* 18ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ* ಬಳಿಕ ಚಿತ್ರಹಿಂಸೆ ನೀಡಿ ಇವರ ಹತ್ಯೆ ಮಾಡಲಾಗಿತ್ತು* ಈ ಹಿಂದೆ ಇವರಿಗೆ ಹುತಾತ್ಮ ಪಟ್ಟನೀಡಿತ್ತು* ನೆನೆದವರ ಪಾಲಿಗೆ ದೇವಸಹಾಯಂ ‘ಪವಾಡ ಪುರುಷ’
ಚೆನ್ನೈ(ಮೇ./16) 18ನೇ ಶತಮಾನದಲ್ಲಿ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದ ದೇವಸಹಾಯಂ ಅವರಿಗೆ ಕ್ರೈಸ್ತರ ಪರಮೋಚ್ಚ ಧರ್ಮಗುರು ಫ್ರಾನ್ಸಿಸ್ ಅವರು ‘ಸಂತ ಪದವಿ’ ಘೋಷಿಸಿದ್ದಾರೆ.
ಲಾಜರಸ್ ಎಂದೂ ಜನರಿಂದ ಕರೆಯಲ್ಪಡುತ್ತಿದ್ದ ದೇವಸಹಾಯಂ ಅವರು ವ್ಯಾಟಿಕನ್‌ನಿಂದ ಸಂತ ಪದವಿ ಪಡೆದ ‘ಪಾದ್ರಿಯ ದೀಕ್ಷೆ ಪಡೆಯದ ಚಚ್‌ರ್ ಸದಸ್ಯ’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಘೋಷಣೆ ಹೊರಬೀಳುತ್ತಿದ್ದಂತೆಯೇ ವ್ಯಾಟಿಕನ್‌ನಲ್ಲಿದ್ದ ಭಾರತೀಯರ ಗುಂಪು ತ್ರಿವರ್ಣಧ್ವಜ ಬೀಸಿ ಸಂಭ್ರಮಿಸಿತು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಟ:
ಹಿಂದೂ ಧರ್ಮದಲ್ಲಿ ನೀಲಕಂಠನ್ ಪಿಳ್ಳೈ ಎಂಬ ಹೆಸರಿನಲ್ಲಿ ಕನ್ಯಾಕುಮಾರಿಯಲ್ಲಿ ಜನಿಸಿದ್ದ ದೇವಸಹಾಯಂ, ತಿರುವಾಂಕೂರು ಅರಮನೆಯಲ್ಲಿ ಅರಸ ಮಾರ್ತಾಂಡ ವರ್ಮನ ಅಡಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 1745ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು ಹಾಗೂ ತಮ್ಮ ಹೆಸರನ್ನು ದೇವಸಹಾಯಂ ಹಾಗೂ ಲಾಜರಸ್ ಎಂದು ಬದಲಿಸಿಕೊಂಡರು. ಜಾತಿ ತಾರತಮ್ಯದ ವಿರುದ್ಧ ಆಗಿನ ಕಾಲದಲ್ಲೇ ಅವರು ತೀವ್ರವಾಗಿ ಹೋರಾಡಿ ಸಮಾನತೆ ಸಾರಿದರು. ಆದರೆ ಹೀಗೆ ಮಾಡಿದ್ದಕ್ಕಾಗಿ ಅವರನ್ನು 1749ರಲ್ಲಿ ಬಂಧಿಸಲಾಯಿತು ಹಾಗೂ 1752ರಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು.
2012ರಲ್ಲೇ ಇವರನ್ನು ವ್ಯಾಟಿಕನ್, ‘ಹುತಾತ್ಮ’ ಎಂದು ಸಾಕಷ್ಟುಪರಿಶೀಲನಾ ಪ್ರಕ್ರಿಯೆ ಬಳಿಕ ಘೋಷಿಸಿತ್ತು.
ಸಂತ ಪದವಿ ನೀಡಲು ಕಾರಣವಾದ ಪವಾಡ:
2013ರಲ್ಲಿ 7 ತಿಂಗಳ ಗರ್ಭಿಣಿಯೊಬ್ಬಳು ಸಮಸ್ಯೆ ಎದುರಿಸಿದ್ದಳು. ಆಕೆಯ ಭ್ರೂಣವನ್ನು ‘ವೈದ್ಯಕೀಯವಾಗಿ ಮೃತಪಟ್ಟಿದೆ’ ಎಂದು ಘೋಷಿಸಲಾಗಿತ್ತು. ಆದರೆ ಆಕೆ ದೇವಸಹಾಯಂ ಅವರಲ್ಲಿ ಪ್ರಾರ್ಥನೆ ಮಾಡಿದ್ದಳು ಹಾಗೂ ಪವಾಡ ಸಂಭವಿಸಿ ಮಗವಿಗೆ ಜನ್ಮ ನೀಡಿದ್ದಳು ಎಂದು ಹೇಳಲಾಗಿತ್ತು.
ಈ ಅಚ್ಚರಿಯ ವಿದ್ಯಮಾನಕ್ಕೆ ಪೋಪ್ ಫ್ರಾನ್ಸಿಸ್ ಈಗ ಮನ್ನಣೆ ನೀಡಿದ್ದು, ದೇವಸಹಾಯಂ ಅವರಿಗೆ ಸಂತ ಪದವಿ ಪ್ರಕಟಿಸಿದ್ದಾರೆ.
ಈ ಮುಂಚೆ ದೇವಸಹಾಯಂ ಅವರ ಜಾತಿಯನ್ನು ‘ಪಿಳ್ಳೈ’ ಎಂದು ವ್ಯಾಟಿಕನ್, ನಮೂದಿಸಿತ್ತು. ಆದರೆ ಈ ರೀತಿ ಜಾತಿ ಹೆಸರು ಹಾಕಿದರೆ ಅವರ ಹೋರಾಟಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂಬ ಆಕ್ಷೇಪ ಕೇಳಿ ಬಂದ ಕಾರಣ ಜಾತಿ ಹೆಸರನ್ನು ತೆಗೆದು ಹಾಕಲಾಗಿತ್ತು
