* ಇನ್ನು ಪ್ರತಿಯೊಬ್ಬರಿಗೂ ಆರೋಗ್ಯ ಖಾತೆ* ದೇಶದ ಪ್ರತಿ ಪ್ರಜೆಗೂ ಆರೋಗ್ಯದ ಡಿಜಿಟಲ್‌ ಕಾರ್ಡ್‌* ವ್ಯಕ್ತಿಯ ಆರೋಗ್ಯದ ಸಂಪೂರ್ಣ ಮಾಹಿತಿ ಕಾರ್ಡ್‌ನಲ್ಲಿ

ನವದೆಹಲಿ(ಸೆ.28): ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ(health) ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌(Digital Card) ವಿತರಿಸುವ ‘ಪ್ರಧಾನಿ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’(Pradhan Mantri Jan Arogya Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರಾಯೋಗಿಕವಾಗಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದ್ದ ಯೋಜನೆ ಇದೀಗ ದೇಶವ್ಯಾಪಿ ವಿಸ್ತರಣೆಯಾಗಿದೆ. ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಯೋಜನೆ?

ಪ್ರಧಾನಮಂತ್ರಿ ಡಿಜಿಟಲ್‌ ಆರೋಗ್ಯ ಮಿಷನ್‌ ಯೋಜನೆಯಡಿ (ಎನ್‌ಡಿಎಚ್‌ಎಂ) ದೇಶದ ಪ್ರತಿಯೊಬ್ಬರಿಗೂ ಆಧಾರ್‌(Aadhar) ಮತ್ತು ಮೊಬೈಲ್‌ ಸಂಖ್ಯೆ ರೀತಿ ವಿಶೇಷ ಗುರುತಿನ ಸಂಖ್ಯೆ ಮತ್ತು ಕಾರ್ಡ್‌ ವಿತರಿಸಲಾಗುತ್ತದೆ. ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಎಲ್ಲಾ ಮಾಹಿತಿಯನ್ನು ಒಳಗೊಂಡಿರಲಿದೆ. ಅಂದರೆ ಕಾರ್ಡ್‌ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿ ಒಳಗೊಂಡಿರುತ್ತದೆ.

ಏನಿದರ ಉಪಯೋಗ?

ಡಿಜಿಟಲ್‌ ಆರೋಗ್ಯ ಕಾರ್ಡಲ್ಲಿ(Digital Health card) ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬ ಭವಿಷ್ಯದಲ್ಲಿ ಯಾವುದೇ ವೈದ್ಯರ ಭೇಟಿ ವೇಳೆ ಈ ಕಾರ್ಡ್‌ ತೋರಿಸಿದರೆ ಅವರಿಗೆ ರೋಗಿಯ ಎಲ್ಲಾ ಪೂರ್ವಾಪರ ತಿಳಿಯುತ್ತದೆ. ಇದರಿಂದ ತಮ್ಮ ಹಳೆಯ ಚಿಕಿತ್ಸೆಯ ಮಾಹಿತಿಯ ಕಡತಗಳನ್ನು ರೋಗಿ ಎಲ್ಲೆಡೆ ತೆಗೆದುಕೊಂಡು ಹೋಗಬೇಕಿಲ್ಲ. ರೋಗಿಯ ಈ ಆರೋಗ್ಯ ಗುರುತಿನ ಚೀಟಿಯನ್ನು ನೋಡಿದರೆ, ವೈದ್ಯರು ಆರೋಗ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು. ಜೊತೆಗೆ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಈ ಕಾರ್ಡ್‌ ಮೂಲಕ ರೋಗಿಗಳು ಆಯುಷ್ಮಾನ್‌ ಭಾರತ್‌ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲೂ ಸಾಧ್ಯವಾಗಲಿದೆ. ಸರ್ಕಾರಕ್ಕೆ ನಿರ್ದಿಷ್ಟಯೋಜನೆ ರೂಪಿಸಲು ಸಾಧ್ಯವಾಗುತ್ತದೆ.

