ಕಪ್ಪು ಕೋಟಿನ ಕಾರಣ ನಿಮ್ ಜೀವಕ್ಕೆ ಹೆಚ್ಚಿನ ಬೆಲೆ ಅಂದ್ಕೊಬೇಡಿ; ವಕೀಲನ ವಿರುದ್ಧ ಸುಪ್ರೀಂ ಕೋರ್ಟ್ ಗರಂ!
- ಕೊರೋನಾ ಪರಿಹಾರ ಕೇಳಿ PIL ಸಲ್ಲಿಸಿದ್ದ ವಕೀಲನ ವಿರುದ್ಧ ಕೋರ್ಟ್ ಗರಂ
- ಕಪ್ಪು ಕೋಟು ಇದೆ ಎಂದು ಏನು ಬೇಕಾದರೂ ನಡೆಯುತ್ತೆ ಅಂದುಕೊಂಡರೆ ತಪ್ಪು
- ವಕೀಲನಿಗೆ ದಂಡ ಹಾಕಿದ ಸುಪ್ರೀಂ ಕೋರ್ಟ್
ನವದೆಹಲಿ(ಸೆ.14): ಕೊರೋನಾ ವೈರಸ್ ಕಾರಣ ಮೃತಪಟ್ಟ ಬಿಪಿಎಲ್ ಕಾರ್ಡ್ ದಾರರು, ನಿರ್ಗತಿಕರು, ಬಡವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಪರಿಹಾರ ಯೋಜನೆಗಳನ್ನು ಜಾರಿ ಮಾಡಿದೆ. ಕೋವಿಡ್‌ನಿಂದ ಮೃತಪಟ್ಟ ವಕೀಲರಿಗೂ ಪರಿಹಾರ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಸಲ್ಲಿಸಿದ್ದ ವಕೀಲನಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಸುಪ್ರೀಂ ಕೋರ್ಟ್ ಜಡ್ಜ್‌ಗಿಂತ ವಕೀಲರ ಆದಾಯವೇ ಹೆಚ್ಚು!
ವಕೀಲ ಪ್ರದೀಪ್ ಕುಮಾರ್ ಯಾದವ್ ಸುಪ್ರೀಂ ಕೋರ್ಟ್‌ಗೆ ವಕೀಲರಿಗೆ ಕೋವಿಡ್ ಪರಿಹಾರ ನೀಡುವಂತೆ PIL ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ವಕೀಲರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ತನ್ನ ಕುಟುಂಬದಲ್ಲಿನ 60 ವರ್ಷದ ವಕೀಲರೊಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದರು. ಈ ಕುರಿತು PIL ಸಲ್ಲಿಕೆ ಮಾಡಲಾಗಿತ್ತು.
ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ವಕೀಲನ ವಿರುದ್ಧ ಗರಂ ಆಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರಚಾರ ಹಿತಾಸಕ್ತಿ ಅರ್ಜಿಯನ್ನಾಗಿ ಮಾಡಬೇಡಿ. ನೀವು ಕಪ್ಪು ಕೋಟು ಹಾಕಿದ್ದೀರಿ ಎಂದ ಮಾತ್ರಕ್ಕೆ ಇತರರಿಗಿಂತ ನಿಮ್ಮ ಜೀವಕ್ಕೆ ಹೆಚ್ಚಿನ ಬೆಲೆ ಇದೆ ಎಂದು ಅಂದುಕೊಳ್ಳಬೇಡಿ. ಹಲವರು ಕೊರೋನಾದಿಂದ ಮೃತಪಟ್ಟಿದ್ದಾರೆ. ಏನೂ ಬೇಕಾದರೂ ವಾದಿಸಬಹುದು ಅಂದುಕೊಳ್ಳಬೇಡಿ. ವಕೀಲ ಎಂದ ಮಾತ್ರಕ್ಕೆ ವಿನಾಯಿತಿ ನೀಡಲು ಸಾಧ್ಯವಿಲ್ಲ. 10,000 ರೂಪಾಯಿ ದಂಡ ಕಟ್ಟಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲರು ‘ಕೀಳು’ ಪದ ಬಳಸಿದರೆ ಸಸ್ಪೆಂಡ್: ಹೊಸ ನಿಯಮ ಜಾರಿ!
ಜಸ್ಟೀಸ್ ಧನಂಜಯ್ ವೈ ಚಂದ್ರಚೂಡ್, ಜಸ್ಟೀಸ್ ವಿಕ್ರಮ್ ನಾಥ್ ಹಾಗೂ ಜಸ್ಟೀಸ್ ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ. ಇಷ್ಟೇ ಅಲ್ಲ ಈ ರೀತಿಯ ಬೋಗಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯನ್ನು ನಿಲ್ಲಿಸುವಂತೆ ವಕೀಲರ ಬಾರ್ ಕೌನ್ಸಿಲ್‌ಗೆ ಸೂಚನೆ ನೀಡಿದೆ.
ಜೂನ್ 30 ಸುಪ್ರೀಂ ಕೋರ್ಟ್ ಕೋವಿಡ್‌ನಿಂದ ಮೃತಪಟ್ಟವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ನೀಡಬೇಕು ಎಂದು ಸೂಚಿಸಿತ್ತು. ಈ ತೀರ್ಪಿನ ಆಧಾರದರಲ್ಲಿ ವಕೀಲ ಪ್ರದೀಪ್ ಕುಮಾರ್, ತನ್ನ ಕುಟುಂಬದ ವಕೀಲ ಸದಸ್ಯ ನಿಧನವನ್ನು ಮುಂದಿಟ್ಟುಕೊಂಡು ಪರಿಹಾರ ನೀಡುವಂತೆ PIL ಸಲ್ಲಿಕೆ ಮಾಡಿದ್ದರು.