad after ED summons for National Herald case

ನವದೆಹಲಿ(ಜೂ.04): ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶದಿಂದ ನವದೆಹಲಿಗೆ ಆಗಮಿಸಿದ್ದಾರೆ. ಜೂನ್ 13ರೊಳಗೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜೂನ್ 2ಕ್ಕೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಈ ವೇಳೆ ತಾನು ವಿದೇಶದಲ್ಲಿರುವುದರಿಂದ ಕಾಲಾವಕಾಶ ನೀಡಬೇಕೆಂದು ರಾಹುಲ್ ಗಾಂಧಿ ಮನವಿ ಮಾಡಿದ್ದರು. ರಾಹುಲ್ ಮನವಿ ಪುರಸ್ಕರಿಸಿದ ಜಾರಿ ನಿರ್ದೇಶನಾಲಯ ಜೂನ್ 13ರೊಳಗೆ ವಿಚಾರಣೆ ಹಾಜರಾಗಲು ಸೂಚಿಸಿತ್ತು.

ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!

ವಿದೇಶಿ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಇದೀಗ ನವದೆಹಲಿಗೆ ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ರಾಹುಲ್ ದೆಹಲಿಗೆ ಆಗಮಿಸಿರುವುದನ್ನು ಖಚಿತಪಡಿಸಿದೆ. ಇದೇ ಪ್ರಕರಣ ಸಂಬಂಧ ಸೋನಿಯಾ ಗಾಂಧಿಗೂ ಇಡಿ ನೋಟಿಸ್ ನೀಡಿದೆ. ಆದರೆ ಜೂನ್್ 2 ರಂದು ಸೋನಿಯಾ ಗಾಂಧಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಸೋನಿಯಾ ಚೇತರಿಸಿಕೊಂಡ ಬಳಿಕ ಇಡಿ ಹೊಸ ವಿಚಾರಣೆಗೆ ಹೊಸ ದಿನಾಂಕ ಘೋಷಿಸಲಿದೆ.

ನ್ಯಾಷನಲ್‌ ಹೆರಾಲ್ಡ್‌ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಜೂ.13ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಸೂಚಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜೂ.2ರಂದೇ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಇತ್ತೀಚೆಗೆ ನೋಟಿಸ್‌ ನೀಡಿತ್ತು. ಆದರೆ ವಿದೇಶ ಪ್ರವಾಸದಲ್ಲಿರುವ ರಾಹುಲ್‌, ಜೂ.5ರ ನಂತರದ ಹೊಸ ತಾರೀಖು ಕೇಳಿದ್ದರು. ಈ ಕೋರಿಕೆಯನ್ನು ಇ.ಡಿ. ಮಾನ್ಯ ಮಾಡಿದೆ. ‘ಜೂ.13ರಂದು ಕೇಂದ್ರ ದಿಲ್ಲಿಯ ಇ.ಡಿ. ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿ’ ಎಂದು ಸೂಚಿಸಿದೆ.

ಇದೇ ಪ್ರಕರಣದಲ್ಲಿ ಜೂ.8ರಂದು ರಾಹುಲ್‌ ತಾಯಿ, ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಇತ್ತೀಚೆಗೆ, ಜೂ.8ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಆದರೆ ಕೋವಿಡ್‌ ಸೋಂಕು ತಾಗಿರುವ ಕಾರಣ ಅಂದು ಅವರು ವಿಚಾರಣೆಗೆ ಹಾಜರಾಗುತ್ತಾರಾ ಎಂಬುದು ಪ್ರಶ್ನೆಯಾಗಿದೆ.

Explained: ರಾಹುಲ್ ಗಾಂಧಿ ಇಂಗ್ಲೆಂಡ್‌ಗೆ ಹೋಗಲು ಸರ್ಕಾರದ ಪರವಾನಗಿ ಬೇಕೆ? 

ನ್ಯಾಷನಲ್‌ ಹೆರಾಲ್ಡ್‌ ಆಸ್ತಿ ಮಾರಾಟದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಇದ್ದು, ಈ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಸೋನಿಯಾ ಮತ್ತು ರಾಹುಲ್‌ಗೆ ನೋಟಿಸ್‌ ನೀಡಲಾಗಿದೆ.

90 ಕೋಟಿ ರು. ಅವ್ಯವಹಾರದ ಆರೋಪ:
ಕಾಂಗ್ರೆಸ್‌ ಪಕ್ಷದ ಮುಖವಾಣಿಯಾಗಿರುವ ದಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌) ಎಂಬ ಸಂಸ್ಥೆ ಪ್ರಕಟಿಸುತ್ತದೆ. ಈ ಸಂಸ್ಥೆಯ ಮಾಲೀಕತ್ವವನ್ನು ಯಂಗ್‌ ಇಂಡಿಯನ್‌ ಪ್ರೈ.ಲಿ. ಹೊಂದಿದೆ. ಯಂಗ್‌ ಇಂಡಿಯನ್‌ ಕಂಪನಿಯ ಮಾಲಿಕತ್ವ ಕಾಂಗ್ರೆಸ್‌ ಪಕ್ಷದ ಬಳಿಯಿದೆ. ಈ ಸಂಸ್ಥೆಗಳ ನಡುವೆ ನಡೆದ 90 ಕೋಟಿ ರು. ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಸಂಬಂಧ ಇ.ಡಿ. ಕಳೆದ ವರ್ಷ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಅದಕ್ಕೂ ಮೊದಲೇ 2013ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಕೂಡ ನ್ಯಾಷನಲ್‌ ಹೆರಾಲ್ಡ್‌ ಆಸ್ತಿ ಮಾರಾಟದಲ್ಲಿ ಅವ್ಯವಹಾರ ನಡೆದಿದೆ ಎಂದು ಗಾಂಧಿ ಕುಟುಂಬದ ವಿರುದ್ಧ ದೂರು ನೀಡಿದ್ದರು. ಅವೆಲ್ಲ ಆರೋಪಗಳ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಸೋನಿಯಾ ಮತ್ತು ರಾಹುಲ್‌ಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇವಲ 50 ಲಕ್ಷ ರು. ಸಾಲ ತೀರಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ 90 ಕೋಟಿ ರು. ಮೌಲ್ಯದ ಆಸ್ತಿಯನ್ನು ಯಂಗ್‌ ಇಂಡಿಯನ್‌ ಕಂಪನಿ ಕಬಳಿಸಿದೆ ಎಂಬುದು ಕಾಂಗ್ರೆಸ್‌ ಪಕ್ಷ ಮತ್ತು ಗಾಂಧಿ ಕುಟುಂಬದ ವಿರುದ್ಧ ಇರುವ ಆರೋಪದ ತಿರುಳಾಗಿದೆ.

Latest Videos
Follow Us:
Download App:
  • android
  • ios