ಅನಿರುದ್ಧ ಆಚಾರ್ಯರಿಗೆ ಅಖಿಲೇಶ್ ಯಾದವ್ ಅವರು ಯಾರನ್ನೂ ಶೂದ್ರ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ವರ್ಣ ವಿಂಗಡಣೆ ಕುರಿತು ಇಬ್ಬರ ನಡುವೆ ಸೈದ್ಧಾಂತಿಕ ಚರ್ಚೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಕ್ನೋ: ಜಾತಿ ಇಲ್ಲದೇ ರಾಜಕಾರಣ ಇಲ್ಲ. ರಾಜಕಾರಣವಿಲ್ಲದೇ ಜಾತಿ ಇಲ್ಲ ಎಂಬ ಮಾತಿದೆ. ಚುನಾವಣೆ ಬಂದಾಗ ಜಾತಿ ಲೆಕ್ಕಾಚಾರವೇ ಮೊದಲು ಬರುತ್ತದೆ. ಕೆಲವೊಮ್ಮೆ ರಾಜಕೀಯ ವೇದಿಕೆಗಳಲ್ಲಿ ಧರ್ಮದ ಕುರಿತು ಪ್ರಶ್ನೆ ಕೇಳಿದ್ರೆ ನಾಯಕರ ಉತ್ತರ ಮೌನವಾಗಿರುತ್ತದೆ. ಕೆಲವರು ಮಾತನ್ನು ಬದಲಿಸಲು ಪ್ರಯತ್ನಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ, ಮಾಜಿ ಸಿಎಂ ಅಖಿಲೇಶ್ ಯಾದವ್, ಹರಿಕಥಾ ವಾಚಕರಾಗಿರುವ ಅನಿರುದ್ಧ ಆಚಾರ್ಯ ಅವರಿಗೆ ಯಾರನ್ನೂ ಶೂಗ್ರ ಎಂದು ಕರೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್ ವೇಯಲ್ಲಿ ಅಖಿಲೇಶ್ ಯಾದವ್ ಮತ್ತು ಅನಿರುದ್ಧ ಆಚಾರ್ಯ ಮುಖಾಮುಖಿಯಾಗಿದ್ದಾರೆ. ಮುಖಾಮುಖಿ ಆಗುತ್ತಿದ್ದಂತೆ ಕುಶಲೋಪಚಾರ ವಿಚಾರಿಸಿಕೊಂಡಿದ್ದಾರೆ. ಇಬ್ಬರ ಮಾತು ನೋಡ ನೋಡುತ್ತಿದ್ದಂತೆ ಸೈದ್ದಾಂತಿಕ ಸಂಘರ್ಷಕ್ಕೆ ಬದಲಾಗಿದೆ. ಈ ಭೇಟಿಯಲ್ಲಿ ಅಖಿಲೇಶ್ ಯಾದವ್ ನೇರವಾಗಿಯೇ ಅನಿರುದ್ಧ ಆಚಾರ್ಯ ಅವರನ್ನು ಪ್ರಶ್ನೆ ಮಾಡುತ್ತಾರೆ. ಆದ್ರೆ ಈ ಪ್ರಶ್ನೆ ಯಾವುದೇ ರಾಜಕೀಯ ಕುರಿತು ಆಗಿರಲಿಲ್ಲ. ಬದಲಾಗಿ ಸಮಾಜದಲ್ಲಿನ ಯೋಚನೆ ಮತ್ತು ವರ್ಣ ವಿಂಗಡನೆಯ ಕುರಿತಾಗಿತ್ತು.
ಅಖಿಲೇಶ್ ಪ್ರಶ್ನೆಗೆ ಉತ್ತರ ನೀಡದ ಅನಿರುದ್ಧ ಆಚಾರ್ಯ!
ಅಖಿಲೇಶ್ ಯಾದವ್ ಪ್ರಶ್ನೆಗೆ ಹರಿಕಥಾ ವಾಚಕ ಅನಿರುದ್ಧ ಆಚಾರ್ಯ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಅಖಿಲೇಶ್ ಯಾದವ್ ಪ್ರಶ್ನೆಯನ್ನು ಅನಿರುದ್ಧ ಆಚಾರ್ಯ ಆಲಿಸುತ್ತಾರೆ ಮತ್ತು ಮೌನವಾಗುತ್ತಾರೆ. ಅನಿರುದ್ಧ ಆಚಾರ್ಯ ಉತ್ತರ ನೀಡದಿದ್ದಾಗ, ಇದೇ ಕಾರಣಕ್ಕೆ ನಮ್ಮ ಮತ್ತು ನಿಮ್ಮ ಮಾರ್ಗ ಬೇರೆ ಬೇರೆಯಾಗಿದೆ ಎಂದು ಟಾಂಗ್ ನೀಡುತ್ತಾರೆ.
