Congress vs CPI ವಿರೋಧದ ನಡುವೆ CPI(M) ಸೆಮಿನಾರ್ ಹಾಜರಾಗಲು ಶಶಿ ತರೂರ್ ಸ್ಪಷ್ಟನೆ, ಕಾಂಗ್ರೆಸ್‌ನಲ್ಲಿ ಜಟಾಪಟಿ!
- ಸತತ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ಗೆ ಮತ್ತೊಂದು ತಲೆನೋವು
- ಶಶಿ ತರೂರ್‌ಗೆ ಕೇರಳ ಆಡಳಿತ ಪಕ್ಷ ಸಿಪಿಐ(ಎಂ) ಸೆಮಿನಾರ್‌ಗೆ ಆಹ್ವಾನ
- ಆಹ್ವಾನ ಸ್ವೀಕರಿಸಿದ ತರೂರ್ ವಿರುದ್ಧ ಕಾಂಗ್ರೆಸ್ ಕೆಂಡ, ಜಟಾಪಟಿ ಆರಂಭ
ಕೇರಳ(ಮಾ.21): ಪಂಚ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಪ್ರತಿ ದಿನ ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗಾಲೇ ಬಂಡಾಯ ನಾಯಕರ ಬಿಕ್ಕಟ್ಟು ಒಂದೆಡೆಯಾದರೆ ಇದೀಗ ಹಿರಿಯ ನಾಯಕ ಶಶಿ ತರೂರ್ ಕಾಂಗ್ರೆಸ್‌ಗೆ ಮತ್ತೊಂದು ತಲೆನೋವು ತಂದಿಟ್ಟಿದ್ದಾರೆ. ಕೇರಳ ಆಡಳಿತ ಪಕ್ಷ ಸಿಪಿಐ(ಎಂ) ಆಯೋಜಿಸಿದ ಸೆಮಿನಾರ್‌ಗೆ ಕಾಂಗ್ರೆಸ್‌ನ ಮೂವರು ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನು ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಇದು ಕೇರಳ ಕಾಂಗ್ರೆಸ್ ಸೇರಿದಂತೆ ಕೇಂದ್ರ ಕಾಂಗ್ರೆಸ್‌ನಲ್ಲಿ ಜಟಾಪಟಿಗೆ ಕಾರಣವಾಗಿದೆ.
ಶಶಿ ತರೂರ್, ಕೆವಿ ಥಾಮಸ್ ಹಾಗೂ ಮಣಿಶಂಕರ್ ಅಯ್ಯರ್‌ಗೆ ಸಿಎಂಐ ಪಕ್ಷದ ಸೆಮಿನಾರ್‌ಗೆ ಆಹ್ವಾನಿಸಲಾಗಿದೆ. ಕೇರಳದಲ್ಲಿ ಆಡಳಿತದಲ್ಲಿರುವ ಸಿಪಿಐ ಪಕ್ಷದ ವಿರುದ್ಧ ಕಾಂಗ್ರೆಸ್ ಸತತ ಹೋರಾಟ, ಪ್ರತಿಭಟನೆ ಮಾಡುತ್ತಿದೆ. ಇದೀಗ ಭ್ರಷ್ಟಾಚಾರ ಆರೋಪ ಮಾಡಿರುವ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ಸಿಪಿಐ ಪಕ್ಷದ ಸೆಮಿನಾರ್‌ಗೆ ಹಾಜರಾಗುವುದು ಸೂಕ್ತವಲ್ಲ. ಪಂಚ ರಾಜ್ಯಗಳ ಚುನಾವಣೆಗಳ ಸೋಲು, ಬಂಡಾಯಗಳಿಂದ ಪಕ್ಷದ ವರ್ಚಸ್ಸಿಗೆ ಅಡ್ಡಿಯಾಗಿದೆ. ಇದರ ನಡುವೆ ಶಶಿ ತರೂರ್ ಸೆಮಿನಾರ್‌ಗೆ ಹಾಜರಾಗುವುದು ಸೂಕ್ತವಲ್ಲ ಎಂದು ಕೇರಳ ಕಾಂಗ್ರೆಸ್ ಶಶಿ ತರೂರ್‌ಗೆ ಸೂಚನೆ ನೀಡಿದೆ.
G-23 Meet ಬಂಡಾಯ ನಾಯಕರ ಸಭೆಗೆ ಶಶಿ ತರೂರ್ ಹಾಜರ್, ಕಾಂಗ್ರೆಸ್‌ನಲ್ಲಿ ತಳಮಳ!
ಇತ್ತ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಿರುವ ಶಿಶಿ ತರೂರ್ ಸೆಮಿನಾರ್ ಹಾಜರಾಗಲು ಅನುಮತಿ ಕೋರಿದ್ದಾರೆ. ಈ ಕುರಿತು ಸೋನಿಯಾ ಗಾಂಧಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಕೇರಳ ಸಂಸದರ ಜೊತೆ ದೆಹಲಿಯಲ್ಲಿ ಸಭೆ ನಡೆಸಿದ ಸೋನಿಯಾ ಗಾಂಧಿ ತರೂರ್ ನಡೆ ಹಾಗೂ ಸೆಮಿನಾರ್ ಕುರಿತ ಮಾಹಿತಿ ಚರ್ಚಿಸಿದ್ದಾರೆ. ಕೇರಳ ಕಾಂಗ್ರೆಸ್ ಪ್ರಬಲ ವಿರೋಧದ ನಡುವೆ ತರೂರ್ ಸೆಮಿನಾರ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.
