ಖುಷ್ಭೂ ಸುಂದರ್ ಹಳೇ ಪಾತ್ರೆ ಎಂದಿದ್ದ ಡಿಎಂಕೆ ವಕ್ತಾರ ಪಕ್ಷದಿಂದ ವಜಾ
ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಭೂ ಸುಂದರ್‌ರನ್ನು ಹಳೇ ಪಾತ್ರೆ ಎಂದಿದ್ದ ಡಿಎಂಕೆ ಪಕ್ಷದ ವಕ್ತಾರ ಶಿವಾಜಿ ಕೃಷ್ಣಮೂರ್ತಿಯನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಶಿವಾಜಿ ಕೃಷ್ಣಮೂರ್ತಿ ಹೇಳಿದ್ದ 'ಸೆಕ್ಸಿಸ್ಟ್' ಹೇಳಿಕೆಗೆ ಖುಷ್ಭೂ ಸುಂದರ್ ಸುದ್ದಿಗೋಷ್ಠಿಯಲ್ಲಿಯೇ ಕಣ್ಣೀರಿಟ್ಟಿದ್ದರು.
ಚೆನ್ನೈ (ಜೂ.18): ಖುಷ್ಭೂ ಸುಂದರ್ ಹಳೇ ಪಾತ್ರೆ ಎಂದು ಹೇಳುವ ಮೂಲಕ ವಿವಾದ ಎಬ್ಬಿಸಿದ್ದ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆಯ ವಕ್ತಾರ ಶಿವಾಜಿ ಕೃಷ್ಣಮೂರ್ತಿಯನ್ನು ಪಕ್ಷದಿಂದ ವಜಾ ಮಾಡಲಾಗಿದೆ. ತಮ್ಮ ಶಿವಾಜಿ ಕೃಷ್ಣಮೂರ್ತಿಯ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ನಟಿ ಖುಷ್ಭೂ ಸುಂದರ್, ಈ ವಿಚಾರವನ್ನು ಸುಮ್ಮನೆ ಬಿಡೋದಿಲ್ಲ. ನಿಮಗೆ ನೋವಾಗಿದೆ ಎಂದು ಅನಿಸಬೇಕು ಅಲ್ಲಿಯವರೆಗೆ ಇದನ್ನು ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಲ್ಲದೆ, ಸುದ್ದಿಗೋಷ್ಠಿಯಲ್ಲಿಯೇ ಕಣ್ಣೀರಿಟ್ಟಿದ್ದರು. ಅದಲ್ಲದೆ ಶಿವಾಜಿ ಕೃಷ್ಣಮೂರ್ತಿ ಆಡಿರುವ ಕ್ರೂರ ಮಾತುಗಳನ್ನು ರಾಷ್ಟ್ರೀಯ ಮಹಿಳಾ ಆಯೋಗದ ಮುಂದಿಡಲಿದ್ದೇನೆ ಎಂದೂ ಹೇಳಿದ್ದರು. ಈ ಆಯೋಗದಲ್ಲಿ ಸ್ವತಃ ಖುಷ್ಭೂ ಸದಸ್ಯರೂ ಆಗಿದ್ದಾರೆ. ವಿಚಾರ ದೊಡ್ಡದಾಗುವುದನ್ನು ಅರಿತ ಡಿಎಂಕೆ ಪಕ್ಷ, ಭಾನುವಾರ ಸಂಜೆಯ ವೇಳೆಗೆ ಶಿವಾಜಿ ಕೃಷ್ಣಮೂರ್ತಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. ‘ಪಕ್ಷದ ಶಿಸ್ತು ಉಲ್ಲಂಘಿಸಿ ಅಪಖ್ಯಾತಿ ತಂದಿದ್ದಕ್ಕಾಗಿ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ವಜಾಗೊಳಿಸಲಾಗುತ್ತಿದೆ’ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಘೋಷಿಸಿದ್ದಾರೆ.