ವೈದ್ಯರಿಗೂ ಸಹಾಯಕ

ಸರ್ಕಾರ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾಬೇಸ್‌ ಅನ್ನು ಈ ಕಾರ್ಡ್‌ ಮೂಲಕ ಸಿದ್ಧಪಡಿಸುತ್ತದೆ. ಎಲ್ಲಾ ವಿವರಗಳನ್ನು ಆ ವ್ಯಕ್ತಿಯ ವೈದ್ಯಕೀಯ ದಾಖಲೆಯಲ್ಲಿ ಇರಿಸಲಾಗುವುದು. ಈ ಐಡಿಯ ಸಹಾಯದಿಂದ, ಒಬ್ಬ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ನೋಡಬಹುದು. ಇದರಿಂದ ವೈದ್ಯರಿಗೂ ನೆರವಾಗಲಿದೆ. ವ್ಯಕ್ತಿಯ ಹಿಂದಿನ ಆರೋಗ್ಯ ಸ್ಥಿತಿ, ಆತನ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸುಲಭವಾಗಿ ಎಲ್ಲಾ ಮಾಹಿತಿ ಸಿಗಲಿದೆ. ಈ ಸೌಲಭ್ಯದ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಐಡಿ ಪಡೆಯುವುದು ಹೇಗೆ?

ಈ ಆರೋಗ್ಯಕಾರ್ಡ್‌ ಐಡಿಯನ್ನು ವ್ಯಕ್ತಿಯೊಬ್ಬರ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆಯನ್ನು ಬಳಸಿ ರಚಿಸಲಾಗುತ್ತದೆ. ಇದಕ್ಕಾಗಿ, ಸರ್ಕಾರವು ಆರೋಗ್ಯ ಪ್ರಾಧಿ​ಕಾರವನ್ನು ರಚಿಸಲಿದ್ದು, ಈ ಮೂಲಕ ವ್ಯಕ್ತಿಯ ಎಲ್ಲಾ ದಾಖಲೆಯನ್ನು ಸಂಗ್ರಹಿಸುತ್ತದೆ. ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ನೋಂದಾವಣೆಗೆ ಸಂಪರ್ಕಿಸಬಹುದು. ನಿಮ್ಮ ದಾಖಲೆಗಳನ್ನು https://healthid.ndhm.gov.in/ ನಲ್ಲಿ ನೋಂದಾಯಿಸುವ ಮೂಲಕ, ನಿಮ್ಮ ಆರೋಗ್ಯ ಐಡಿಯನ್ನು ನೀವೂ ರಚಿಸಬಹುದು. ಅಥವಾ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಎಬಿಡಿಎಂ ಹೆಲ್ತ್‌ ರೆಕಾರ್ಡ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡುವ ಮೂಲಕ ಆರೋಗ್ಯ ಐಡಿಯನ್ನು ಪಡೆಯಬಹುದು. ಮೂಲ ವಿವರಗಳನ್ನು ಪಡೆಯಲು ಮೊಬೈಲ್‌ ಸಂಖ್ಯೆ ಅಥವಾ ಆಧಾರ್‌ ಸಂಖ್ಯೆ ದೃಢೀಕರಿಸಲು ಮಾತ್ರ ಸಮಯ ಹಿಡಿಯುತ್ತದೆ. ಇದರ ಹೊರತಾಗಿ 10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಮುಗಿಯಲಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ?

- https://healthid.ndhm.gov.in/ ವೆಬ್‌ಸೈಟ್‌ಗೆ ಲಾಗಿನ್‌ ಆಗಿ

-ಎನ್‌ಡಿಎಚ್‌ಎಂ ಐಡಿ ಆ್ಯಪ್‌ ತೆರೆಯಿರಿ. ನೋಂದಣಿ ಪುಟ ತೆರೆಯುತ್ತದೆ.

-ರಿಜಿಸ್ಟರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ

-ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ನಮೂದಿಸಿ

-ನೀವು ನಮೂದಿಸಿದ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿಯನ್ನು ಟೈಪ್‌ ಮಾಡಿ.

