* ದೆಹಲಿಯ ಫ್ಲ್ಯಾಟ್‌ನಲ್ಲಿ ಪತ್ತೆಯಾಯ್ತು ಒಂದೇ ಕುಟುಂಬದ ಮೂವರ ಶವ* ಮೃತರನ್ನು ಮಂಜು ಮತ್ತು ಅವರ ಪುತ್ರಿಯರಾದ ಅಂಶಿಕಾ ಮತ್ತು ಅಂಕು ಎಂದು ಗುರುತಿಸಲಾಗಿದೆ* ಕೊರೋನಾದಿಂದ ಮೃತಪಟ್ಟಿದ್ದ ಮನೆ ಯಜಮಾನ

ನವದೆಹಲಿ(ಮೇ.22): ಶನಿವಾರ ಸಂಜೆ ದೆಹಲಿಯ ವಸಂತ ವಿಹಾರ್ ಪ್ರದೇಶದ ಫ್ಲಾಟ್‌ನಲ್ಲಿ ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮಂಜು ಮತ್ತು ಅವರ ಪುತ್ರಿಯರಾದ ಅಂಶಿಕಾ ಮತ್ತು ಅಂಕು ಎಂದು ಗುರುತಿಸಲಾಗಿದೆ. ಕೊರೋನಾದಿಂದ ಮನೆಯ ಯಜಮಾನ ಅಂದರೆ ಪತಿ ಏಪ್ರಿಲ್ 2021 ರಲ್ಲಿ ನಿಧನರಾಗಿದ್ದರು ಎಂದು ಹೇಳಲಾಗುತ್ತಿದೆ. ಅಂದಿನಿಂದ ಕುಟುಂಬ ಸದಸ್ಯರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಮಂಜು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ.

ವಸಂತ ಅಪಾರ್ಟ್‌ಮೆಂಟ್‌ನ ಮನೆ ಸಂಖ್ಯೆ 207 ಒಳಗಿನಿಂದ ಲಾಕ್ ಆಗಿದ್ದು, ಮನೆಯೊಳಗಿದ್ದವರು ಬಾಗಿಲು ತೆರೆಯುತ್ತಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದಾದ ಬಳಿಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ಎಸ್‌ಎಚ್‌ಒ ನೋಡಿದಾಗ ಎಲ್ಲಾ ಕಡೆಯಿಂದ ಬಾಗಿಲು, ಕಿಟಕಿಗಳು ಮುಚ್ಚಿದ್ದವು. ಫ್ಲಾಟ್ ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರು ಬಾಗಿಲು ತೆರೆದಾಗ ಗ್ಯಾಸ್ ಸಿಲಿಂಡರ್ ಭಾಗಶಃ ತೆರೆದಿರುವುದು ಕಂಡು ಬಂದಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಶನಿವಾರ ರಾತ್ರಿ 8.55 ಕ್ಕೆ ವಸಂತ ವಿಹಾರದಲ್ಲಿರುವ ವಸಂತ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಸಂಖ್ಯೆ 207 ಒಳಗಿನಿಂದ ಬೀಗ ಹಾಕಲ್ಪಟ್ಟಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದ್ದು, ಮನೆಯವರು ಯಾವುದೇ ಉತ್ತರ ನೀಡುತ್ತಿಲ್ಲ ಎನ್ನಲಾಗಿದೆ. ಘಟನಾ ಸ್ಥಳದಿಂದ ಪೊಲೀಸರಿಗೆ ಆತ್ಮಹತ್ಯೆ ಪತ್ರ ಸಿಕ್ಕಿದೆ. ಒಳಗಿನ ಕೊಠಡಿಯನ್ನು ಹುಡುಕಿದಾಗ ಮೂರು ಶವಗಳು ಹಾಸಿಗೆಯ ಮೇಲೆ ಬಿದ್ದಿರುವುದು ಕಂಡುಬಂದಿದೆ. ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ ಎಂದು ನೈಋತ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಮನೋಜ್ ಸಿ ಹೇಳಿದ್ದಾರೆ.

ಮನೆಯೊಳಗಿನ ಎಲ್ಲಾ ಸ್ಕೈಲೈಟ್‌ಗಳು ಪಾಲಿಥಿನ್‌ನಿಂದ ಮುಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ. ಮನೆಯಲ್ಲಿ ಸ್ಟೌವ್ ಹೊತ್ತಿಸಲಾಗಿತ್ತು, ಬಳಿಕ ಮನೆಯ ಗ್ಯಾಸ್ ಸಿಲಿಂಡರ್ ತೆರೆದಿಡಲಾಗಿದೆ. ಇದಾದ ನಂತರ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ, ಮಾರಣಾಂತಿಕ ಅನಿಲ ಹಬ್ಬಿಕೊಂಡಿದೆ ಎಂದು ಬರೆದ ಚೀಟಿ ಕಂಡುಬಂದಿದೆ. ಬಾಗಿಲು ತೆರೆದ ನಂತರ ಬೆಂಕಿಕಡ್ಡಿ ಅಥವಾ ಲೈಟರ್‌ಗಳನ್ನು ಬೆಳಗಿಸಬೇಡಿ, ಮನೆ ತುಂಬಾ ಅಪಾಯಕಾರಿ ವಿಷಕಾರಿ ಅನಿಲದಿಂದ ತುಂಬಿರುತ್ತದೆ ಎಂದೂ ಇದರಲ್ಲಿ ಉಲ್ಲೇಖಿಸಲಾಗಿದೆ. ವಾಸ್ತವವಾಗಿ, ತಾವು ಸಾವನ್ನಪ್ಪಿದ ಬಳಿಕ ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ ಯಾವುದೇ ಅಪಘಾತ ಸಂಭವಿಸಬಾರದು ಎಂದು ಈ ಟಿಪ್ಪಣಿ ಬರೆಯಲಾಗಿದೆ.