ಶಿವಾಜಿ ಕೃಷ್ಣಮೂರ್ತಿ ಆಡಿದ ಮಾತಿನ ಬಗ್ಗೆ ಟ್ವೀಟ್ ಮಾಡಿದ ಗಂಟೆಗಳ ನಂತರ ಪತ್ರಿಕಾಗೋಷ್ಠಿಯಲ್ಲಿ, ಖುಷ್ಭೂ ಸುಂದರ್ ಕಣ್ಣೀರಿಡುತ್ತಲೇ, ಭಾವುಕವಾಗಿ ಮಾತನಾಡಿದರು. ಈಗಾಗಲೇ ತಮಿಳುನಾಡು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿರುವುದಾಗಿಗೂ ತಿಳಿಸಿದ್ದಾರೆ. ಇದಕ್ಕೂ ಮೊದಲು, ಅವರು ತಮ್ಮ ಟ್ವಿಟರ್ ಪುಟದಲ್ಲಿ ಕೃಷ್ಣಮೂರ್ತಿ ಅವರ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು. "ಈತನ ಕ್ರೂರ ಕಾಮೆಂಟ್‌ಗಳು ಡಿಎಂಕೆಯಲ್ಲಿ ಪ್ರಚಲಿತದಲ್ಲಿರುವ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ" ಎಂದು ಹೇಳಿದರು. ಡಿಎಂಕೆಯಲ್ಲಿ ಇವರಂತೆ ಇನ್ನೂ ಅನೇಕ ಮಹಿಳಾ ನಿಂದಕರಿದ್ದಾರೆ. ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡುವುದು ಡಿಎಂಕೆಯಲ್ಲಿ ಅವ್ಯಾಹತವಾಗಿದೆ. ಬಹುಶಃ ಇಂಥ ಕಾಮೆಂಟ್‌ಗಳನ್ನು ಮಾಡುವವರಿಗೆ ಡಿಎಂಕೆ ಕೂಡ ಪ್ರೋತ್ಸಾಹ ನೀಡುತ್ತದೆ' ಎಂದು ಬರೆದಿದ್ದಾರೆ.
ಈ ಕುರಿತಾಗಿ ನಾನು ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗದೊಂದಿಗೆ ಮಾತನಾಡಿದ್ದೇನೆ. ಅವರು ಬೆಂಬಲ ನೀಡಿದ್ದಾರೆ. ಇದು ಬಿಜೆಪಿ ನಾಯಕಿ ಎನ್ನುವ ವಿಚಾರವಾಗಿ ಅಲ್ಲ, ಮಹಿಳೆಯನ್ನು ಅವಮಾನ ಮಾಡಿದ ವಿಚಾರ ಎಂದು ಖುಷ್ಭೂ ಸುಂದರ್ ಹೇಳಿದ್ದಾರೆ. ಅದಲ್ಲದೆ, ತಮ್ಮ ಟ್ವೀಟ್‌ನಲ್ಲಿ ಸಿಎಂ ಸ್ಟ್ಯಾಲಿನ್‌ಗೂ ಟ್ಯಾಗ್ ಮಾಡಿರುವ ಖುಷ್ಭೂ, ಹಾಗೇನಾದರೂ ನಿಮ್ಮ ಮನೆಯ ಮಹಿಳೆಯರಿಗೆ ಈ ರೀತಿಯ ಮಾತನ್ನು ಆಡಿದ್ದರೆ ಸುಮ್ಮನಿರುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ನಡುವೆ ಖುಷ್ಭೂ ಸುಂದರ್ ವಿರುದ್ಧ ಡಿಎಂಕೆ ನಾಯಕ ಹೇಳಿರುವ ಅಶ್ಲೀಲ ಮಾತುಗಳಿಗೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಅದಲ್ಲದೆ, ತಮಿಳುನಾಡಿ ಪೊಲೀಸ್‌ಗೆ ಈ ಕುರಿತಾಗಿ ಅಧಿಕೃತ ದೂರು ಕೂಡ ದಾಖಲು ಮಾಡಿದೆ.
ಮಗಳು ಮಾಡಿದ ಕೆಲಸಕ್ಕೆ ನಟಿ ಖುಷ್ಬೂಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!
ಏನಿದು ಘಟನೆ: ಡಿಎಂಕೆ ಮಾಜಿ ನಾಯಕ ಖುಷ್ಬು ಸುಂದರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಾಜಿ ಕೃಷ್ಣಮೂರ್ತಿ ಅವರು ಖುಷ್ಬೂ ಸುಂದರ್ ಅವರಿಗೆ ಹಳೆಯ ಪಾತ್ರೆ ಎಂದು ಕರೆದಿದ್ದಾರೆ. ಈ ಹಿಂದೆ ರಾಜ್ಯಪಾಲರ ವಿರುದ್ಧವೂ ಕೃಷ್ಣಮೂರ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಖುಷ್ಬು ಸುಂದರ್ ವಿರುದ್ಧ ಮಾಡಿರುವ ಟೀಕೆ ಸಂಪೂರ್ಣ ಖಂಡನೀಯ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಮಗಳನ್ನು ಸರಿಯಾಗಿ ಬೆಳೆಸೋಕ್ಕೆ ಆಗಲ್ವಾ? ಖುಷ್ಬೂ ಪುತ್ರಿಯ ಹಾಟ್ ಅವತಾರಕ್ಕೆ ನೆಟ್ಟಿಗರ ತರಾಟೆ