-ಅರ್ಜಿಯ ಅಂತಿಮ ಸಲ್ಲಿಕೆಗೆ ‘ಸಬ್ಮಿಟ್‌’ ಬಟನ್‌ ಮೇಲೆ ಕ್ಲಿಕ್‌ ಮಾಡಿ.

ಮಾಹಿತಿ ಹಂಚಿಕೆ ಅಥವಾ ತಿರಸ್ಕಾರದ ಆಯ್ಕೆಯೂ ಇದೆ

ಆರೋಗ್ಯ ಐಡಿ ಮೊಬೈಲ್‌ ಅಪ್ಲಿಕೇಶನ್‌ ರೂಪದಲ್ಲಿರುತ್ತದೆ. ಆಸ್ಪತ್ರೆಗಳು ಮತ್ತು ವೈದ್ಯರ ನಡುವೆ ತಮ್ಮ ಡೇಟಾವನ್ನು ಡಿಜಿಟಲ್‌ ರೂಪದಲ್ಲಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅವರು ಎಷ್ಟುಸಮಯದವರೆಗೆ ಅಥವಾ ಯಾವ ನಿರ್ದಿಷ್ಟದಾಖಲೆಗಳನ್ನು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡುವ ಅವಕಾಶವಿದೆ. ವ್ಯಕ್ತಿ ಸರ್ಕಾರಿ ಯೋಜನೆಗಳಿಂದ ಲಾಭ ಪಡೆಯಲು ಬಯಸಿದರೆ ಅವರು ತಮ್ಮ ಐಡಿಯನ್ನು ತಮ್ಮ ಆಧಾರ್‌ಗೆ ಸಂಪರ್ಕಿಸುವ ಅಗತ್ಯವಿದೆ. ರೋಗಿಯ ದಾಖಲೆಗಳ ಒಂದು ನಕಲನ್ನು ಅವರ ವೈದ್ಯರ ಫೈಲ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಒಂದನ್ನು ಅವರ ಸ್ವಂತ ಲಾಕರ್‌ನಲ್ಲಿ ಸಂಗ್ರಹಿಸಲಾಗುತ್ತದೆ (ಅದನ್ನು ಕಂಪನಿಯ ಅಥವಾ ಸರ್ಕಾರದ ಒಡೆತನದಲ್ಲಿರಬಹುದು).

ಎಲ್ಲಾ ಆಸ್ಪತ್ರೆಗಳಿಗೆ ಅನ್ವಯ

ಈ ಡಿಜಿಟಲ್‌ ಪ್ಲಾಟ್‌ಫಾರ್ಮ್ ಅನ್ನು 3 ಪ್ರಮುಖ ಅಂಶಗಳೊಂದಿಗೆ ಆರಂಭಿಸಲಾಗುತ್ತದೆ. ಆರೋಗ್ಯದ ಐಡಿ, ವೈದ್ಯರ ರಿಜಿಸ್ಟ್ರಿ ಮತ್ತು ಆರೋಗ್ಯ ಸೌಕರ್ಯಗಳ ರಿಜಿಸ್ಟ್ರಿ, ಈ ಅಂಶಗಳ ಆಧಾರದಲ್ಲಿ ಆರಂಭವಾಗುತ್ತದೆ. ಈ ಐಡಿ ಎಲ್ಲ ರಾಜ್ಯಗಳು, ಆಸ್ಪತ್ರೆಗಳು, ಟಯಾಗ್ನೋಸ್ಟಿಕ್‌ ಲ್ಯಾಬೋರೇಟರಿಗಳು ಮತ್ತು ಫಾರ್ಮಸಿಗಳಿಗೆ ಅನ್ವಯವಾಗುತ್ತದೆ. ನಂತರದ ದಿನಗಳಲ್ಲಿ ಇದು ಇ-ಫಾರ್ಮಸಿ, ಟೆಲಿಮೆಡಿಸಿನ್‌ ಸೇವೆಗಳನ್ನೂ ಒಳಗೊಳ್ಳಲಿದೆ.

