ಹೈದರಾಬಾದ್‌ನಲ್ಲಿ 17 ವರ್ಷದ ಬಾಲಕನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 28 ವರ್ಷದ ಮನೆಗೆಲಸದಾಕೆಯನ್ನು ಬಂಧಿಸಲಾಗಿದೆ. ಮನೆ ವ್ಯವಸ್ಥಾಪಕರು ದೌರ್ಜನ್ಯವನ್ನು ಗಮನಿಸಿದ ನಂತರ ಬಾಲಕನ ತಾಯಿ ದೂರು ದಾಖಲಿಸಿದ್ದಾರೆ. ಆರೋಪಿ ಮಹಿಳೆಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಲಕನಿಗೆ ಕೌನ್ಸೆಲಿಂಗ್ ನೀಡಲಾಗುತ್ತಿದೆ.

ಹೈದರಾಬಾದ್ (ಮೇ 05): ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿರುವ ಮನೆಯಲ್ಲಿ ಮನೆಗೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಈ ಮಹಿಳೆ, ತನ್ನ ಸಹೋದ್ಯೋಗಿಯ 17 ವರ್ಷದ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಜೂಬಿಲಿ ಹಿಲ್ಸ್‌ನಲ್ಲಿರುವ ಮನೆಯೊಂದರಲ್ಲಿ ಮನೆಗೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೇ ಪೊಲೀಸರಿಗೆ ದೂರು ನೀಡಿದ್ದಾರೆ.

ಏಪ್ರಿಲ್ 29 ರಂದು ಮಹಿಳೆ 17 ವರ್ಷದ ಬಾಲಕನಿಗೆ ಮುತ್ತಿಡುವುದನ್ನು ಮನೆಯ ವ್ಯವಸ್ಥಾಪಕರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕ ಮತ್ತು ಅವನ ತಾಯಿ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಷಯ ತಿಳಿದ ತಕ್ಷಣ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ವಿರುದ್ಧ ಪೋಕ್ಸೊ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮನೆಯ ವ್ಯವಸ್ಥಾಪಕರು ನನಗೆ ಫೋನ್ ಮಾಡಿ ಈ ವಿಷಯ ತಿಳಿಸಿದರು. ಈ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದಾಗ, ಆ ಹುಡುಗ ತನ್ನ ತಮ್ಮನಂತೆ ಮತ್ತು ಪ್ರೀತಿಯಿಂದ ಮುತ್ತಿಟ್ಟಿದ್ದೇನೆ ಎಂದು ಹೇಳಿದ್ದಾಳೆ ಎಂದು 17ವರ್ಷದ ಬಾಲಕನ ತಾಯಿ ಹೇಳಿದ್ದಾರೆ. ಇನ್ನು ಮುಂದೆ ಇಂತಹ ವರ್ತನೆ ತೋರಿಸಬಾರದು ಎಂದು ಆಕೆಗೆ ಹೇಳಿದ್ದೇನೆ. ನನ್ನ ಮಗನನ್ನು ಈ ಬಗ್ಗೆ ಕೇಳಿದಾಗ ಅವನು ಗಳಗಳನೇ ಕಣ್ಣೀರಿಟ್ಟನು. ಆಗ ಆ ಮಹಿಳೆ ಹಲವು ಬಾರಿ ತನ್ನನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದಾಳೆ. ಹಲವು ಬಾರಿ ನನ್ನ ಮೇಲೆ ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸಿದ್ದಾಳೆ ಎಂದು ನನ್ನ ಮಗ ಹೇಳಿದ್ದಾನೆಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. 

ಮಹಿಳೆಯಿಂದ ಬೆದರಿಕೆ: 

ಇತ್ತೀಚೆಗೆ ಈ ಮಹಿಳೆ ತನ್ನನ್ನು ಎರಡು ಬಾರಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದಳು. ಜೊತೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರೂ ಹೇಳಿದರೆ, ನಿನ್ನ ಮೇಲೆ ಕಳ್ಳತನದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದಳು ಎಂದು 17 ವರ್ಷದ ಬಾಲಕ ಹೇಳಿದ್ದಾನೆ. ಆದ್ದರಿಂದ ನಾನು ಈ ವಿಚಾರವನ್ನು ಯಾರ ಬಳಿಯೂ ಹೇಳಲಾಗದೇ ಅವರ ದೌರ್ಜನ್ಯವನ್ನು ಸಹಿಸಿಕೊಂಡಿದ್ದೆ ಎಂದು ಹೇಳಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಮೇ 1 ರಂದು ರಾತ್ರಿ ಬಾಲಕನ ತಾಯಿ ಜೂಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಜೂಬಿಲಿ ಹಿಲ್ಸ್ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತ ಬಾಲಕನನ್ನು ಕೌನ್ಸೆಲಿಂಗ್‌ಗಾಗಿ ಭರೋಸಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಮತ್ತು ಬಾಲಕನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಘಟನೆಗಳು ಹೆಚ್ಚಾಗಿ ವರದಿ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳು ಪ್ರೌಢಶಾಲಾ ಹಂತಕ್ಕೆ ಬರುವ ವೇಳೆಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಇದಕ್ಕೆ ಮಕ್ಕಳ ಪೋಷಕರೂ ಒಪ್ಪುತ್ತಿಲ್ಲ. ಲೈಂಗಿಕತೆ ಎನ್ನುವುದು ಭಾರತೀಯ ಸಂಸ್ಕೃತಿಗೆ ತುಂಬಾ ಸೂಕ್ಮ ವಿಚಾರವಾಗಿದ್ದು, ಅದನ್ನು ಗೌಪ್ಯವಾಗಿಯೇ ಮಕ್ಕಳಿಗೆ ಮನೆಯಲ್ಲಿ ಪೋಷಕರು ಕಲಿಸಬೇಕು ಎಂದು ಹೇಳಲಾಗುತ್ತಿದೆ. ಇದರ ನಡುವೆಯೂ ಮಕ್ಕಳು ಹಲವು ಘಟನೆಗಳಲ್ಲಿ ಲೌಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ.