ಭಾರತದ ನಕ್ಷೆ ಎಡವಟ್ಟು: ಟ್ವಿಟರ್ ಇಂಡಿಯಾ MD ಮನೀಷ್ ಮಹೇಶ್ವರಿಗೆ ಸಂಕಷ್ಟ!
* ಜಮ್ಮು-ಕಾಶ್ಮೀರ, ಲಡಾಖ್ ಭಾರತದಲ್ಲಿಲ್ಲ: ಟ್ವೀಟರ್ ಎಡವಟ್ಟು
* ಮನೀಷ್ ಮಹೇಶ್ವರಿಗೆ ಸಂಕಷ್ಟ, FIR ದಾಖಲು
* ಪ್ರತ್ಯೇಕ ಪ್ರದೇಶಗಳು ಎಂದು ನಕ್ಷೆಯಲ್ಲಿ ಪ್ರದರ್ಶನ
* ಚುಟುಕು ತಾಣದಿಂದ ಮತ್ತೆ ದೇಶ ವಿರೋಧಿ ಕೆಲಸ
ನವದೆಹಲಿ(ಜೂ.29): ಮೊದಲು ಸೋಶಿಯಲ್ ಮೀಡಿಯಾ ಮಾರ್ಗಸೂಚಿ ವಿಚಾರವಾಗಿ ಸರ್ಕಾರಕ್ಕೆ ಸವಾಲೆಸೆದ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುಸ್ಲಿಂ ವೃದ್ಧನ ನಕಲಿ ವಿಡಿಯೋ ವೈರಲ್ ಮಾಡಿ, ಈಗ ಭಾರತದ ನಕ್ಷೆಯನ್ನು ತಿರುಚಿ ಪೋಸ್ಟ್ ಮಾಡಿರುವುದು Twitter Indiaಗೆ ಸಂಕಷ್ಟ ತಂದೊಡ್ಡಿದೆ. ಭಾರತ ನಕ್ಷೆಯಲ್ಲಿ ಎಡವಟ್ಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮನೀಷ್ ಮಹೆಶ್ವರಿ ವಿರುದ್ಧ ಉತ್ತರ ಪ್ರದೇಶದ ಬುಲಂದರ್‌ಶಹರ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಬಜರಂಗ ದಳದ ಓರ್ವ ನಾಯಕ ನೀಡಿದ ದೂರಿನಡಿ ಪೊಲೀಸರು ಮಹೇಶ್ವರಿ ವಿರುದ್ಧ ಸೆಕ್ಷನ್ 205(2) ಹಾಗೂ 2008ರ ಐಟಿ(ತಿದ್ದುಪಡಿ) ಕಾನೂನಿನ ಸೆಕ್ಷನ್ 74ರಡಿ ಕೆಸ್ ದಾಖಲಿಸಿದ್ದಾರೆ. ಮಹೆಶ್ವರಿ ಲೋನಿ ಪ್ರಕರಣದಲ್ಲಿ ಈಗಾಗಲೇ ಪೊಲಿಸರ ತನಿಖೆಯನ್ನೆದುರಿಸುತ್ತಿದ್ದಾರೆ.
ಕೇಂದ್ರದಿಂದ ಕ್ರಮ:
ಪದೇ ಪದೇ ಇಂಥದ್ದೇ ಎಡವಟ್ಟು ಮಾಡುತ್ತಿರುವ ಟ್ವೀಟರ್‌ನ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ಐಟಿ ಕಾಯ್ದೆ ಜಾರಿಗೊಳಿಸದ ಕಾರಣ, ಭಾರತದಲ್ಲಿ ಸಂಸ್ಥೆಯ ಅಧಿಕಾರಿಗಳು ತನಿಖೆಗೆ ಒಳಪಡಬೇಕಾದ ವಿಷಯದಿಂದ ವಿನಾಯ್ತಿಯನ್ನೂ ಕಳೆದುಕೊಂಡಿರುವ ಕಾರಣ, ಈ ಘಟನೆ ಭಾರತದಲ್ಲಿನ ಟ್ವೀಟರ್‌ನ ಹಿರಿಯ ಅಧಿಕಾರಿಗಳಿಗೆ ಮುಂದಿನ ದಿನದಲ್ಲಿ ದೊಡ್ಡ ಕಂಟಕವಾಗುವ ಸಾಧ್ಯತೆ ಇದೆ.
ಭಾರತೀಯರ ಕೆರಳಿಸಿದ ಟ್ವಿಟರ್; ಇಂಡಿಯಾ ಮ್ಯಾಪ್‌ನಿಂದ ಜಮ್ಮು ಕಾಶ್ಮೀರ, ಲಡಾಖ್ ಮಾಯ!
ಏನಿದು ಪ್ರಕರಣ?:
ಟ್ವೀಟರ್ ವೆಬ್‌ಸೈಟ್‌ನಲ್ಲಿ ‘ಟ್ವೀಪ್ ಲೈಫ್’ ಎಂಬ ತಲೆಬರಹ ಹೊಂದಿರುವ ವಿಭಾಗವೊಂದರಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ದೇಶವೆಂದು ತೋರಿಸಲಾಗಿದೆ. ಟ್ವೀಟರ್ ಬಳಕೆದಾರರೊಬ್ಬರು ಈ ಲೋಪವನ್ನು ಬಯಲಿಗೆಳೆದ ಬೆನ್ನಲ್ಲೇ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದು ಮೊದಲಲ್ಲ:
ಈ ಹಿಂದೆ ಕೂಡಾ ಒಮ್ಮೆ ಲೇಹ್ ಅನ್ನು ಚೀನಾದ ಭಾಗವೆಂದು ತೋರಿಸುವ ಭೂಪಟವನ್ನು ಟ್ವೀಟರ್ ಪ್ರದರ್ಶಿಸಿತ್ತು. ಈ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ಬಳಿಕ ಅದು ಕ್ಷಮೆ ಕೋರಿತ್ತು. ಅದರ ಬೆನ್ನಲ್ಲೇ ಇದೀಗ ಇಡೀ ಕಣಿವೆ ರಾಜ್ಯವನ್ನೇ ಪ್ರತ್ಯೇಕ ದೇಶವೆಂದು ತೋರಿಸುವ ಮೂಲಕ ಟ್ವೀಟರ್ ಎಡವಟ್ಟು ಮಾಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಟ್ವೀಟರ್‌ಗೆ ನೋಟಿಸ್ ಜಾರಿ ಮಾಡುವುದರ ಜೊತೆಗೆ ಅದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.