ಆ್ಯಪ್‌ ನೋಂದಣಿ ಸ್ವ ಇಚ್ಛೆ

ಈ ಪ್ಲಾಟ್‌ಫಾಮ್‌ರ್‍ ಸ್ವ ಇಚ್ಛೆಗೆ ಅನುಗುಣವಾಗಿರುತ್ತದೆ. ಈ ಆ್ಯಪ್‌ನಲ್ಲಿ ಹೆಸರು ದಾಖಲಿಸಿಕೊಳ್ಳುವುದು ಅಥವಾ ಬಿಡುವುದು ಆಯಾ ವ್ಯಕ್ತಿಗೆ ಬಿಟ್ಟಿದ್ದು. ವ್ಯಕ್ತಿಯಿಂದ ಅಧಿಕೃತ ಅನುಮೋದನೆ ಪಡೆದುಕೊಂಡ ಬಳಿಕವಷ್ಟೇ ಆರೋಗ್ಯ ದಾಖಲೆಗಳನ್ನು ಹಂಚಲಾಗುತ್ತದೆ. ಅದೇ ರೀತಿ ಆ್ಯಪ್‌ಗೆ ವಿವರಗಳನ್ನು ಒದಗಿಸುವುದು ಆಸ್ಪತ್ರೆ ಮತ್ತು ವೈದ್ಯರಿಗೆ ಬಿಟ್ಟಿದ್ದು. ಇನ್ನು ಡಿಜಿ ಡಾಕ್ಟರ್‌ ಆಯ್ಕೆಯು ದೇಶದೆಲ್ಲೆಡೆಯ ವೈದ್ಯರು ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ತಮ್ಮ ವಿವರಗಳನ್ನು ಅಪ್‌ಲೋಡ್‌ ಮಾಡಲು ಅವಕಾಶ ನೀಡುತ್ತದೆ. ಇದರಲ್ಲಿ ಅವರು ಬಯಸಿದಲ್ಲಿ ಸಂಪರ್ಕ ಸಂಖ್ಯೆಯನ್ನೂ ಹಾಕಿಕೊಳ್ಳಬಹುದು. ಆ್ಯಪ್‌ ಬಳಕೆ ಸ್ವಯಂಪ್ರೇರಿತವಾಗಿದ್ದರೂ ಪ್ರತಿಯೊಬ್ಬರೂ ಇದನ್ನು ಬಳಸುವ ಮೂಲಕ ಪ್ರಯೋಜನ ಪಡೆಯುವಂತೆ ಮಾಡುವುದು ಸರ್ಕಾರದ ಉದ್ದೇಶ.

ಭದ್ರತೆ ಇದೆಯೇ?

ಸಮಾಲೋಚನೆಗಾಗಿ ರೋಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ತಮ್ಮ ಆರೋಗ್ಯ ಐಡಿಯಲ್ಲಿರುವ ಡೇಟಾವನ್ನು ತೆರೆಯಲು ಒಮ್ಮೆ ಮಾತ್ರ ಅವಕಾಶ ನೀಡಲಾಗುತ್ತದೆ. ಗೌಪ್ಯತೆಯ ದೃಷ್ಟಿಯಿಂದ ಪ್ರತಿ ಬಾರಿ ಭೇಟಿ ನೀಡಿದಾಗಲೂ ರೋಗಿಗಳು ಪ್ರತ್ಯೇಕವಾಗಿ ತಮ್ಮ ಡೇಟಾ ತೆರೆಯಲು ಅನುಮತಿ ನೀಡಬೇಕಾಗುತ್ತದೆ. ಅಲ್ಲದೆ ವೈದ್ಯರು ಸೀಮಿತ ಅವಧಿಗೆ ಮಾತ್ರ ಡೇಟಾಗೆ ಪ್ರವೇಶ ಪಡೆಯಬಹುದು.