ಡಿಆರ್‌ಡಿಓ ಅತಿಥಿ ಗೃಹ ವ್ಯವಸ್ಥಾಪಕ ಮಹೇಂದ್ರ ಪ್ರಸಾದ್ ಪಾಕಿಸ್ತಾನದ ಐಎಸ್‌ಐಗೆ ಗೌಪ್ಯ ಮಾಹಿತಿ ಸೋರಿಕೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿದ್ದಾನೆ ರಕ್ಷಣಾ ಚಟುವಟಿಕೆಗಳ ಮಾಹಿತಿಯನ್ನು ಪಾಕಿಸ್ತಾನಿ ಹ್ಯಾಂಡ್ಲರ್‌ಗೆ ರವಾನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಪಾಕಿಸ್ತಾನದ ಐಎಸ್‌ಐಗೆ ಗೌಪ್ಯ ಮಾಹಿತಿ ಸೋರಿಕೆ ಮಾಡಿರುವ ಆರೋಪದ ಮೇರೆಗೆ ಡಿಆರ್‌ಡಿಓ ಅತಿಥಿ ಗೃಹ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹೇಂದ್ರ ಪ್ರಸಾದ್ (32) ಎಂದು ಗುರುತಿಸಲಾಗಿದೆ. ಆತ ರಾಜಸ್ಥಾನದಲ್ಲಿನ ಚಂದನ್ ಫೀಲ್ಡ್ ಫೈರಿಂಗ್ ರೇಂಜ್ ಪ್ರದೇಶದಲ್ಲಿರುವ ಡಿಆರ್‌ಡಿಓ ಅತಿಥಿ ಗೃಹದ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದನು. ಆರೋಪಿಯು ಗಡಿ ಸಂಬಂಧಿತ ಗೌಪ್ಯ ಹಾಗೂ ಕಾರ್ಯತಂತ್ರದ ರಾಷ್ಟ್ರೀಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಹಂಚಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಮಹೇಂದ್ರ ಪ್ರಸಾದ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತದ ರಕ್ಷಣಾ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ, ರಾಜ್ಯದ ಸಿಐಡಿ ಗುಪ್ತಚರ ಇಲಾಖೆ ರಾಷ್ಟ್ರವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳ ಮೇಲೆ ಕಣ್ಗಾವಲು ಹೆಚ್ಚಿಸಿದ್ದಿತ್ತು ಎಂದು ಸಿಐಡಿ (ಭದ್ರತಾ) ಐಜಿ ಡಾ. ವಿಷ್ಣುಕಾಂತ್ ತಿಳಿಸಿದ್ದಾರೆ. ಈ ಮೇಲ್ವಿಚಾರಣೆಯ ಸಂದರ್ಭದಲ್ಲಿ ಮಹೇಂದ್ರ ಪ್ರಸಾದ್ ಬಗ್ಗೆ ಶಂಕಾಸ್ಪದ ಮಾಹಿತಿ ದೊರೆತಿತ್ತು.
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಪಲ್ಯುನ್ ಗ್ರಾಮದ ನಿವಾಸಿಯಾಗಿರುವ ಪ್ರಸಾದ್, ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನದ ಗುಪ್ತಚರ ಹ್ಯಾಂಡ್ಲರ್‌ರೊಂದಿಗೆ ಸಂಪರ್ಕ ಸಾಧಿಸಿದ್ದಾನೆಂದು ತನಿಖೆಯಲ್ಲಿ ಪತ್ತೆಯಾಗಿದೆ. ಆತ ಕ್ಷಿಪಣಿ ಮತ್ತು ಶಸ್ತ್ರಾಸ್ತ್ರ ಪರೀಕ್ಷೆಗಳ ಸಲುವಾಗಿ ಚಂದನ್ ಫೀಲ್ಡ್ ಫೈರಿಂಗ್ ರೇಂಜ್‌ಗೆ ಭೇಟಿ ನೀಡುವ ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಭಾರತೀಯ ಸೇನಾ ಅಧಿಕಾರಿಗಳ ಚಲನವಲನಗಳ ವಿವರಗಳನ್ನು ತನ್ನ ಹ್ಯಾಂಡ್ಲರ್‌ಗೆ ಹಂಚುತ್ತಿದ್ದನೆಂದು ಆರೋಪಿಸಲಾಗಿದೆ. ಜೈಸಲ್ಮೇರ್‌ನಲ್ಲಿರುವ ಈ ಸೌಲಭ್ಯವು ದೇಶದ ಕಾರ್ಯತಂತ್ರದ ರಕ್ಷಣಾ ಸಾಧನಗಳನ್ನು ಪರೀಕ್ಷಿಸಲು ಅತ್ಯಂತ ಮಹತ್ವದ ಕೇಂದ್ರವಾಗಿದೆ.
ಬಂಧನದ ಬಳಿಕ, ಪ್ರಸಾದ್ ಅವರನ್ನು ಭದ್ರತಾ ಸಂಸ್ಥೆಗಳು ಜಂಟಿ ವಿಚಾರಣೆಗೆ ಒಳಪಡಿಸಿದ್ದು, ಅವರ ಮೊಬೈಲ್ ಫೋನ್ ಸಂಪೂರ್ಣ ತಾಂತ್ರಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ. ತನಿಖೆಯಿಂದ, ಡಿಆರ್‌ಡಿಒ ಕಾರ್ಯಾಚರಣೆಗಳು ಮತ್ತು ಸೇನೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಆತ ಪಾಕಿಸ್ತಾನಿ ಹ್ಯಾಂಡ್ಲರ್‌ಗೆ ಹಂಚಿಕೊಂಡಿದ್ದಾನೆಂಬುದು ದೃಢಪಟ್ಟಿದೆ. ಸಾಕ್ಷ್ಯಾಧಾರಗಳ ಮೇರೆಗೆ, ಸಿಐಡಿ ಗುಪ್ತಚರ ದಳ ಮಹೇಂದ್ರ ಪ್ರಸಾದ್ ಅವರನ್ನು ಅಧಿಕೃತವಾಗಿ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಿದೆ.
ಪ್ರಸ್ತುತ, ಭದ್ರತಾ ಸಂಸ್ಥೆಗಳು ಈ ಗೂಢಚಾರಿಕೆಯಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿವೆ. ಈ ಪ್ರಕರಣವು ಭಾರತದ ಕಾರ್ಯತಂತ್ರದ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುವ ವಿದೇಶಿ ಗುಪ್ತಚರ ಚಟುವಟಿಕೆಗಳಿಂದ ಉಂಟಾಗುವ ನಿರಂತರ ಬೆದರಿಕೆಯನ್ನು ಸ್ಪಷ್ಟಪಡಿಸಿದೆ.
ಭದ್ರತಾ ಸಂಸ್ಥೆಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳು ಎಚ್ಚರಿಕೆಯಿಂದಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ವರದಿ ಮಾಡುವಂತೆ ಕಡ್ಡಾಯ ಸೂಚನೆ ನೀಡಿವೆ.


