ಕಳ್ಳತನ ಪ್ರಕರಣದ ನಂತರ ಭದ್ರಕಾಳಿ ದೇವಸ್ಥಾನದಲ್ಲಿ ದುರ್ಗಾದೇವಿ ವಿಗ್ರಹ ಪತ್ತೆಯಾಗಿದೆ. ಈ ವಿಗ್ರಹ ದೇವಸ್ಥಾನಕ್ಕೆ ಸೇರಿದ್ದಲ್ಲದ ಕಾರಣ, ಪೊಲೀಸರು ತನಿಖೆ ಆರಂಭಿಸಿದ್ದಾರೆ. 30 ವರ್ಷಗಳ ಹಿಂದಿನ ಕಳ್ಳತನದ ನಂತರ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ 30 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದು, ಆಭರಣಗಳನ್ನು ವಾಪಸ್ ತಂದುಕೊಟ್ಟ ಕಳ್ಳನೊಬ್ಬ ಮೃತಪಟ್ಟ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೇ ಭದ್ರಕಾಳಿ ದೇವಸ್ಥಾನದ ಗೋಪುರದ ಬಳಿ ದುರ್ಗಾದೇವಿಹ ವಿಗ್ರಹವೊಂದು ಪತ್ತೆಯಾಗಿದೆ. ಈ ವಿಗ್ರಹ ದೇವಸ್ಥಾನಕ್ಕೆ ಸೇರಿದ್ದಲ್ಲದ ಕಾರಣ ದೇವಸ್ಥಾನ ಆಡಳಿತ ಮಂಡಳಿಗೆ ಹಾಗೂ ಸ್ಥಳೀಯರಿಗೆ ಭಾರೀ ಆತಂಕ ಶುರುವಾಗಿದೆ.
ದೇವಾಲಯದಲ್ಲಿ ಪತ್ತೆಯಾಗಿರುವ ಈ ವಿಗ್ರಹ ಇಲ್ಲಿಗೆ ಹೇಗೆ ಬಂತು? ಎಂದು ದೇವಸ್ಥಾನ ಆಡಳಿತ ಮಂಡಳಿ ಸಿಬ್ಬಂದಿ ತಲೆ ಕೆಡಿಸಿಕೊಂಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ಮಾಡಿದ ನಂತರ ಇದೀಗ ಬೆರಳಚ್ಚು ತಂಡದಿಂದ ಈ ಭದ್ರಕಾಳಿ ಮೂರ್ತಿಯ ಮೂಲವನ್ನು ಪತ್ತೆ ಮಾಡುವುದಕ್ಕೆ ಬೇಕಾಗಿರುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಜೊತೆಗೆ, ಸ್ಥಳೀಯ ಪೊಲೀಸರು ದೇವಸ್ಥಾನ ಹಾಗೂ ಸುತ್ತಲಿನ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದು, ಈ ವಿಗ್ರಹವನ್ನು ಯಾರು ತಂದು ಇಟ್ಟು ಹೋಗಿದ್ದಾರೆ ಎಂಬ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ.
ದೇವಾಲಯಕ್ಕೆ ಬಂದ ಭಕ್ತರು ಯಾರಾದರೂ ಬಂದು ವಿಗ್ರಹವನ್ನು ಬಿಟ್ಟು ಹೋಗಿದ್ದಾರೆಯೇ ಎಂಬ ಆಯಾಮದಿಂದಲೂ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಪಾಚಲ್ಲೂರು ಭದ್ರಕಾಳಿ ದೇವಸ್ಥಾನದ ಉತ್ತರ ಗೋಪುರದ ಬಳಿ ನಿನ್ನೆ ಸಂಜೆ ದುರ್ಗೆಯ ವಿಗ್ರಹ ಪತ್ತೆಯಾಗಿದೆ. ಈ ದೇವಸ್ಥಾನಕ್ಕೆ ಸಂಬಂಧಿಸದ ವಿಗ್ರಹ ಆಗಿರುವುದರಿಂದ, ಇದನ್ನು ಎಲ್ಲಿಂದಲೋ ಕದ್ದಿದ್ದಾರೋ ಅಥವಾ ಯಾರಾದರೂ ಇಲ್ಲಿ ಬಿಟ್ಟು ಹೋಗಿದ್ದಾರೋ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿರುವಳ್ಳಂ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ದೇವಸ್ಥಾನದಿಂದ ಸ್ಥಳೀಯರು ಕದ್ದಿದ್ದ ಚಿನ್ನ ಮತ್ತು ಬೆಳ್ಳಿ ಗೆಜ್ಜೆಗಳನ್ನು 30 ವರ್ಷಗಳ ಕಾನೂನು ಹೋರಾಟದ ಕಳೆದ ಕೆಲವು ದಿನಗಳಿಂದೀಚೆಗೆ ಮಾತ್ರವೇ ನೆಯ್ಯಟ್ಟಿಂಕರ ನ್ಯಾಯಾಲಯದಿಂದ ದೇವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಕಳ್ಳತನದ ಗ್ಯಾಂಗಿನ ಯಾವುದಾದರೂ ಆರೋಪಿ ಇಲ್ಲಿ ವಿಗ್ರಹವನ್ನು ಇಟ್ಟು ಹೋಗಿದ್ದಾರೆಯೇ ಎಂಬ ಅನುಮಾನವೂ ಪೊಲೀಸರಿಗೆ ಕಾಡುತ್ತಿದೆ.
ಇನ್ನು 30 ವರ್ಷಗಳ ಹಿಂದೆ ಕಳ್ಳತನವಾಗಿದ್ದ ದೇವಸ್ಥಾನದ ಆಭರಣಗಳನ್ನು ನ್ಯಾಯಾಲದಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಒಪ್ಪಿಸಿದ ನಂತರ ಎಲ್ಲ ಆಭರಣಗಳನ್ನು ತಿರುವಳ್ಳಂ ಪರಶುರಾಮಸ್ವಾಮಿ ದೇವಸ್ಥಾನದಿಂದ ಅಲಂಕೃತ ತೆರೆದ ವಾಹನದಲ್ಲಿ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಭದ್ರಕಾಳಿ ದೇವಸ್ಥಾನಕ್ಕೆ ತರಲಾಗಿತ್ತು. ಕದ್ದ ಆಭರಣಗಳು ದೇವಸ್ಥಾನಕ್ಕೆ ಬಂದ ನಂತರ ಈ ಆಭರಣಗಳನ್ನು ಕಳ್ಳತನ ಮಾಡಿದ್ದ ಗುಂಪಿನಲ್ಲಿ ಒಬ್ಬ ಕಳ್ಳ ಸಾವನ್ನಪ್ಪಿದ್ದಾರೆ ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೇ ದೇವಸ್ಥಾನದ ಬಳಿ ಇದೀಗ ದುರ್ಗಾದೇವಿ ವಿಗ್ರಹ ಪತ್ತೆಯಾಗಿರುವುದರಿಂದ ಸ್ಥಳೀಯರು ಮತ್ತು ದೇವಸ್ಥಾನದ ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದಾರೆ.
