ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇಬ್ಬರು ಶಂಕರಾಚಾರ್ಯರ ವಿರೋಧ: ಕಾರ್ಯಕ್ರಮಕ್ಕೆ ಪುರಿ, ಬದರಿ ಸ್ವಾಮೀಜಿ ಗೈರು
ರಾಮ ಮಂದಿರ ಉದ್ಘಾಟನೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ರಾಮ ಮಂದಿರ ಪ್ರತಿಷ್ಠಾಪನೆಯಲ್ಲಿ ಸನಾತನ ಧರ್ಮದ ನಿಯಮಗಳನ್ನು ಮುರಿಯಲಾಗಿದೆ. ಧರ್ಮದ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ ಎಂದಿದ್ದಾರೆ.
ನವದೆಹಲಿ (ಜನವರಿ 12, 2024): ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ದೇಶದ 4 ದಿಕ್ಕುಗಳಲ್ಲಿರುವ ನಾಲ್ಕು ಶಂಕರಾಚಾರ್ಯರ ಪೀಠದ ಪೀಠಾಧಿಪತಿಗಳ ಪೈಕಿ ಇಬ್ಬರು ಘೋಷಿಸಿದ್ದಾರೆ.
ನಿರ್ಮಾಣ ಮಾಡಲಾಗುತ್ತಿರುವ ರಾಮ ಮಂದಿರ ಪೂರ್ಣಗೊಳ್ಳುವ ಮೊದಲೇ ದೇವರ ಪ್ರತಿಷ್ಠಾಪನೆ ಮಾಡುತ್ತಿರುವುದು ನಿಯಮ ಬದ್ಧವಾಗಿಲ್ಲ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಉತ್ತರಾ ಖಂಡದ ಬದರಿನಾಥದ ಜ್ಯೋರ್ತಿಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಕನ್ನಡ ಸೇರಿ 28 ಭಾಷೆ ಬಳಕೆ: ವಿವಿಧ ಭಾಷೆಗಳಲ್ಲಿ ಸೂಚನಾ ಫಲಕ
ಈ ಬಗ್ಗೆ ಮಾತನಾಡಿರುವ ಅವಿಮುಕ್ತೇಶ್ವರಾನಂದ ಸರಸ್ವತಿ, ‘ರಾಮ ಮಂದಿರ ಉದ್ಘಾಟನೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ರಾಮ ಮಂದಿರ ಪ್ರತಿಷ್ಠಾಪನೆಯಲ್ಲಿ ಸನಾತನ ಧರ್ಮದ ನಿಯಮಗಳನ್ನು ಮುರಿಯಲಾಗಿದೆ. ಧರ್ಮದ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ.
ನಿರ್ಮಾಣ ಪೂರ್ಣಗೊಳ್ಳದ ದೇವಸ್ಥಾನದಲ್ಲಿ ದೇವರನ್ನು ಪ್ರತಿಷ್ಠಾಪಿಸುತ್ತಿರುವುದು ನಿಯಮಗಳಿಗೆ ವಿರುದ್ದವಾಗಿದೆ. ಹೀಗಾಗಿ ನಾವು ಮೌನವಾಗಿ ಉಳಿಯಲು ಸಾಧ್ಯವಿಲ್ಲ. ಇದರಿಂದ ನಮ್ಮನ್ನು ಮೋದಿ ವಿರೋಧಿ ಎಂದು ಕರೆಯಲಾಗುತ್ತಿದೆ. ಆದರೆ ನಾವು ಮೋದಿ ವಿರೋಧಿಯಲ್ಲ. ಅದೇ ರೀತಿ ಧರ್ಮಶಾಸ್ತ್ರದ ವಿರುದ್ಧವೂ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ರಾಮಮಂದಿರಕ್ಕೆ ಬೃಹತ್ ಬೀಗದ ಕೈ, ಪಾದರಕ್ಷೆ ಸೇರಿ ನಾನಾ ರೀತಿ ಉಡುಗೊರೆ
ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಅವರು ಸಹ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ನುಡಿದಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅವರು ಗರ್ಭಗೃಹವನ್ನು ಪ್ರವೇಶಿಸಿ ರಾಮನ ಮೂರ್ತಿಯನ್ನು ಪ್ರವೇಶಿಸಲಿದ್ದಾರೆ. ಹೀಗಾಗಿ ಇದು ರಾಜಕೀಯದ ದೃಷ್ಟಿಕೋನವನ್ನು ಹೊಂದಿದೆ. ರಾಮನ ಪ್ರಾಣಪ್ರತಿಷ್ಟಾಪನೆಯನ್ನು ಗೌರವದಿಂದ ಮಾಡಬೇಕು. ನಾವು ಇದನ್ನು ವಿರೋಧಿಸುವುದಿಲ್ಲ. ಆದರೆ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಈ ಮೊದಲು ನಾಲ್ಕು ಪೀಠಗಳ ಶಂಕರಾಚಾರ್ಯರೂ ಸಹ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಸುದ್ದಿ ವೈರಲ್ ಆಗಿತ್ತು. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಶೃಂಗೇರಿ ಶಾರದಾ ಪೀಠ ಹಾಗೂ ದ್ವಾರಕಾ ಶಾರದಾ ಪೀಠದ ಶಮಕರಾಚಾರ್ಯರು ತಮ್ಮ ಹೆಸರಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಹೇಳಿದ್ದಾರೆ.
ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ನೆರವೇರಿಸಲಿದ್ದಾರೆ. ಈವರೆಗೆ ರಾಮ ಮಂದಿರದ ಮೊದಲ ಹಂತ ಮುಕ್ತಾಯಗೊಂಡಿದ್ದು, ಎರಡನೇ ಹಂತದಲ್ಲಿ ಮಂದಿರ ಉಳಿದ ಅಂತಸ್ತುಗಳನ್ನು ನಿರ್ಮಾಣ ಮಾಡಲಾಗುತ್ತದೆ.