ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ ನೀಡಿದ ಹಗರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧ ದೋಷಾರೋಪ ಹೊರಿಸಲು ದೆಹಲಿ ಕೋರ್ಟ್ ಆದೇಶಿಸಿದೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ವಿರುದ್ಧ ಇ.ಡಿ. ಸಲ್ಲಿಸಿದ್ದ ಆರೋಪಪಟ್ಟಿಯನ್ನು ಲಖನೌ ಕೋರ್ಟ್ ಸ್ವೀಕರಿಸಿದೆ.

ನವದೆಹಲಿ: ಲಂಚ ಪಡೆದು ಚೀನಾ ನಾಗರಿಕರಿಗೆ ವೀಸಾ ನೀಡಿದ ಹಗರಣಕ್ಕೆ ಸಂಬಂಧಿಸಿ ಮಾಜಿ ಗೃಹ ಸಚಿವ ಚಿದಂಬರಂ ಪುತ್ರ. ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಕಾರ್ತಿ ಸೇರಿ ಆರು ಮಂದಿ ವಿರುದ್ಧ ದೋಷಾರೋಪ ಹೊರಿಸಲು ದೆಹಲಿ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ವಿಶೇಷ ನ್ಯಾಯಾಧೀಶ(ಸಿಬಿಐ) ದಿಗ್‌ ವಿನಯ್‌ ಸಿಂಗ್‌ ಅವರು ಒಟ್ಟು ಎಂಟು ಆರೋಪಿಗಳಲ್ಲಿ ಏಳು ಮಂದಿ ವಿರುದ್ಧ ದೋಷಾರೋಪ ನಿಗದಿಗೆ ಆದೇಶ ಮಾಡಿದೆ.

2011ರಲ್ಲಿ ವಿದ್ಯುತ್‌ ಕಂಪನಿಯೊಂದರಲ್ಲಿ ಕೆಲಸ ಮಾಡಲು ಚೀನಾ ಪ್ರಜೆಗಳಿಗೆ ವೀಸಾ ನೀಡುವ ಸಂಬಂಧ ಲಂಚ ಪಡೆದ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಸೇರಿ ಹಲವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

Scroll to load tweet…

ಕಾರ್ತಿ ವಿರುದ್ದದ ಆರೋಪಗಳೇನು?

ಆ ಸಂದರ್ಭದಲ್ಲಿ ಕಾರ್ತಿ ತಂದೆ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದರು. ಕಾರ್ತಿ ಅವರ ವಿರುದ್ಧ ಕ್ರಿಮಿನಲ್‌ ಸಂಚು, ಸರ್ಕಾರಿ ನೌಕರನಿಗೆ ಲಂಚ ನೀಡಿದ ಆರೋಪ ಹೊರಿಸಲಾಗಿದೆ. ಈ ಕುರಿತ ಚಾರ್ಜ್‌ಶೀಟ್‌ ಅನ್ನು ವಿಶೇಷ ಕೋರ್ಟ್‌ ಮುಂದೆ ಸಲ್ಲಿಸಲಾಗಿದ್ದು, ಕಾರ್ತಿ ಚಿದಂಬರಂ, ಅವರ ಆತ್ಮೀಯರಾದ ಎಸ್‌.ಭಾಸ್ಕರರಾಮ್‌, ತಲಾವಂಡಿ ಸಬೋ ಪವರ್‌ ಲಿ(ಟಿಎಸ್‌ಪಿಎಲ್‌), ಬೆಲ್‌ ಟೂಲ್ಸ್‌ ಸೇರಿ ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಕಾಂಗ್ರೆಸಿಗ ಖುರ್ಷಿದ್‌ ಪತ್ನಿ ಇ.ಡಿ. ಸಂಕಷ್ಟ

ನವದೆಹಲಿ: ವಿದೇಶಾಂಗ ಸಚಿವರಾಗಿದ್ದ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಅವರ ಪತ್ನಿ ಲೂಯಿಸ್‌ ಅವರು ಆರೋಪಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ.) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಲಖನೌನ ವಿಶೇಷ ಪಿಎಂಎಲ್‌ಎ ಕೋರ್ಟ್‌ ಸ್ವೀಕರಿಸಿದೆ. 2009-10ರ ಅವಧಿಯಲ್ಲಿ ಲೂಯಿಸ್‌ ಅವರ ಎನ್‌ಜಿಒ ಉತ್ತರಪ್ರದೇಶದಲ್ಲಿ ಅಂಗವಿಕಲರಿಗೆ ಕೃತಕ ಅಂಗಗಳನ್ನು ಜೋಡಿಸುವ ಕ್ಯಾಂಪ್‌ ನಡೆಸಲು ಕೇಂದ್ರ ಸರ್ಕಾರದಿಂದ 71.50 ಲಕ್ಷ ರು, ಪಡೆದಿತ್ತು. ಆದರೆ ಅವರು ಆ ಹಣದಲ್ಲಿ ಕ್ಯಾಂಪ್‌ ನಡೆಸದೆ ಅದನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡಿದ್ದರು ಎಂಬುದು ಆರೋಪ.

ಈ ಬಗ್ಗೆ ಇ.ಡಿ. ಆ.11ರಂದು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಆರೋಪಿಯ 45.92 ಲಕ್ಷ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅವರಿಗೆ ಶಿಕ್ಷೆ ವಿಧಿಸಲು ಕೋರಿತ್ತು. ಇದನ್ನೀಗ ಸ್ವೀಕರಿಸಿರುವ ಕೋರ್ಟ್‌, ಅತಿ ಶೀಘ್ರ ವಿಚಾರಣೆ ಆರಂಭಿಸುವ ನಿರೀಕ್ಷೆಯಿದೆ.

Scroll to load tweet…