ಕಾರು ಅಪಘಾತದಲ್ಲಿ ತಮಿಳುನಾಡು ಸಂಸದರ ಪುತ್ರ ಸಾವು ಸಂಸದರ ಪುತ್ರ ರಾಕೇಶ್ ಸಾವು, ಸ್ನೇಹಿತನಿಗೆ ಗಂಭೀರ ಗಾಯ ಪುದುಚೇರಿಗೆ ತೆರಳುತ್ತಿದ್ದಾಗ ದುರಂತ

ಭೀಕರ ಅಪಘಾತವೊಂದರಲ್ಲಿ ತಮಿಳುನಾಡಿನ ಸಂಸದರೊಬ್ಬರ ಪುತ್ರ ದಾರುಣವಾಗಿ ಸಾವನ್ನಪ್ಪಿದ್ದಾನೆ. ತಮಿಳುನಾಡಿನ ಡಿಎಂಕೆ ಸಂಸದ(DMK MP) ಎನ್‌ಆರ್ ಎಲಂಗೋ (NR Elango) ಅವರ ಪುತ್ರ ರಾಕೇಶ್ (Rakesh) ಸಾವನ್ನಪ್ಪಿದ ಯುವಕ. ರಾಕೇಶ್ ಸ್ಥಳದಲ್ಲೇ ಮೃತಪಟ್ಟರೆ, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಡಿಎಂಕೆ ರಾಜ್ಯಸಭಾ ಸಂಸದ ಎನ್.ಆರ್. ಇಲಾಂಗೋ ಅವರ ಪುತ್ರ ಇಂದು (ಮಾರ್ಚ್ 10) ಮುಂಜಾನೆ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. 22 ವರ್ಷದ ರಾಕೇಶ್ ಅವರು ಸ್ನೇಹಿತನೊಂದಿಗೆ ಪುದುಚೇರಿಗೆ (Puducherry) ತೆರಳುತ್ತಿದ್ದರು. ಈಸ್ಟ್ ಕೋಸ್ಟ್ ರಸ್ತೆಯಲ್ಲಿ ( East Coast Road) (ಇಸಿಆರ್) ಪ್ರಯಾಣಿಸುತ್ತಿದ್ದಾಗ ಚೆನ್ನೈ ಕೊಟ್ಟಕುಪ್ಪಂ (Kottakuppam)ಬಳಿಯ ಕೀಲ್‌ಪುತುಪೇಟೆಯಲ್ಲಿ (Keelputhupet) ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.


ವಿಲ್ಲುಪುರಂ(Villupuram) ಜಿಲ್ಲೆಯ ಪುತ್ತುವಾಯಿ ((Puthuvai)) ಬಳಿ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ರಾಕೇಶ್ ಮತ್ತು ಅವನ ಸ್ನೇಹಿತ ಪುದುಚೇರಿಗೆ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನವು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ವರದಿಯಾಗಿದೆ. ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸ್ನೇಹಿತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳೀಯರು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ವಾಹನವನ್ನು ಕತ್ತರಿಸಿ ಶವವನ್ನು ಹೊರತೆಗೆದರು. ರಾಕೇಶ್ ಅವರ ಸ್ನೇಹಿತನನ್ನು ಪುದುಚೇರಿ ಸಮೀಪದ ಕಂಗಾಚೆಟ್ಟಿಕುಲಂನಲ್ಲಿರುವ (Kangachettikulam) ಪಾಂಡಿಚೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಪಿಮ್ಸ್)ಗೆ (Pondicherry Institute of Medical Sciences) ದಾಖಲಿಸಲಾಗಿದೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಹೊಸೂರು ಡಿಎಂಕೆ ಶಾಸಕ ಪ್ರಕಾಶ್ ವೈ ಅವರ ಪುತ್ರ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದರು. ಐಷಾರಾಮಿ ಆಡಿ ಕಾರಿನಲ್ಲಿ ಜಾಲಿ ರೈಡ್‌ ನಡೆಸುವಾಗ ಅಪಘಾತ ಸಂಭವಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಶಾಸಕರ ಪುತ್ರ ಸೇರಿದಂತೆ 7 ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಅವರೆಲ್ಲರೂ 20 ರಿಂದ 30 ವರ್ಷದೊಳಗಿನವರಾಗಿದ್ದು, ಕಾರಿನಲ್ಲಿ ಮುಂದೆ ಮೂವರು ಮತ್ತು ಹಿಂದಿನ ಸೀಟಿನಲ್ಲಿ ನಾಲ್ವರು ಕುಳಿತಿದ್ದರು ಎಂದು ಪೊಲೀಸರು ನಂತರ ತಿಳಿಸಿದ್ದರು.

ಬೆಂಗಳೂರಿಗೆ ಸಮೀಪದಲ್ಲಿರುವ ಕೃಷ್ಣಗಿರಿ ಜಿಲ್ಲೆಯ ಹೊಸೂರು ಶಾಸಕ ವೈ.ಪ್ರಕಾಶ್‌ ಅವರ ಏಕೈಕ ಪುತ್ರ ಕರುಣಾ ಸಾಗರ್‌ (25), ಕೋರಮಂಗಲದ 5ನೇ ಬ್ಲಾಕ್‌ ನಿವಾಸಿ ಮಹಾರಾಷ್ಟ್ರ ಮೂಲದ ಇಷಿತಾ ಬಿಸ್ವಾಸ್‌ (21), ಕೋರಮಂಗಲದ ನಿವಾಸಿ ಕೇರಳ ಮೂಲದ ದಂತ ವೈದ್ಯೆ ಧನುಷಾ (29), ಮುರುಗೇಶ್‌ ಪಾಳ್ಯದ ಬಿಂದು (28), ಕೋರಮಂಗಲದ ನಿವಾಸಿ ಕೇರಳ ಮೂಲದ ಖಾಸಗಿ ಕಂಪನಿ ಉದ್ಯೋಗಿ ಅಕ್ಷಯ್‌ ಗೋಯಲ್‌ (25), ಹರಿಯಾಣದ ಆಡಿಟರ್‌ ಉತ್ಸವ್‌ (25) ಹಾಗೂ ಹುಬ್ಬಳ್ಳಿಯ ರೋಹಿತ್‌ (23) ಮೃತ ದುರ್ದೈವಿಗಳು.

ಈ ಅಪಘಾತದ ತನಿಖೆ ವೇಳೆ ಅನೇಕ ವಿಚಾರಗಳು ಹೊರ ಬಿದ್ದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೂ ಮುನ್ನ ಮೃತ ಬಿಂದು ವಾಸವಿದ್ದ ಪಿಜಿಯಲ್ಲಿ ಎಣ್ಣೆ ಪಾರ್ಟಿ ನಡೆದಿದೆ. ರಾತ್ರಿ 1.45 ರ ಸುಮಾರಿಗೆ ಪಿಜಿಯಿಂದ ಸ್ನೇಹಿತರೆಲ್ಲರೂ ಹೊರ ಬರುತ್ತಾರೆ. ಬಳಿಕ ಸಾಗರ್ ಸ್ನೇಹಿತರನ್ನು ಭೇಟಿಯಾಗುತ್ತಾನೆ. ಆ ನಂತರ ಕೋರಮಂಗಲ ರಸ್ತೆಯಲ್ಲಿ ಜಾಲಿ ರೈಡ್ ಹೋಗುತ್ತಾರೆ. ಆ ನಂತರ ದುರ್ಘಟನೆ ಸಂಭವಿಸಿದೆ.