ಅಖಿಲೇಶ್ ಯಾದವ್ ಮನವಿ
ಮತ್ತೆ ತಮ್ಮ ಮಾತು ಮುಂದುವರಿಸುವ ಅಖಿಲೇಶ್ ಯಾದವ್, ಹೀಗಾಗಿಯೇ ಯಾರನ್ನೂ ಸಹ ಶೂದ್ರ ಎಂದು ಕರೆಯಬೇಡಿ ಎಂದು ಅನಿರುದ್ಧ ಆಚಾರ್ಯ ಬಳಿ ಮನವಿ ಮಾಡಿಕೊಳ್ಳುತ್ತಾರೆ. ನಂತರ ಕೈ ಮುಗಿದು ಅಲ್ಲಿಂದ ಅಖಿಲೇಶ್ ಯಾದವ್ ಹೊರಡುತ್ತಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಪಾದರಸದಂತೆ ವೈರಲ್ ಆಗಿದ್ದು, ಈ ಸಂಬಂಧ ಸೈದ್ದಾಂತಿಕ ಚರ್ಚೆಗಳು ಶುರುವಾಗಿವೆ.
ಅನಿರುದ್ಧ ಆಚಾರ್ಯ ನಕಲಿ ಬಾಬಾ
ಈ ವಿಡಿಯೋವನ್ನು @surya_samajwadi ಹೆಸರಿನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಇದುವರೆಗೂ ಸಾವಿರಾರು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಕಮೆಂಟ್ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನಿರುದ್ದ ಆಚಾರ್ಯ ಓರ್ವ ನಕಲಿ ಬಾಬಾ. ಇವರಿಗೆ ಏನು ಗೊತ್ತಿಲ್ಲ ಮತ್ತು ಯಾವ ಜ್ಞಾನವನ್ನು ಸಹ ಹೊಂದಿಲ್ಲ. ಇವರೊಬ್ಬರು ಓದಿರುವ ಅನಕ್ಷರಸ್ಥ. ಇದೊಂದು ಒಳ್ಳೆಯ ಮುಖಾಮುಖಿಯಾಗಿದ್ದು, ಈ ಸಂಬಂಧ ವೇದಿಕೆಯಲ್ಲಿ ಚರ್ಚೆಗಳು ನಡೆಯಬೇಕೆಂದು ಹೇಳಿದ್ದಾರೆ.
ಅಖಿಲೇಶ್ ಯಾದವ್ ಈ ಮನವಿ ಮಾಡಿಕೊಂಡಿದ್ದೇಕೆ?
ಇತ್ತೀಚೆಗೆ ಹರಿಕಥೆ ಹೇಳುವಾಗ ಭಕ್ತರೊಬ್ಬರು ಅನಿರುದ್ಧ ಆಚಾರ್ಯ ಅವರಿಗೆ, ಈ ವರ್ಣ ವ್ಯವಸ್ಥೆ ಅನ್ನೋದು ಜನ್ಮದಿಂದಾನಾ ಅಥವಾ ಕರ್ಮದಿಂದನಾ ಎಂದು ಕೇಳುತ್ತಾರೆ. ಮಾವು ಜನ್ಮದಿಂದ ಸಿಹಿಯಾಗಿದೆಯಾ? ಅಥವಾ ಸಿಹಿ ಅಂತ ಮಾವು ಅಂತ ಕರೆಯುತ್ತೇವೆಯಾ? ಹಾಗೆಯೇ ಪ್ರೋಟಿನ್ ಹೊಂದಿದೆಯಾ ಎಂದು ನೆಲ್ಲಿಕಾಯಿ ಕರೆಯಲ್ಲ. ಜನ್ಮದಿಂದಲೇ ಜಾತಿ. ಬ್ರಾಹ್ಮಣ ಜನ್ಮದಿಂದಲೇ ಬ್ರಾಹ್ಮಣ, ಹಾಗೆಯೇ ಜನ್ಮದಿಂದಲೇ ಆತ ಶೂದ್ರನಾಗುತ್ತಾನೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಅಖಿಲೇಶ್ ಯಾದವ್ ಈ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
