ಸಾಮಾಜಿಕ ಜಾಲತಾಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಧರ್ಮಸ್ಥಳ ಗ್ರಾಮ ಕುರಿತಂತೆ ನಡೆಯುತ್ತಿರುವ ಕುರಿತ ಚರ್ಚೆಗಳ ಹಿನ್ನೆಲೆಯಲ್ಲಿ ಜನರಲ್ಲಿನ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಬೆಂಗಳೂರು (ಜು.23): ಸಾಮಾಜಿಕ ಜಾಲತಾಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಧರ್ಮಸ್ಥಳ ಗ್ರಾಮ ಕುರಿತಂತೆ ನಡೆಯುತ್ತಿರುವ ಕುರಿತ ಚರ್ಚೆಗಳ ಹಿನ್ನೆಲೆಯಲ್ಲಿ ಜನರಲ್ಲಿನ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳವನ್ನು ರಾಜ್ಯದ ಬಹುತೇಕ ಮಂದಿ ನಂಬಿ ಪೂಜೆ, ಹರಕೆ ಮಾಡಿಕೊಂಡು ಬಂದಿದ್ದಾರೆ. ಕೆಲ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಲೇ ಬಂದಿದೆ. ಈ ವಿಚಾರದಲ್ಲಿ ಜನರ ಅನುಮಾನಗಳನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ. ಅದರಿಂದ ಶ್ರೀ ಕ್ಷೇತ್ರಕ್ಕೂ ಒಳ್ಳೆಯದೇ ಎಂದರು. ಕೆಲವರು ಅದನ್ನು ಹಿಂದು ವಿರೋಧಿ ನೀತಿ ಎಂಬ ರೀತಿ ಬಿಂಬಿಸುತ್ತಿದ್ದಾರೆ. ಇದು ಹಿಂದು ಪರವಾದ ನೀತಿ. ಹಿಂದುಗಳಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. ಈ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ತನಿಖೆಗೆ ಅಸಮ್ಮತಿ ಸೂಚಿಸಲು ಆಗಲ್ಲ: ಸೌಜನ್ಯ ಕೇಸ್ ವಿಚಾರವಾಗಿ ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶ ಮಾಡಿದ ಮೇಲೆ ಯಾರೂ ಅಸಮ್ಮತಿ ಸೂಚಿಸಲು ಆಗಲ್ಲ. ತನಿಖೆ ಅನಿವಾರ್ಯತೆ ಇದ್ದಾಗ ತನಿಖೆ ಮಾಡಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ತನಿಖೆ ಅನಿವಾರ್ಯ. ಸಂಶಯಾಸ್ಪದವಾಗಿ ಆ ವಿಷಯ ಪ್ರಚಾರ, ಅಪಪ್ರಚಾರ ಪಡೆದ ಮೇಲೆ ಲಾಜಿಕಲ್ ಎಂಡ್‌ಗೆ ಹೋಗಲೇಬೇಕು. ನಿರ್ಣಯ ಆಗಲೇಬೇಕು.
ಇತ್ತೀಚೆಗೆ ಕೆಲವರು ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ವಲಯದಲ್ಲೂ ತನಿಖೆಗೆ ಕೂಗು ಬಂದ ಮೇಲೆ ತನಿಖೆ ಅನಿವಾರ್ಯವಾಗಿದೆ ಎಂದರು.ಕೇರಳ ಸರ್ಕಾರದಿಂದಲೂ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಸರ್ಕಾರ- ಸರ್ಕಾರಗಳ ನಡುವೆ ನಿರ್ಣಯ ಆಗುವ ವಿಚಾರ. ಇಂಟರ್ ಸ್ಟೇಟ್ ವಿಚಾರ ಇದ್ದಾಗ ಆ ಸರ್ಕಾರವೂ ತನಿಖೆ ಮಾಡಿಸಬಹುದು ಎಂದರು. ಹಾವೇರಿ ಜಿಲ್ಲೆಯಲ್ಲಿ ಯೂರಿಯಾ ಅಭಾವ ಕುರಿತು ಮಾತನಾಡಿದ ಅವರು, ಇಡೀ ರಾಜ್ಯಕ್ಕೆ 13 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಕು. ಯೂರಿಯಾ, ಡಿಎಪಿ ಗೊಬ್ಬರ ನೀಡುವುದು ಕೇಂದ್ರ ಸರ್ಕಾರದ ಕೆಲಸ.
ಆದರೆ ಕೇಂದ್ರ ಸರ್ಕಾರ 4 ಲಕ್ಷ ಟನ್ ನೀಡಿದೆ ಎಂದರು. ಮೈಸೂರು ಭಾಗದಲ್ಲಿ ಸಾಧನಾ ಸಮಾವೇಶದ ಮೂಲಕ ಸಿಎಂ ಶಕ್ತಿ ಪ್ರದರ್ಶನ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಹಿಂದೆ ಇಂಡಿ ತಾಲೂಕಿನಲ್ಲೂ ಈ ರೀತಿ ಸಮಾವೇಶವಾಗಿಗಿತ್ತು. ಮೈಸೂರಿಗಿಂತ ಮೊದಲು ಇಂಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಬಂದು ಹೋಗಿದ್ದಾರೆ. ವಿಪಕ್ಷದವರದು ಆರೋಪ ಮಾಡುವುದೇ ಕೆಲಸ. ಅದನ್ನೇ ಮಾಡುತ್ತಿದ್ದಾರೆ ಎಂದರು. ಬೀದಿಬದಿ ವ್ಯಾಪಾರಿಗಳಿಗೆ ಜಿಎಸ್‌ಟಿ ಹೊರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಹೊರೆ ಆಗಿರುವುದನ್ನು ಒಪ್ಪುತ್ತೇನೆ. ಅಲ್ಲದೇ ನೋಟಿಸ್ ಕೊಡುವುದು ಸ್ವಾಭಾವಿಕ ಪ್ರಕ್ರಿಯೆ ಎಂದರು.
