ಹಿರಿಯ ನಟ ಧರ್ಮೇಂದ್ರ ನಿಧನದ ಸುಳ್ಳು ಸುದ್ದಿ ಹರಡಿದ ಬೆನ್ನಲ್ಲೇ, ಅವರ ಪುತ್ರಿ ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಂಬೈ (ನ.11): ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (89) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಮಾಧ್ಯಮಗಳು ಈ ಬಗ್ಗೆ ವ್ಯಾಪಕವಾದ ವರದಿ ಮಾಡಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ, ಧರ್ಮೇಂದ್ರ ಕುಟುಂಬದವರಿಂದ ಅಪ್‌ಡೇಟ್ ಬಂದ ಹಿನ್ನಲೆಯಲ್ಲಿ ಬಳಿಕ ಎಕ್ಸ್‌ನಲ್ಲಿನ ತಮ್ಮ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ಅವರನ್ನು ಸೋಮವಾರ (ನವೆಂಬರ್ 10) ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ನಟನ ಸಾವಿನ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿರುವ ಇಶಾ ಡಿಯೋಲ್, 'ಮಾಧ್ಯಮಗಳು ಸಂಪೂರ್ಣ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಅಪ್ಪನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದ ಗೌಪ್ಯತೆಯನ್ನು ಎಲ್ಲರೂ ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ಅಪ್ಪನ ಶೀಘ್ರ ಚೇತರಿಕೆಗಾಗಿ ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
89 ವರ್ಷದ ನಟನನ್ನು ಸೋಮವಾರ ಉಸಿರಾಟದ ತೊಂದರೆಯಿಂದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರ ಸ್ಥಿತಿ ಹದಗೆಟ್ಟ ನಂತರ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. 72 ಗಂಟೆಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದೂ ವೈದ್ಯರು ತಿಳಿಸಿದ್ದಾರೆ.
ಡಿಯೋಲ್ ಕುಟುಂಬಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಧರ್ಮೇಂದ್ರ ಅವರ ಹೆಣ್ಣುಮಕ್ಕಳನ್ನು ಈಗಾಗಲೇ ವಿದೇಶದಿಂದ ಮುಂಬೈಗೆ ಕರೆಸಲಾಗಿದೆ. ನಿನ್ನೆ ರಾತ್ರಿ ಆಸ್ಪತ್ರೆಯ ಹೊರಗೆ ಸನ್ನಿ ಡಿಯೋಲ್ ತುಂಬಾ ಭಾವುಕರಾಗಿದ್ದರು, ಆದರೆ ಬಾಬಿ ಡಿಯೋಲ್ ಕೂಡ ಆಲ್ಫಾ ಚಿತ್ರೀಕರಣವನ್ನು ಮುಗಿಸಿ ಮುಂಬೈಗೆ ಹಿಂತಿರುಗಿ ತಮ್ಮ ತಂದೆಯನ್ನು ಭೇಟಿ ಮಾಡಿದರು. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸೋಮವಾರ ತಡರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಆಗಮಿಸಿದರು.
ಗಣ್ಯರ ಭೇಟಿ
ಧರ್ಮೇಂದ್ರ ಅವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಹಲವಾರು ಹಿರಿಯ ಹಾಗೂ ಸ್ಟಾರ್ ನಟರು ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಾಬಿ ಡಿಯೋಲ್ ಹಾಗೂ ಸನ್ನಿ ಡಿಯೋಲ್ ಬಹಳ ಭಾವುಕವಾಗಿ ಕಂಡುಬಂದಿದ್ದರು. ಸೋಮವಾರ ಸಂಜೆ ಸನ್ನಿ ಡಿಯೋಲ್ ಅವರ ಪುತ್ರರಾದ ಕರಣ್ ಹಾಗೂ ರಾಜವೀರ್, ಧರ್ಮೇಂದ್ರ ಅವರ ಪತ್ನಿ ಹೇಮ ಮಾಲಿನಿ ಕೂಡ ಆಸ್ಪತ್ರೆಗೆ ಆಗಮಿಸಿದ್ದರು. ಸೋಮವಾರ ಬೆಳಗ್ಗೆ ಮುಂಬೈಗೆ ಆಗಮಿಸಿದ್ದ ನಟ ಸಲ್ಮಾನ್ ಖಾನ್ ಸಂಜೆಯ ವೇಳೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದರೆ, ಶಾರುಖ್ ಖಾನ್, ಅವರ ಪುತ್ರ ಆರ್ಯನ್ ಖಾನ್, ನಟ ಗೋವಿಂದ, ನಟಿ ಅಮಿಷಾ ಪಟೇಲ್ ಕೂಡ ಆಗಮಿಸಿದ್ದರು.
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಧರ್ಮೇಂದ್ರ
ನವೆಂಬರ್ 10 ಕ್ಕಿಂತ ಮೊದಲು, ಅಕ್ಟೋಬರ್ 31 ರಂದು ಧರ್ಮೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯಿಂದಾಗಿ ಧರ್ಮೇಂದ್ರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಾರ ವಿಕ್ಕಿ ಲಾಲ್ವಾನಿ ಪೋಸ್ಟ್ ಮಾಡಿದ್ದಾರೆ. ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಅವರ ಎಲ್ಲಾ ಪ್ರಮುಖ ಪರೀಕ್ಷೆಗಳಲ್ಲಿ ಸುಧಾರಣೆ ಕಂಡ ನಂತರ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲಿ ಧರ್ಮೇಂದ್ರ ಕಾರ್ನಿಯಲ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಎಡಗಣ್ಣಿನ ಪಾರದರ್ಶಕ ಪದರವಾದ ಕಾರ್ನಿಯಾ ಹಾನಿಗೊಳಗಾಗಿದ್ದು, ಅವರಿಗೆ ಕಾರ್ನಿಯಲ್ ಕಸಿ (ಕೆರಾಟೊಪ್ಲ್ಯಾಸ್ಟಿ) ಮಾಡಲಾಯಿತು.
