ನವದೆಹಲಿ(ಏ.25): ಕೊರೋನಾ ವೈರಸ್‌ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್‌ಡೌನ್‌ ಸಕಾಲಿಕ ಕ್ರಮ ಕೇಂದ್ರ ಆರೋಗ್ಯ ಸಚಿವಾಲಯ ಪುನರುಚ್ಚರಿಸಿದೆ. ಒಂದು ವೇಳೆ ಲಾಕ್‌ಡೌನ್‌ ಇರದೇ ಇದ್ದರೆ ಈ ವೇಳೆಗೆ 1 ಲಕ್ಷ ಜನರಿಗೆ ಕೊರೋನಾ ಅಂಟುತ್ತಿತ್ತು ಎಂದು ಅದು ಹೇಳಿದೆ.

ಇದೇ ವೇಳೆ, ಲಾಕ್‌ಡೌನ್‌ ಪ್ರಭಾವದಿಂದ ಕೊರೋನಾ ಪ್ರಕರಣಗಳು ದ್ವಿಗುಣಗೊಳ್ಳುತ್ತಿರುವ ದಿನಗಳ ಸಂಖ್ಯೆ 3 ದಿನಗಳಿಂದ 10ಕ್ಕೆ ಏರಿದೆ ಎಂದೂ ಸರ್ಕಾರ ತಿಳಿಸಿದೆ.

ಪ್ಲಾಸ್ಮಾ ಥೆರಪಿಗೆ ದಿಲ್ಲಿಯಲ್ಲಿ ಆರಂಭದಲ್ಲೇ ಯಶಸ್ಸು!

ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊರೋನಾ ಉನ್ನತಾಧಿಕಾರ ಸಮಿತಿಯೊಂದರ ಮುಖ್ಯಸ್ಥ ಹಾಗೂ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌, ‘ಮಾಚ್‌ರ್‍ 21ರ ವೇಳೆಗೆ 3 ದಿನಗಳಿಗೊಮ್ಮೆ ಕೊರೋನಾ ಪ್ರಕರಣಗಳು ದ್ವಿಗುಣವಾಗುತ್ತಿದ್ದವು. ಈ ನಡುವೆ, ಮಾಚ್‌ರ್‍ 23ರಂದು ಜನತಾ ಕರ್ಫ್ಯೂ, ನಂತರ ಲಾಕ್‌ಡೌನ್‌, ಪ್ರಯಾಣ ನಿರ್ಬಂಧ ಹಾಗೂ ಸಾಮಾಜಿಕ ಅಂತರ ಕಾಯುವಿಕೆಯ ಕ್ರಮ ಜರುಗಿಸಿದ ಕಾರಣ 5 ದಿನಗಳಿಗೊಮ್ಮೆ ದ್ವಿಗುಣಗೊಳ್ಳಲು ಆರಂಭವಾಯಿತು. ಈ ನಡುವೆ, ಕೆಲವು ಹಿನ್ನಡೆಗಳಾದರೂ ಏಪ್ರಿಲ್‌ 6ರಿಂದ ದ್ವಿಗುಣಗೊಳ್ಳುತ್ತಿರುವ ದಿನಗಳ ಸಂಖ್ಯೆ ಹೆಚ್ಚತೊಡಗಿದೆ. ಈಗ 10 ದಿನಗಳಿಗೊಮ್ಮೆ ಪ್ರಕರಣ ದುಪ್ಪಟ್ಟಾಗುತ್ತಿದೆ’ ಎಂದರು.

‘ನಮ್ಮ ಅಂದಾಜಿನ ಪ್ರಕಾರ, ಲಾಕ್‌ಡೌನ್‌ ಇಲ್ಲದಿದ್ದರೆ ಈಗ 1 ಲಕ್ಷ ಮಂದಿಗೆ ಕೊರೋನಾ ಹರಡುತ್ತಿತ್ತು. ಹೀಗಾಗಿ ಇದನ್ನು ನೋಡಿದಾಗ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎನ್ನಿಸುತ್ತದೆ’ ಎಂದರು.

ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ‘ಕಳೆದ 28 ದಿನಗಳಲ್ಲಿ 15 ದಿನಗಳಲ್ಲಿ ಒಂದೂ ಕೊರೋನಾ ಪ್ರಕರಣ ವರದಿಯಾಗಿಲ್ಲ. ಹೀಗಾಗಿ, ಕಳೆದ 14 ದಿನಗಳಲ್ಲಿ ಕೊರೋನಾ ವರದಿಯಾಗದ ಜಿಲ್ಲೆಗಳ ಸಂಖ್ಯೆ 80ಕ್ಕೇರಿದೆ’ ಎಂದರು.

ಲಾಕ್‌ಡೌನ್‌ ಎಫೆಕ್ಟ್‌: ವಿಶ್ವ ಮಧ್ವ ಪರಿಷತ್‌ನಿಂದ ಆನ್‌ಲೈನ್‌ ಧಾರ್ಮಿಕ ಶಿಬಿರ

ಶುಕ್ರವಾರ ಸಂಜೆ 4 ಗಂಟೆಯ ವರದಿ ಪ್ರಕಾರ, ಒಂದು ದಿನದಲ್ಲಿ 1684 ಹೊಸ ಕೊರೋನಾ ಪ್ರಕರಣ ದೃಢಪಟ್ಟಿವೆ. ಈವರೆಗೆ ಭಾರತದಲ್ಲಿ 23,077 ಜನರು ಕೊರೋನಾ ಪೀಡಿತರಾಗಿದ್ದು, 4748 ಜನರು ಗುಣಮುಖರಾಗಿದ್ದಾರೆ. ಗುಣಮುಖ ಪ್ರಮಾಣ ಶೇ.21ಕ್ಕೇರಿದೆ.