ಸೆಮಿನಾರ್ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿಲ್ಲ. ಈ ಸೆಮಿನಾರ್ ರಾಜ್ಯ ಹಾಗೂ ರಾಷ್ಟ್ರದ ನೀತಿಗಳ ಕುರಿತಾಗಿದೆ. ಕೇರಳ ಯಾವುದೇ ಸೂಕ್ಷ್ಮ ವಿಚಾರಗಳ ಕುರಿತು ಈ ಸೆಮಿನಾರ್‌ನಲ್ಲಿ ಚರ್ಚೆ ಮಾಡುತ್ತಿಲ್ಲ. ಕೇಂದ್ರದ ಅದರಲ್ಲೂ ಬಿಜೆಪಿ ನೀತಿಗಳ ವಿರುದ್ಧ ಹಾಗೂ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಸೆಮಿನಾರ್ ಆಯೋಜಿಸಲಾಗಿದೆ. ಈ ಆಧಾರದಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದೇನೆ. ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತನನಾಡಿದ್ದೇನೆ. ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಶಶಿ ತರೂರ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಜಿ23 ನಾಯಕರ ಸಭೆ, ವಿಭಜನೆ ಆಗುತ್ತಾ ಕಾಂಗ್ರೆಸ್?
ಸಿಪಿಐ(ಎಂ) ಪಕ್ಷದ ಸೆಮಿನಾರ್‌ನಲ್ಲಿ ಪಾಲ್ಗೊಳ್ಳಲು ಶಶಿ ತರೂರ್ ಹಲವು ಕಾರಣಗಳನ್ನು ನೀಡಿದ್ದಾರೆ. ಆದರೆ ತರೂರ್ ಕಾರಣಗಳನ್ನು ಕೇರಳ ಕಾಂಗ್ರೆಸ್ ಸ್ಪಷ್ಟವಾಗಿ ನಿರಾಕರಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸುವ ಕುರಿತು ಎಲ್ಲರೂ ಚಿಂತಿಸಬೇಕಿದೆ. ಇದರ ನಡುವೆ ಕೇರಳದಲ್ಲಿ ಪ್ರಬಲ ಎದುರಾಳಿ ಪಕ್ಷದ ಜೊತೆ ಕೈ ಜೋಡಿಸಿದರೆ ನಮ್ಮ ಹೋರಾಟಗಳು ವ್ಯರ್ಥವಾಗಲಿದೆ. ಇದರಿಂದ ಕೆಟ್ಟ ಸಂದೇಶ ರವಾನೆಯಾಗಲಿದೆ. ಈ ರೀತಿ ದ್ವಂದ್ವ ನಿಲುಗಳೇ ಕಾಂಗ್ರೆಸ್‌ಗೆ ಮುಳುವಾಗಲಿದೆ ಎಂದು ಕೇರಳ ಕಾಂಗ್ರೆಸ್ ತರೂರ್‌ಗೆ ತಿರುಗೇಟು ನೀಡಿದೆ.
ಶಶಿ ತರೂರ್ ನಡೆಯಿಂದ ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈಗಾಗಲೇ ಬಂಡಾಯ ನಾಯಕರ ಜೊತೆ ಕಾಣಿಸಿಕೊಂಡಿರುವ ಶಶಿ ತರೂರ್ ಮನವಿಯನ್ನು ಅತ್ತ ತಳ್ಳಿ ಹಾಕಲು ಆಗದೆ ಇತ್ತ ಸ್ವೀಕರಿಸಲು ಆಗದೆ ಚಿಂತೆಯಲ್ಲಿದೆ ಕಾಂಗ್ರೆಸ್.
ಜಿ-23 ನಾಯಕರ ಸಭೆಯಲ್ಲಿ ಸೋನಿಯಾ ಆಪ್ತ ತರೂರ್ ಭಾಗಿ!
ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಗಾಂಧಿ ಕುಟುಂಬ ದೂರ ಇರಬೇಕು ಎಂದು ಆಗ್ರಹಿಸುತ್ತಿರುವ ಪಕ್ಷದ ಜಿ-23 ನಾಯಕರು ಬುಧವಾರ ಮತ್ತೆ ಸಭೆ ನಡೆಸಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಈ ಬಂಡಾಯ ಶಾಸಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಬುಧವಾರ ಸಾಯಂಕಾಲ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ಜಿ-23 ನಾಯಕರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಶಿ ತರೂರ್, ಕಪಿಲ್ ಸಿಬಲ್, ಆನಂದ ಶರ್ಮಾ, ಮನೀಶ್ ತಿವಾರಿ, ಭೂಪೇಂದ್ರ ಹೂಡಾ, ಪೃಥ್ವಿರಾಜ್ ಚೌಹಾಣ್, ಪಿ.ಜೆ.ಕುರಿಯನ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.ಗಾಂಧಿ ಕುಟುಂಬದ ವಿಷಯಕ್ಕೆ ಬಂದಾಗ ಅವರ ಪರವಾಗಿ ನಿಲ್ಲುತ್ತಿದ್ದ ಶಶಿ ತರೂರ್ ಸಹ ಈ ಸಭೆಯಲ್ಲಿ ಭಾಗವಹಿಸಿದ್ದು ಕುತೂಹಲ ಮೂಡಿಸಿದೆ. ಅಲ್ಲದೆ, ಈವರೆಗೆ ಅತ್ಯಾಪ್ತರಾಗಿದ್ದ ಮಣಿಶಂಕರ್ ಅಯ್ಯರ್ ಕೂಡ ಇದ್ದುದು ವಿಶೇಷ.