ಧರ್ಮಸ್ಥಳ ಗ್ರಾಮದಲ್ಲಿ ಶವಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಬೆಂಗಳೂರು ಕೋರ್ಟ್‌ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಬುಧವಾರ ನಿರಾಕರಿಸಿದೆ.

ನವದೆಹಲಿ (ಜು.24): ಧರ್ಮಸ್ಥಳ ಗ್ರಾಮದಲ್ಲಿ ಶವಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಬೆಂಗಳೂರು ಕೋರ್ಟ್‌ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಬುಧವಾರ ನಿರಾಕರಿಸಿದೆ. ಮೊದಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಆ ಬಳಿಕ ನಮ್ಮಲ್ಲಿಗೆ ಬನ್ನಿ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟಿರುವ ಆರೋಪಕ್ಕೆ ಸಂಬಂಧಿಸಿ ಧರ್ಮಸ್ಥಳ ದೇವಸ್ಥಾನ ಮತ್ತು ಅದನ್ನು ನಿರ್ವಹಿಸುತ್ತಿರುವ ಕುಟುಂಬದ ವಿರುದ್ಧ ಪ್ರಸಾರವಾಗುತ್ತಿರುವ ಸುದ್ದಿಗಳಿಗೆ ಸಂಬಂಧಿಸಿ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್ ಈ ಆದೇಶ ನೀಡಿತ್ತು. ಅಲ್ಲದೆ, ಈ ಕುರಿತ 9 ಸಾವಿರ ಲಿಂಕ್‌ಗಳು ಮತ್ತು ವರದಿಗಳನ್ನು ಅಂತರ್ಜಾಲದಿಂದ ತೆಗೆದುಹಾಕುವಂತೆಯೂ 390 ಮಾಧ್ಯಮಗಳಿಗೆ ಕೋರ್ಟ್ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ಥರ್ಡ್‌ ಐ ಯೂಟ್ಯೂಬ್‌ ಚಾನೆಲ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ನ್ಯಾ.ಕೆ.ವಿನೋದ್‌ ಚಂದ್ರನ್‌ ಮತ್ತು ನ್ಯಾ.ಜೋಯ್‌ಮಲ್ಯಾ ಬಗಾಚಿ ಅವರಿದ್ದ ಪೀಠವು ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ಯಾಕೆ ಮನವಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿತು. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿ ನೀವು ಮೊದಲು ಹೈಕೋರ್ಟ್‌ ಮುಂದೆ ಹೋಗಿ ಎಂದು ಸೂಚಿಸಿತು.

ಅಡ್ವಾನ್ಸ್‌ ಜಡ್ಜಮೆಂಟ್‌ ಬೇಡ: ಪೊಲೀಸರು ಕೆಲಸ ಮಾಡುತ್ತಿದ್ದಾರೆ, ಮಾಡಲು ಬಿಡಿ. ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ. ಅಡ್ವಾನ್ಸ್ ಜಡ್ಜ್‌ಮೆಂಟ್ ಬರೆಯುವ ಅವಶ್ಯಕತೆ ಇಲ್ಲ. ತನಿಖೆ ಮಾಡಲಿ, ಏನು ಸತ್ಯಾಂಶ ಹೊರಗೆ ಬರುತ್ತದೆ ನೋಡೋಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಎಸ್‌ಐಟಿ ತನಿಖೆಯಲ್ಲಿ ಸೌಜನ್ಯ ಪ್ರಕರಣ ಪ್ರತ್ಯೇಕವಾಗಿಟ್ಟ ವಿಚಾರದ ಬಗ್ಗೆ ಮಾತನಾಡಿ, ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಎಸ್‌ಐಟಿ ಮಾಡಿದ್ದಾರೆ. ತನಿಖೆ ಮಾಡಲಿ. ಎರಡೂ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುತ್ತವೆ. ಅಂತಿಮ ತೀರ್ಪು ಬರಲಿ ನೋಡೋಣ. ಸರ್ಕಾರ ಸೂಕ್ತ ನಿರ್ಧಾರ ಮಾಡುತ್ತದೆ. ಎಲ್ಲರಿಗೂ ನ್ಯಾಯ ಸಿಗಲಿ ಎನ್ನುವ ದೃಷ್ಟಿಯಿಂದಲೇ ತೀರ್ಮಾನ ಮಾಡುತ್ತಾರೆ. ಏನಾಗತ್ತದೆ ಕಾದು ನೋಡೋಣ ಎಂದರು.

ಸನಾತನ ಧರ್ಮದ ಮೇಲೆ ದಾಳಿ ಎಂದಿರುವ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಚುನಾವಣೆಯಲ್ಲಿ ಈ ರೀತಿ ಹಬ್ಬಿಸೋದು ಕಾಮನ್. ಚುನಾವಣೆ 6 ತಿಂಗಳು ಇರೋವಾಗ ಶುರು ಮಾಡುತ್ತಾರೆ. ಆದರೀಗ ಮೂರು ವರ್ಷ ಮುಂಚೆಯೇ ಶುರು ಮಾಡಿದ್ದಾರೆ. ಇದೇನು ಹೊಸದಲ್ಲ. ಹಿಂದೆ ಕರಾವಳಿಯಲ್ಲಿ ಹಿಂದೂಗಳ ಹತ್ಯೆ ಇದ್ದವು. ಸಿಬಿಐ, ಎಸ್‌ಐಟಿ ರಚನೆ ಮಾಡಿದರು. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು. ಸಿಎಂ- ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಮುಗಿದ ಹೋದ ವಿಚಾರ. ಸ್ವತಃ ಸಿಎಂ ಹೇಳಿದ್ದಾರಲ್ಲ, ಮುಸುಕಿನ ಗುದ್ದಾಟದ ಪ್ರಶ್ನೆಯೇ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೆಪಿಸಿಸಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಉತ್ತರಿಸಿ, ಅದು ನಮ್ಮ ಹಂತದಲ್ಲಿಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಟೈಂ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಇದನ್ನು ನಾವು ಹೇಳೋಕೆ ಆಗಲ್ಲ, ಕಾದು ನೋಡೋಣ ಎಂದರು.